ನವದೆಹಲಿ(ಜು.24): ಭಾರತದೊಂದಿಗೆ ಗಡಿ ಹೊಂದಿಕೊಂಡಿರುವ ಯಾವುದೇ ದೇಶದಿಂದ ದೇಶದ ಯಾವುದೇ ಸರ್ಕಾರಿ ಸ್ವಾಮ್ಯದ ಕಂಪನಿಗಳು ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯುವುದನ್ನು ನಿಷೇಧಿಸಿ ಭಾರತ ಸರ್ಕಾರ ಹೊರಡಿಸಿದೆ. ಸಾಮಾನ್ಯ ಹಣಕಾಸು ಕಾಯ್ದೆ 2017ಕ್ಕೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ತಡರಾತ್ರಿ ಆದೇಶ ಹೊರಡಿಸಿದೆ.

ಭಾರತದ ರಕ್ಷಣೆ ಅಥವಾ ಪ್ರತ್ಯೆಕ್ಷ ಅಥವಾ ಪರೋಕ್ಷವಾಗಿ ದೇಶದ ಭದ್ರತೆಗೆ ಧಕ್ಕೆ ತರುವ ಕಾರಣ ನೀಡಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದೇಶದಲ್ಲಿ ಯಾವುದೇ ದೇಶಗಳ ಹೆಸರು ಹೇಳದೇ ಇದ್ದರೂ, ಅದು ನೇರವಾಗಿ ಚೀನಾ ದೇಶದ ಕಂಪನಿಗಳು ಭಾರತಕ್ಕೆ ಯಾವುದೇ ವಸ್ತುಗಳನ್ನು ರಫ್ತು ಮಾಡುವುದನ್ನು ತಡೆಯುವ ಉದ್ದೇಶ ಹೊಂದಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಅನ್ವಯ ಭಾರತದೊಂದಿಗೆ ಗಡಿ ಹೊಂದಿರುವ ದೇಶಗಳ ಸಂಸ್ಥೆಗಳು ಭಾರತದ ಯಾವುದೇ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಿಲ್ಲ.

ಚಳಿಗಾಲದಲ್ಲಿ ದಾಳಿ ನಡೆಸಲು ಚೀನಾ ಸಂಚು..? ಫ್ರಾನ್ಸ್‌ನಿಂದ ಹ್ಯಾಮರ್‌ ಕ್ಷಿಪಣಿ ಖರೀದಿಸಿದ ಭಾರತ

ಅದರೆ ಈ ತಿದ್ದುಪಡಿಯಲ್ಲಿ ಕೆಲವೊಂದು ವಿನಾಯ್ತಿ ನೀಡಲಾಗಿದೆ. ವೈದ್ಯಕೀಯ ಸಾಮಗ್ರಿಗಳು ಆಮದಿಗೆ ಪೂರ್ಣ ವಿನಾಯ್ತಿ ನೀಡಲಾಗಿದೆ. ಜೊತೆಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಮಂಡಳಿಯಲ್ಲಿ ನೊಂದಾಯಿತ ಕಂಪನಿಗಳಿಗೆ ರಫ್ತು ಮಾಡಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಭಾರತದಿಂದ ಆರ್ಥಿಕ ನೆರವು ಪಡೆಯುತ್ತಿರುವ ದೇಶಗಳಿಗೂ ವಿನಾಯ್ತಿ ನೀಡಲಾಗಿದೆ.