ನವದೆಹಲಿ[ಫೆ.09]: ಹೊಸ ಸಂಸತ್‌ ಕಟ್ಟಡ ನಿರ್ಮಾಣವಾಗುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ, ಹೊಸ ಸುಪ್ರೀಂ ಕೋರ್ಟ್‌ ಕಟ್ಟಡಕ್ಕೂ ಬೇಡಿಕೆ ಕೇಳಿಬಂದಿದೆ.

17 ಎಕರೆ ವಿಶಾಲ ವ್ಯಾಪ್ತಿಯಲ್ಲಿ 1958ರಲ್ಲಿ ನಿರ್ಮಿತವಾದ ಸುಪ್ರೀಂ ಕೋರ್ಟ್‌ ಕಟ್ಟಡ ಈಗ ಯಾತಕ್ಕೂ ಸಾಲುತ್ತಿಲ್ಲ. ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಅದಕ್ಕೆಂದೇ ಸುಪ್ರೀಂ ಕೋರ್ಟ್‌ಗೆ ಹೊಸ ಕಟ್ಟಡ ಬೇಕು ಎಂಬ ಬೇಡಿಕೆಯನ್ನು ಭಾರತದ ಮುಖ್ಯ ನ್ಯಾಯಾಧೀಶ ಎಸ್‌.ಎ.ಬೋಬ್ಡೆ ಅವರು ಸರ್ಕಾರದ ಮುಂದೆ ಇಟ್ಟಿದ್ದಾರೆ.

ಶುಕ್ರವಾರ ‘ಸುಪ್ರೀಂ ಕೋರ್ಟ್‌ ಕಲಾಪಗಳ ಟೀವಿ ನೇರಪ್ರಸಾರ’ ವಿಷಯಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಯಿತು.

ಅಟಾರ್ನಿ ಜನರಲ್‌ ಆಗಿರುವ 89 ವರ್ಷದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್‌ ಅವರು, ‘ನನಗೆ ಜನಜಂಗುಳಿಯ ಮಧ್ಯೆ ತಳ್ಳಾಡಿಕೊಂಡು ಕಲಾಪಕ್ಕೆ ಬರಲು ಸಾಕಾಗಿ ಹೋಗುತ್ತವೆ. ಇದು ಅವಮಾನ. ಜನರು ಕೆಲವೊಮ್ಮೆ ನನ್ನನ್ನು ತುಳಿದೇ ಬಿಡುತ್ತಾರೆ ಎನ್ನಿಸುತ್ತದೆ’ ಎಂದು ಕೋರ್ಟ್‌ನ ತ್ರಿಸದಸ್ಯ ಪೀಠದ ಗಮನಕ್ಕೆ ತಂದರು.

ಆಗ ಮಧ್ಯಪ್ರವೇಶಿಸಿದ ಹಿರಿಯ ವಕೀಲೆ ಇಂದಿರಾ ಸಿಂಗ್‌, ‘ಹೊಸ ಸಂಸತ್ತು ಕಟ್ಟಲಾಗುತ್ತಿದೆ. ಹೊಸ ಸುಪ್ರೀಂ ಕೋರ್ಟ್‌ ಕಟ್ಟಡ ಯಾಕಾಗಬಾರದು?’ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಸಹಮತ ವ್ಯಕ್ತಪಡಿಸಿದ ನ್ಯಾ| ಬೋಬ್ಡೆ ಅವರ ಪೀಠ, ‘ಜನಸಂದಣಿ ಹಿನ್ನೆಲೆಯಲ್ಲಿ ಹೊಸ ಸುಪ್ರೀಂ ಕೋರ್ಟ್‌ ಕಟ್ಟಡ ನಿರ್ಮಾಣವಾದರೆ ನಮಗೆ ತಕರಾರೇನೂ ಇಲ್ಲ. ಅಟಾರ್ನಿ ಜನರಲ್‌ ಅವರು ಈ ಬಗ್ಗೆ ಸರ್ಕಾರಕ್ಕೆ ತಿಳಿಸಬೇಕು. ಸರ್ಕಾರವು ಇದಕ್ಕಾಗಿ ದುಡ್ಡು ಹಾಗೂ ಜಮೀನು ಕೊಡಬೇಕಾಗುತ್ತದೆ’ ಎಂದರು.

ಕೋರ್ಟ್‌ ಕಟ್ಟಡ ಏಕೆ ಬೇಕು?

- 1958ರಲ್ಲಿ ನಿರ್ಮಾಣವಾದ ಈಗಿನ ಸುಪ್ರೀಂ ಕೋರ್ಟ್‌ ಕಟ್ಟಡ ಮೊದಲು 7 ಕಲಾಪ ಕೊಠಡಿಗಳನ್ನು ಹೊಂದಿತ್ತು. ಅದೀಗ 16ಕ್ಕೇರಿದೆ.

- ಅಂದು 7 ಜಡ್ಜ್‌ಗಳಿದ್ದರು. ಇಂದು 34 ನ್ಯಾಯಾಧೀಶರಿದ್ದಾರೆ.

- 1960ರವರೆಗೆ ಕೇಲವೇ ನೂರರಷ್ಟುಕೇಸುಗಳಿದ್ದವು. ಈಗ ಕೇಸುಗಳ ಸಂಖ್ಯೆ 50 ಸಾವಿರ.

- ಪ್ರತಿ ಸೋಮವಾರ ಹಾಗೂ ಶುಕ್ರವಾರ 1000 ಕೇಸು ವಿಚಾರಣೆ ಇರುತ್ತದೆ.

- ಕೆಲವೇ ನೂರು ಇದ್ದ ವಕೀಲರ ಸಂಖ್ಯೆ ಈಗ 3 ಸಾವಿರಕ್ಕೇರಿದೆ.