Asianet Suvarna News Asianet Suvarna News

ಬೈಕ್‌ ಟ್ಯಾಕ್ಸಿ: Rapido, Ola, Uber ಸಂಸ್ಥೆಗೆ ಆಘಾತ ನೀಡಿದ ಸುಪ್ರೀಂ ಕೋರ್ಟ್‌ ಆದೇಶ!

Immediate ban on bike taxis in Delhi: ದೆಹಲಿಯಲ್ಲಿ ಬೈಕ್‌ ಟ್ಯಾಕ್ಸಿ ವಿಚಾರವಾಗಿ ಅಧಿಕೃತ ನಿಯಮ ಬರುವವರೆಗೂ ಈ ಸೇವೆ ನೀಡುವಂತಿಲ್ಲ ಎಂದು ಕ್ಯಾಬ್‌ ಅಗ್ರಿಗೇಟರ್‌ಗಳಾದ ರಾಪಿಡೋ, ಓಲಾ ಹಾಗೂ ಉಬರ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

Supreme Court orders Immediate ban on bike taxis in Delhi  big blow to Rapido Uber Ola san
Author
First Published Jun 12, 2023, 7:46 PM IST | Last Updated Jun 12, 2023, 7:46 PM IST

ನವದೆಹಲಿ (ಜೂ.12):ದೆಹಲಿಯಲ್ಲಿ ಓಲಾ, ಉಬರ್ ಮತ್ತು ರಾಪಿಡೊ ಬೈಕ್ ಟ್ಯಾಕ್ಸಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ದೆಹಲಿ ಸರ್ಕಾರ ಟ್ಯಾಕ್ಸಿ ಕಾರ್ಯಾಚರಣೆ ನೀತಿಯನ್ನು ರೂಪಿಸುವವರೆಗೆ ಕಂಪನಿಗಳು ಕಾಯಬೇಕು ಎಂದು ಹೇಳಿದೆ. ಇದೇ ವೇಳೆ,  ಜೂನ್ 30 ರ ಒಳಗಾಗಿ ದ್ವಿಚಕ್ರ ವಾಹನಗಳ ಟ್ಯಾಕ್ಸಿಗಳ ಕಾರ್ಯಾಚರಣೆಗೆ ನೀತಿಯನ್ನು ಮಾಡಲಾಗುವುದು ಎಂದು ದೆಹಲಿ ಸರ್ಕಾರ ಹೇಳಿದೆ. ಬೈಕ್‌ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಸಂಬಂಧಿಸಿದ ನೀತಿಯನ್ನು ಅಂತಿಮಗೊಳಿಸುವವರೆಗೆ ಬೈಕ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಬಾರದು ಎಂದು ದೆಹಲಿ ಸರ್ಕಾರ ಹೇಳಿತ್ತು. ಇದರ ವಿರುದ್ಧ ರಾಪಿಡೊ ಮತ್ತು ಉಬರ್ ಕಂಪನಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ದೆಹಲಿ ಸರ್ಕಾರದ ಈ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿತ್ತು. ಇದರೊಂದಿಗೆ, ನೀತಿಯನ್ನು ಅಂತಿಮಗೊಳಿಸುವವರೆಗೆ ಅಗ್ರಿಗೇಟರ್‌ಗಳಿಗೆ ಸೇವೆಗಳನ್ನು ಮುಂದುವರಿಸಲು ನಿರ್ಧಾರವನ್ನು ನೀಡಲಾಯಿತು. ಬೈಕ್ ಟ್ಯಾಕ್ಸಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ಬಂಧವೂ ಇತ್ತು.

ಮೇ 26 ರಂದು ದೆಹಲಿ ಸರ್ಕಾರವು ಹೈಕೋರ್ಟ್‌ನ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ರಜಾಕಾಲದ ಪೀಠವು ದೆಹಲಿ ಸರ್ಕಾರದ ಪರವಾಗಿ ತೀರ್ಪು ನೀಡಿ ದೆಹಲಿ ಹೈಕೋರ್ಟ್‌ನ ತೀರ್ಪನ್ನು ತಡೆಹಿಡಿಯಿತು.

ಸೂಕ್ತವಾದ ಪರ್ಮಿಟ್‌ ಹಾಗೂ ಲೈಸೆನ್ಸ್‌ ಇಲ್ಲದೆ ದೆಹಲಿಯಲ್ಲಿ ಬೇಕಾಬಿಟ್ಟಿಯಾಗಿ ಕ್ಯಾಬ್‌ ಅಗ್ರಿಗೇಟರ್‌ಗಳು ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದಾರೆ  ಎಂದು ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತು. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 93 ರಲ್ಲಿ ಅಗ್ರಿಗೇಟರ್‌ಗೆ ವಾಣಿಜ್ಯ ಪರವಾನಗಿ ಅಗತ್ಯವಿದೆ. ಈಗಿರುವ ಮಾರ್ಗಸೂಚಿಗಳು ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳಿಗೆ ಮಾತ್ರ ಎಂಬುದು ದೆಹಲಿ ಸರ್ಕಾರದ ವಾದವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಲೈಸೆನ್ಸ್‌ ಇಲ್ಲದೆ ಸಾರಿಗೆಗಾಗಿ ದ್ವಿಚಕ್ರ ವಾಹನಗಳನ್ನು ಬಳಸುವಂತಿಲ್ಲ. ಅದಕ್ಕಾಗಿ ಸೂಕ್ತ ನಿಯಮಗಳ ಅಗತ್ಯವಿದೆ ಎಂದು ಹೇಳಿತ್ತು.

ಬೈಕ್ ಟ್ಯಾಕ್ಸಿಗಳನ್ನು ಸಾವಿರಾರು ಸವಾರರು ಬಳಸುತ್ತಿದ್ದಾರೆ ಎಂದು Rapido ಮತ್ತು Uber ಹೇಳಿದೆ. ದೆಹಲಿ ಸರ್ಕಾರದ ನಿರ್ಧಾರವು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಲಿದೆ. ವಾಣಿಜ್ಯ/ಸಾರಿಗೆ ಸೇವೆಗಾಗಿ ತೊಡಗಿಸಿಕೊಂಡಿರುವ ಖಾಸಗಿ ದ್ವಿಚಕ್ರ ವಾಹನಗಳಿಗೆ ನೀತಿಯನ್ನು ರೂಪಿಸಿ ಪರವಾನಗಿ ಪಡೆಯುವವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ದ್ವಿಚಕ್ರ ವಾಹನಗಳನ್ನು ಅಗ್ರಿಗೇಟರ್‌ಗಳ ಅಡಿಯಲ್ಲಿ ಓಡಿಸಲು ಪರವಾನಗಿ ಅಗತ್ಯ ಎಂದು ವಿಚಾರಣೆಯ ವೇಳೆ ಕೇಂದ್ರ ಸರ್ಕಾರ ಹೇಳಿದೆ.

ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವ ಹಿಂದೆ ದೆಹಲಿ ಸರ್ಕಾರದ ವಾದವೆಂದರೆ ವಾಣಿಜ್ಯ ನೋಂದಣಿ ಹೊಂದಿರುವ ವಾಹನಗಳನ್ನು ಮಾತ್ರ ಟ್ಯಾಕ್ಸಿಗಳಾಗಿ ಬಳಸಬಹುದು, ಆದರೆ ಟ್ಯಾಕ್ಸಿಗಳಾಗಿ ಓಡುವ ಬೈಕ್‌ಗಳು ವಾಣಿಜ್ಯವಲ್ಲ ಆದರೆ ಖಾಸಗಿ ನೋಂದಣಿಯನ್ನು ಹೊಂದಿವೆ. ಸಾರಿಗೆ ಸಚಿವಾಲಯವು ಬೈಕ್ ಟ್ಯಾಕ್ಸಿಗಳ ಬಳಕೆಯ ವಿರುದ್ಧ ಅಗ್ರಿಗೇಟರ್‌ಗಳಿಗೆ ಎಚ್ಚರಿಕೆ ನೀಡಿದ್ದು, ಹೀಗೆ ಮಾಡುವುದು 1988 ರ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಆದೇಶವನ್ನು ಉಲ್ಲಂಘಿಸುವವರಿಗೆ 1 ಲಕ್ಷದವರೆಗೆ ದಂಡ ವಿಧಿಸಬಹುದು ಎನ್ನುವ ನಿಯಮವಿದೆ ಎಂದು ತಿಳಿಸಿದೆ.

ರ್ಯಾಪಿಡೋ ವೈಟ್‌ಬೋರ್ಡ್‌ ಸ್ಕೂಟರ್‌ ಟ್ಯಾಕ್ಸಿ ರದ್ದುಗೊಳಿಸಲು ಆಗ್ರಹ

2015 ರಿಂದ, ಬೈಕ್ ಟ್ಯಾಕ್ಸಿ ಸೇವೆಯನ್ನು ಒದಗಿಸುವ ಸ್ಟಾರ್ಟಪ್‌ಗಳು ದೇಶದಲ್ಲಿ ಪ್ರಾರಂಭವಾದವು. 2017 ರ ಹೊತ್ತಿಗೆ, 40 ಕಂಪನಿಗಳು ಈ ಕ್ಷೇತ್ರವನ್ನು ಪ್ರವೇಶಿಸಿವೆ. ಹಾಗಿದ್ದರೂ, ಓಲಾ ಬೈಕ್, ಉಬರ್ ಮೋಟೋ ಮತ್ತು ರಾಪಿಡೊ ಪ್ರಮುಖವಾಗಿ ಉಳಿದುಕೊಂಡಿದೆ. ಬೈಕ್ ಟ್ಯಾಕ್ಸಿ ಮಾರುಕಟ್ಟೆಯು 33 ಸಾವಿರ ಕೋಟಿಗೂ ಹೆಚ್ಚು ಆದಾಯವನ್ನು ಗಳಿಸಬಹುದು ಮತ್ತು 20 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡಬಹುದು ಎಂದು ಓಲಾ ಮೊಬಿಲಿಟಿ ಇನ್‌ಸ್ಟಿಟ್ಯೂಟ್ ವರದಿ ಹೇಳುತ್ತದೆ.

 

Bengaluru: ರ‍್ಯಾಪಿಡೋ-ಬೌನ್ಸ್ ಬೈಕ್‌, ಟ್ಯಾಕ್ಸಿಗಳ ಸೇವೆ ರದ್ದತಿಗೆ ಆಗ್ರಹಿಸಿ ಆಟೋ ಚಾಲಕ ವಿಷ ಸೇವನೆ: ಆಸ್ಪತ್ರೆಗೆ ದಾಖಲು

Latest Videos
Follow Us:
Download App:
  • android
  • ios