ದೆಹಲಿ ಮದ್ಯ ಹಗರಣ: ಜೈಲಿನಲ್ಲಿರುವ ಕೆಸಿಆರ್ ಪುತ್ರಿ ಸಿಬಿಐನಿಂದ ಅರೆಸ್ಟ್
ತೆಲಂಗಾಣದ ಶಾಸಕಿಯಾಗಿರುವ ಹಾಗೂ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿಯೂ ಆಗಿರುವ 46 ವರ್ಷದ ಕವಿತಾ ಅವರನ್ನು ಸದ್ಯ ಸಿಬಿಐ ತಿಹಾರ್ ಜೈಲಿನಲ್ಲಿಯೇ ಇರಿಸಿದ್ದು, ಇಂದು(ಶುಕ್ರವಾರ) ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ತನ್ನ ವಶಕ್ಕೆ ಕೇಳುವ ಸಾಧ್ಯತೆಯಿದೆ.
ನವದೆಹಲಿ(ಏ.12): ದೆಹಲಿ ಮದ್ಯ ಹಗರಣದಲ್ಲಿ ಈಗಾಗಲೇ ಜಾರಿ ನಿರ್ದೇಶನಾಲಯ (ಇ.ಡಿ.)ದಿಂದ ಬಂಧಿತರಾಗಿ ತಿಹಾರ್ ಜೈಲಿನಲ್ಲಿರುವ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕೆ.ಕವಿತಾ ಅವರನ್ನು ಸಿಬಿಐ ಗುರುವಾರ ಬಂಧಿಸಿದೆ.
ತೆಲಂಗಾಣದ ಶಾಸಕಿಯಾಗಿರುವ ಹಾಗೂ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿಯೂ ಆಗಿರುವ 46 ವರ್ಷದ ಕವಿತಾ ಅವರನ್ನು ಸದ್ಯ ಸಿಬಿಐ ತಿಹಾರ್ ಜೈಲಿನಲ್ಲಿಯೇ ಇರಿಸಿದ್ದು, ಶುಕ್ರವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ತನ್ನ ವಶಕ್ಕೆ ಕೇಳುವ ಸಾಧ್ಯತೆಯಿದೆ. ಕೋರ್ಟ್ ಕವಿತಾ ಅವರನ್ನು ಸಿಬಿಐ ವಶಕ್ಕೆ ನೀಡಿದರೆ ಸಿಬಿಐ ಅಧಿಕಾರಿಗಳು ಅವರನ್ನು ತಮ್ಮ ಕಚೇರಿಯ ಹೆಡ್ ಕ್ವಾರ್ಟರ್ಸ್‌ನಲ್ಲಿರುವ ಲಾಕಪ್‌ನಲ್ಲಿ ಇರಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಮನೆ ಊಟ, ಮೆತ್ತನೆಯ ಬೆಡ್ ಕೊಡ್ತಿಲ್ಲ... ಕೋರ್ಟ್ ಮೆಟ್ಟಿಲೇರಿದ ಕೆಸಿಆರ್ ಪುತ್ರಿ ಕೆ.ಕವಿತಾ!
ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವಿಶೇಷ ಕೋರ್ಟ್‌ನ ಅನುಮತಿ ಪಡೆದು ಕಳೆದ ಶನಿವಾರ ಜೈಲಿನಲ್ಲಿಯೇ ಕವಿತಾರನ್ನು ವಿಚಾರಣೆಗೆ ಒಳಪಡಿಸಿದ್ದರು. ದೆಹಲಿಯಲ್ಲಿ ಅಬಕಾರಿ ಲೈಸನ್ಸ್ ಪಡೆಯಲು ‘ಸೌತ್ ಗ್ರೂಪ್’ ಪರವಾಗಿ ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರು. ಲಂಚ ನೀಡಿರುವ ಬಗ್ಗೆ ಪ್ರಶ್ನಿಸಿದ್ದರು. ಹಗರಣದ ಆರೋಪಿ ಬುಚ್ಚಿ ಬಾಬುನ ಫೋನ್‌ನಲ್ಲಿ ದೊರೆತ ವಾಟ್ಸಾಪ್ ಚಾಟ್‌ಗಳು ಹಾಗೂ ಇನ್ನಿತರ ದಾಖಲೆಗಳಲ್ಲಿ ಕವಿತಾ ತಪ್ಪೆಸಗಿರುವ ಬಗ್ಗೆ ಸಿಬಿಐಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಸಿಬಿಐ ಗುರುವಾರ ಬಂಧಿಸಿದೆ.
ಇ.ಡಿ. ಅಧಿಕಾರಿಗಳು ಮಾ.15ರಂದು ಹೈದರಾಬಾದ್‌ನಲ್ಲಿ ಕವಿತಾ ಅವರನ್ನು ಇದೇ ಹಗರಣದಲ್ಲಿ ಬಂಧಿಸಿದ್ದರು.