ದೆಹಲಿಯ ಚಾಣಕ್ಯಪುರಿಯಲ್ಲಿ ಸೋಮವಾರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಕಾಂಗ್ರೆಸ್‌ ಸಂಸದೆ ಸುಧಾ ರಾಮಕೃಷ್ಣನ್ ಅವರ ಸರವನ್ನು ಕಳ್ಳರು ಎಗರಿಸಿ ಕೈಚಳಕ ತೋರಿದ ಘಟನೆ ನಡೆದಿದೆ.

ನವದೆಹಲಿ: ದೆಹಲಿಯ ಚಾಣಕ್ಯಪುರಿಯಲ್ಲಿ ಸೋಮವಾರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಕಾಂಗ್ರೆಸ್‌ ಸಂಸದೆ ಸುಧಾ ರಾಮಕೃಷ್ಣನ್ ಅವರ ಸರವನ್ನು ಕಳ್ಳರು ಎಗರಿಸಿ ಕೈಚಳಕ ತೋರಿದ ಘಟನೆ ನಡೆದಿದೆ.

ಸದ್ಯ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ಮೈಲಾದುತುರೈ ಸಂಸದೆ ಸುಧಾ, ಡಿಎಂಕೆ ಶಾಸಕಿ ರಜಥಿ ಅವರೊಂದಿಗೆ ಬೆಳಿಗ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದರ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೂಡ ಅವರು ಪತ್ರ ಬರೆದಿದ್ದು , ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ‘ ಸ್ಕೂಟಿಯಲ್ಲಿ ಹೆಲ್ಮೆಟ್‌ ಧರಿಸಿ ಬಂದಿದ್ದ ವ್ಯಕ್ತಿ ಚಿನ್ನದ ಸರವನ್ನ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಸರವನ್ನು ಕಿತ್ತುಕೊಳ್ಳುವಾಗ ನನ್ನ ಕುತ್ತಿಗೆಗೆ ಗಾಯಗಳಾಗಿವೆ. ಸಂಸದೆಯಾಗಿರುವ ನನ್ನ ಮೇಲೆ ನಡೆದಿರುವ ದಾಳಿ ಆಘಾತಕಾರಿಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಇಂತಹ ಪ್ರದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ. ಇನ್ನು ‘4 ಗ್ರಾಂ ಚಿನ್ನದ ಸರ ಕಳುವಾಗಿದೆ. ದಯವಿಟ್ಟು ಹುಡುಕಿಕೊಡಿ’ ಎಂದು ಮನವಿ ಮಾಡಿದ್ದಾರೆ.