ಚೆನ್ನೈ ಟೆಸ್ಟ್‌ ಗೆಲುವಿನ ಬೆನ್ನಲ್ಲೇ ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್‌ಗೆ ಭಾರತ ಕ್ರಿಕೆಟ್ ತಂಡ ಪ್ರಕಟ!

ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್‌ಗೆ 15 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ಸೆಪ್ಟೆಂಬರ್ 27ರಿಂದ ಕಾನ್ಪುರದಲ್ಲಿ ಎರಡನೇ ಟೆಸ್ಟ್‌ ಆರಂಭವಾಗಲಿದೆ

BCCI Announces India Squad For Kanpur 2nd Test Against Bangladesh kvn

ಮುಂಬೈ: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ ಪಂದ್ಯವನ್ನು 280 ರನ್ ಅಂತರದಿಂದ ಜಯಿಸಿದೆ. ಇದೀಗ ಎರಡನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯಕ್ಕೆ ಬಿಸಿಸಿಐ ಆಯ್ಕೆ ಸಮಿತಿ 15 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ ಪಂದ್ಯವು ಸೆಪ್ಟೆಂಬರ್ 27ರಿಂದ ಕಾನ್ಪುರದಲ್ಲಿ ಆರಂಭವಾಗಲಿದೆ. 

ಎರಡನೇ ಟೆಸ್ಟ್‌ ಪಂದ್ಯದಿಂದ ಕೆ ಎಲ್ ರಾಹುಲ್ ಅವರನ್ನು ಕೈಬಿಡುವ ಸಾಧ್ಯತೆಯಿದೆ ಎನ್ನುವ ಚರ್ಚೆ ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿತ್ತು. ಏಕೆಂದರೆ ಚೆಪಾಕ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ರಾಹುಲ್ ಅವರಿನಿಂದ ಮೊದಲ ಇನಿಂಗ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಹೀಗಿದ್ದೂ ಬಿಸಿಸಿಐ ಆಯ್ಕೆ ಸಮಿತಿಯು ರಾಹುಲ್‌ಗೆ ಮತ್ತೊಂದು ಅವಕಾಶ ನೀಡಲು ತೀರ್ಮಾನಿಸಿದೆ. ಆದರೆ ಕಾನ್ಪುರ ಟೆಸ್ಟ್‌ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಸರ್ಫರಾಜ್ ಖಾನ್ ಅಥವಾ ಕೆ ಎಲ್ ರಾಹುಲ್ ಈ ಇಬ್ಬರಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಬಾಂಗ್ಲಾದೇಶ ಎದುರಿನ ಚೆನ್ನೈ ಟೆಸ್ಟ್‌ ಗೆಲುವಿನ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ಎದುರು ಯಾವ ರೀತಿಯಲ್ಲಿ ಆಡಿದ್ದೆವೋ ಅದೇ ರೀತಿಯ ಪ್ರದರ್ಶನವನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಅನುಭವಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅದ್ಭುತ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

92 ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ!

515 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ತತ್ತರಿಸಿ 234 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತ 280 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತು. ಅಶ್ವಿನ್ ಎರಡನೇ ಇನಿಂಗ್ಸ್‌ನಲ್ಲಿ 88 ರನ್ ನೀಡಿ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 144 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಸಂದರ್ಭದಲ್ಲಿ ಕ್ರೀಸ್‌ಗಿಳಿದ ಅಶ್ವಿನ್, ಜಡೇಜಾ ಜತೆಗೂಡಿ 7ನೇ ವಿಕೆಟ್‌ಗೆ 199 ರನ್‌ಗಳ ಜತೆಯಾಟವಾಡಿದರು. ಅಶ್ವಿನ್ 133 ಎಸೆತಗಳನ್ನು ಎದುರಿಸಿ 113 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು.

ಇದೀಗ ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್‌ ಪಂದ್ಯಕ್ಕೆ ಮೊದಲ ಪಂದ್ಯಕ್ಕೆ ಆಯ್ಕೆ ಮಾಡಿದ ತಂಡವನ್ನೇ ಮತ್ತೆ ಆಯ್ಕೆ ಮಾಡಿದೆ. ಕಾನ್ಪುರ ಟೆಸ್ಟ್‌ಗೆ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್(ವಿಕೆಟ್ ಕೀಪರ್), ಧೃವ್ ಜುರೆಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್‌ ದಯಾಲ್.

Latest Videos
Follow Us:
Download App:
  • android
  • ios