ಅಪರಾಧಿಗಳಿಗೆ ಕ್ಷಮಾದಾನ ನೀಡುವಾಗ ರಾಜ್ಯ ಸರ್ಕಾರಗಳು 'ಆಯ್ಕೆಯ ಮೊರೆ' ಹೋಗಬಾರದು ಮತ್ತು ಸುಧಾರಣೆಗೆ ಅವಕಾಶ ನೀಡುವುದಾದರೆ ಎಲ್ಲಾ ಅಪರಾಧಿಗಳಿಗೂ ನೀಡಬೇಕು ಎಂದು ಸುಪ್ರಿಂಕೋರ್ಟ್ ಗುರುವಾರ ಹೇಳಿದೆ.
ನವದೆಹಲಿ: ಅಪರಾಧಿಗಳಿಗೆ ಕ್ಷಮಾದಾನ ನೀಡುವಾಗ ರಾಜ್ಯ ಸರ್ಕಾರಗಳು 'ಆಯ್ಕೆಯ ಮೊರೆ' ಹೋಗಬಾರದು ಮತ್ತು ಸುಧಾರಣೆಗೆ ಅವಕಾಶ ನೀಡುವುದಾದರೆ ಎಲ್ಲಾ ಅಪರಾಧಿಗಳಿಗೂ ನೀಡಬೇಕು ಎಂದು ಸುಪ್ರಿಂಕೋರ್ಟ್ ಗುರುವಾರ ಹೇಳಿದೆ. ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಕ್ಷಮಾದಾನ ನೀಡಿ ಜೈಲಿಂದ ಬಿಡುಗಡೆ ಮಾಡಿದ ವಿಷಯವಾಗಿ ವಿಚಾರಣೆ ನಡೆಸುತ್ತಿರುವ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್ ಸೂಚನೆಯಂತೆ ಗುಜರಾತ್ ಸರ್ಕಾರದ (Gujarat Govt) ಪರವಾಗಿ ಪ್ರತಿಕ್ರಿಯೆ ಸಲ್ಲಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಈ 11 ಮಂದಿ ಅಪರಾಧಿಗಳು ನಡೆಸಿರುವುದು ಹೇಯ ಕೃತ್ಯ. ಆದರೆ ಅಪರೂಪದ ಪ್ರಕರಣವೆಂದು ಹೇಳುವ ಮೂಲಕ ಇವರಿಗೆ ಸುಧಾರಣೆಯಾಗಲು ಕ್ಷಮೆ ನೀಡಲಾಗಿದೆ. ಜನ ತಪ್ಪು ಮಾಡುವುದು ಸಾಮಾನ್ಯ. ಕೆಲವು ತಪ್ಪುಗಳು ಆ ಕ್ಷಣಕ್ಕೆ ಘಟಿಸುತ್ತವೆ. ಬಳಿಕ ಅವರಿಗೆ ತಪ್ಪಿನ ಅರಿವಾಗುತ್ತದೆ. ಇದನ್ನು ನಾವು ಈ ಅಪರಾಧಿಗಳು ಪೆರೋಲ್ ಹಾಗೂ ಫರ್ಲಾ ಮೇಲೆ ಬಿಡುಗಡೆಯಾದಾಗ ಗಮನಿಸಿದ್ದೇವೆ. ಕಾನೂನು ಇರುವುದು ಎಲ್ಲರಿಗೂ ಶಿಕ್ಷೆ ನೀಡುವುದಕ್ಕಲ್ಲ ಎಂದು ಹೇಳಿದರು.
ಬಿಲ್ಕಿಸ್ ಬಾನು ಪ್ರಕರಣ, ಯಾವ ಆಧಾರದಲ್ಲಿ ರೇಪಿಸ್ಟ್‌ಗಳಿಗೆ ಕ್ಷಮೆ : ಸುಪ್ರೀಂಕೋರ್ಟ್ ಪ್ರಶ್ನೆ
ಈ ಪ್ರತಿಕ್ರಿಯೆಯನ್ನು ಗಮನಿಸಿದ ದ್ವಿಸದಸ್ಯ ಪೀಠ, ‘ನಮ್ಮ ಜೈಲುಗಳೇಕೆ ಇಷ್ಟೊಂದು ಜನರಿಗೆ ತುಂಬಿದೆ? ಕ್ಷಮಾದಾನ ಪ್ರಕ್ರಿಯೆ ಎಲ್ಲರಿಗೂ ಏಕೆ ಅನ್ವಯವಾಗುವುದಿಲ್ಲ? ಸುಧಾರಣೆಯಾಗುವ ಅವಕಾಶ ನೀಡುವುದಾದರೆ ಎಲ್ಲರಿಗೂ ನೀಡಬೇಕು, ಕೆಲವರಿಗೆ ಮಾತ್ರವಲ್ಲ. 14 ವರ್ಷ ಶಿಕ್ಷೆ ಪೂರ್ಣಗೊಳಿಸಿದ ಎಲ್ಲಾ ಅಪರಾಧಿಗಳಿಗೂ ಕ್ಷಮಾದಾನ ನೀಡಲಾಗುತ್ತಿದೆಯೇ?’ ಎಂದು ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ರಾಜು, ಕ್ಷಮಾದಾನದ ಪ್ರಕ್ರಿಯೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ. ಹಾಗಾಗಿ ಎಲ್ಲಾ ರಾಜ್ಯಗಳು ಇದಕ್ಕೆ ಉತ್ತರಿಸಬೇಕು ಎಂದು ಹೇಳಿದರು. ಕೋರ್ಟ್ ಈ ವಿಚಾರಣೆಯನ್ನು ಆ.24ಕ್ಕೆ ಮುಂದೂಡಿತು.
Gujarat Riots: ಬಿಲ್ಕಿಸ್ ಬಾನೋ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್
