ನವದೆಹಲಿ(ನ.11): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಸಾಧಿಸುವ ಸಾಧ್ಯತೆ ಹೆಚ್ಚಾಗಿ, ಮಹಾಗಠಬಂಧನಕ್ಕೆ ಹಿನ್ನಡೆ ಆಗುತ್ತಿದ್ದಂತೆಯೇ ಮತ್ತೊಮ್ಮೆ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ವಿಶ್ವಾಸಾರ್ಹತೆ ಬಗ್ಗೆ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಕೆಲವು ಕಾಂಗ್ರೆಸ್‌ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ಉಪಚುನಾವಣೆಯಲ್ಲೂ ಬಿಜೆಪಿ ಮುನ್ನಡೆ ಸಾಧಿಸಿರುವುದನ್ನು ಉಲ್ಲೇಖಿಸಿರುವ ದಿಗ್ವಿಜಯ್‌ ಸಿಂಗ್‌ ‘ಇವಿಎಂಗಳನ್ನು ತಿರುಚಲು ಸಾಧ್ಯವಿದೆ. ಈ ಕ್ಷೇತ್ರಗಳಲ್ಲಿ ಯಾವುದೇ ಕಾರಣಕ್ಕೂ ನಾವು ಸೋಲಲು ಸಾಧ್ಯವಿರಲಿಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಉದಿತ್‌ ರಾಜ್‌ ‘ಭೂಮಿಯಿಂದ ಸ್ಯಾಟಲೈಟ್‌ಗಳನ್ನು ನಿಯಂತ್ರಿಸಬಹುದಾದರೆ, ಇವಿಎಂಗಳನ್ನು ಹ್ಯಾಕ್‌ ಮಾಡದಿರಲು ಹೇಗೆ ಸಾಧ್ಯ?’ಎಂದು ಪ್ರಶ್ನಿಸಿದ್ದಾರೆ.

ಆದರೆ ಈ ಆರೋಪಕ್ಕೆ ಕಾಂಗ್ರೆಸ್‌ ಒಳಗೇ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್‌ ನಾಯಕ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ, ‘ಚುನಾವಣೆಯ ಫಲಿತಾಂಶ ಏನೇ ಆಗಿರಲಿ. ಇದು ಇವಿಎಂ ವಿರುದ್ಧದ ದೂಷಣೆಯನ್ನು ನಿಲ್ಲಿಸುವ ಸಮಯ. ನನ್ನ ಪ್ರಕಾರ ಇವಿಎಂ ಅತ್ಯಂತ ನಿಖರ ಮತ್ತು ವಿಶ್ವಾಸಾರ್ಹ ವ್ಯವಸ್ಥೆ’ ಎಂದಿದ್ದಾರೆ.