* ವಿಶ್ವಾಸಕ್ಕೆ ಮುನ್ನವೇ ಬಿದ್ಧವ್ ಠಾಕ್ರೆ* ಫಡ್ನವೀಸ್ ಸಿಎಂ?, ನಾಳೆಯೇ ಪ್ರಮಾಣ ವಚನ ಸ್ವೀಕಾರ* 2.5 ವರ್ಷದ ಅಘಾಡಿ ಸರ್ಕಾರ ಪತನ* ಶಿಂಧೆ ಡಿಸಿಎಂ, ಜತೆಗೆ ಬಣಕ್ಕೆ 12 ಮಂತ್ರಿಗಿರಿ?
ನವದೆಹಲಿ(ಜೂ.30): ಮಹಾರಾಷ್ಟ್ರದ ಮಹಾ ಅಘಾಡಿ ಸರ್ಕಾರದ ಭಾಗವಾಗಿದ್ದ ಶಿವಸೇನೆಯಲ್ಲಿ 10 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಭಾರೀ ಬಂಡಾಯ, ಬುಧವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರವನ್ನು ಪತನಗೊಳಿಸುವಲ್ಲಿ ಯಶಸ್ವಿಯಾಗಿದೆ. ಸಿಎಂ ಉದ್ಧವ್ ಠಾಕ್ರೆಗೆ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲ ಕೋಶಿಯಾರಿ ಬುಧವಾರ ಬೆಳಗ್ಗೆಯಷ್ಟೇ ನೀಡಿದ್ದ ಆದೇಶಕ್ಕೆ ತಡೆ ನೀಡಲು ಬುಧವಾರ ರಾತ್ರಿ ಸುಪ್ರೀಂಕೋರ್ಚ್ ನಿರಾಕರಿಸಿದ ಬೆನ್ನಲ್ಲೇ, ವಿಶ್ವಾಸಮತ ಕಳೆದುಕೊಂಡಿದ್ದ ಉದ್ಧವ್ ಠಾಕ್ರೆ ಅನ್ಯಮಾರ್ಗವಿಲ್ಲದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಎರಡೂವರೆ ಅಧಿಕಾರ ನಡೆಸಿದ್ದ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡಿದೆ. ಹೀಗಾಗಿ ಎರಡು ವಾರಗಳಿಂದ ಮೂರು ರಾಜ್ಯಗಳಿಗೆ ಹರಡಿಕೊಂಡಿದ್ದ ಹೈಡ್ರಾಮಕ್ಕೆ ಕೊನೆಗೂ ತೆರೆ ಬಿದ್ದಿದೆ.
ಮಹಾರಾಷ್ಟ್ರದ ಮುಂದಿನ ಬೆಳವಣಿಗೆಗಳು, ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶಿವಸೇನೆ ವಿಪ್ ಸಲ್ಲಿಸಿರುವ ಅರ್ಜಿಯ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಸುಪ್ರೀಂಕೋರ್ಚ್ ಸ್ಪಷ್ಟಪಡಿಸಿದೆಯಾದರೂ, ತಕ್ಷಣಕ್ಕೆ ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಗೆ ಯಾವುದೇ ಅಡ್ಡಿ ಇಲ್ಲ. ಹೀಗಾಗಿ ಮುಂದಿನ 50ಕ್ಕೂ ಹೆಚ್ಚು ಶಾಸಕರ ಬೆಂಬಲ ಹೊಂದಿರುವ ಏಕನಾಥ್ ಶಿಂಧೆ ಅವರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆಗೆ ಕ್ಷಣಗಣನೆ ಆರಂಭವಾಗಿದೆ.
ವಿಶ್ವಾಸಮತಕ್ಕೆ ಸೂಚನೆ:
ಮಂಗಳವಾರ ರಾತ್ರಿಯಷ್ಟೇ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಭೇಟಿ ಮಾಡಿ, ಉದ್ಧವ್ ಠಾಕ್ರೆ ಸರ್ಕಾರ ಬಹುಮತ ಕಳೆದುಕೊಂಡಿದ್ದು, ವಿಶ್ವಾಸಮತ ಯಾಚನೆಗೆ ಸೂಚಿಸಬೇಕು ಎಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ರವಾನಿಸಿದ್ದ ರಾಜ್ಯಪಾಲರು ಜೂ.30ರ ಬೆಳಗ್ಗೆ 11ಕ್ಕೆ ವಿಶ್ವಾಸಮತ ಯಾಚಿಸುವಂತೆ ಸಿಎಂಗೆ ಸೂಚಿಸಿದ್ದರು.
ಸುಪ್ರೀಂಗೆ ಮೊರೆ:
ರಾಜ್ಯಪಾಲರ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಹಾ ಅಘಾಡಿ ಸರ್ಕಾರ, ‘ವಿಶ್ವಾಸಮತ ಕರೆದಿರುವ ರಾಜ್ಯಪಾಲರ ನಡೆ ಸಂವಿಧಾನಬಾಹಿರ. ಒಂದು ಕಡೆ ಶಾಸಕರ ಅನರ್ಹತೆ ವಿಷಯ ಇನ್ನೂ ಸುಪ್ರೀಂ ಕೋರ್ಚ್‌ನಲ್ಲಿದ್ದು, ಜು.11ಕ್ಕೆ ವಿಚಾರಣೆ ನಿಗದಿ ಆಗಿದೆ. ಇಂಥದ್ದರಲ್ಲಿ ರಾಜ್ಯಪಾಲರು ಆತುರರಾತುರವಾಗಿ ವಿಶ್ವಾಸಮತ ಸಾಬೀತಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ತಡೆ ನೀಡಬೇಕು ಎಂದು ಕೋರಿದರು. ಆದರೆ ಈ ವಾದವನ್ನು ಶಿವಸೇನೆಯ ಬಂಡಾಯ ಬಣ ಮತ್ತು ರಾಜ್ಯಪಾಲರ ಪರವಾಗಿ ಹಾಜರಾಗಿದ್ದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ವಿರೋಧಿಸಿದರು.
ತಡೆಗೆ ನಕಾರ:
ಎರಡೂ ಬಣಗಳ ವಾದ ಆಲಿಸಿ ನ್ಯಾ.ಸೂರ್ಯಕಾಂತ್ ಮತ್ತು ನ್ಯಾ. ಜೆ.ಪಿ.ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠ, ಗುರುವಾರ ನಿಗದಿಯಾಗಿರುವ ವಿಶ್ವಾಸಮತ ಯಾಚನೆಗೆ ತಡೆ ನೀಡಲು ನಿರಾಕರಿಸಿತು. ಜೊತೆಗೆ ಗುರುವಾರ ವಿಧಾನಸಭೆಯಲ್ಲಿ ನಡೆಯಲಿರುವ ಬೆಳವಣಿಗೆಗಳು, ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಶಿವಸೇನೆ ಸಲ್ಲಿಸಿರುವ ಅರ್ಜಿಯ ತೀರ್ಪಿಗೆ ಒಳಪಟ್ಟಿರಲಿದೆ. ಈ ಅರ್ಜಿ ಮತ್ತು ವಿಪ್ ಸುರೇಶ್ ಪ್ರಭು ಹಾಗೂ ಏಕನಾಥ್ ಶಿಂಧೆ ಸಲ್ಲಿಸಿರುವ ಅರ್ಜಿಗಳನ್ನು ಜು.11ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದತು. ಅಲ್ಲದೆ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿರುವ ಅರ್ಜಿ ಬಗ್ಗೆ ವಿಧಾನಸಭೆಯ ಮುಖ್ಯ ಕಾರ್ಯದರ್ಶಿ ಮತ್ತು ಇತರರಿಗೆ ನೋಟಿಸ್ ನೀಡಿತು. ಇದಕ್ಕೆ ನೀವು 5 ದಿನಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬಹುದು. ಎಲ್ಲಾ ಅರ್ಜಿಗಳನ್ನೂ ನಾವು ಜು.11ಕ್ಕೆ ಒಟ್ಟಾಗಿ ವಿಚಾರಣೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿತು.
ವಿದಾಯ ಭಾಷಣ:
ಸುಪ್ರೀಂ ತೀರ್ಪಿಗೂ ಮುನ್ನ ಸಂಪುಟ ಸಭೆ ನಡೆಸಿದ್ದ ಉದ್ಧವ್ ಠಾಕ್ರೆ ಅಲ್ಲೂ ವಿದಾಯ ಭಾಷಣ ಮಾಡಿದ್ದು, ಎರಡೂವರೆ ವರ್ಷ ಸಹಕಾರ ನೀಡಿದ್ದಕ್ಕೆ ಸಹದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ‘ಕಳೆದ ಎರಡೂವರೆ ವರ್ಷಗಳಲ್ಲಿ ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೀರಿ. ಇದಕ್ಕಾಗಿ ನಾನು ನಿಮಗೆ ಎಂದೆಂದಿಗೂ ಕೃತಜ್ಞ. ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ’ ಎಂದು ಭಾವನಾತ್ಮಕವಾಗಿ ಕೇಳಿಕೊಂಡಿದ್ದಾರೆ. ಸಭೆಯಲ್ಲಿ ಭಾಗಿಯಾಗಿದ್ದ ಸಚಿವ ಸುನಿಲ್ ಕೇದರ್ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಶಿಂಧೆ ಡಿಸಿಎಂ, ಜತೆಗೆ ಬಣಕ್ಕೆ 12 ಮಂತ್ರಿಗಿರಿ?
ಮುಂಬೈ: ಮಹಾ ಅಘಾಡಿ ಸರ್ಕಾರದ ಪತನದ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಬಿರುಸುಗೊಂಡಿದೆ. 50 ಶಾಸಕರ ಬಲ ಹೊಂದಿರುವ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರ ಬೆಂಬಲದೊಂದಿಗೆ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಜು.1ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಹೊಸ ಸಂಪುಟದಲ್ಲಿ ಶಿಂಧೆಗೆ ಉಪ ಮುಖ್ಯಮಂತ್ರಿ ಹುದ್ದೆ ಸೇರಿ ಒಟ್ಟು 12 ಸಚಿವ ಸ್ಥಾನ ನೀಡಲಾಗುವುದು ಎನ್ನಲಾಗಿದೆ. ಇದರೊಂದಿಗೆ ಮತ್ತೊಂದು ದೊಡ್ಡ ರಾಜ್ಯ ಮರಳಿ ಬಿಜೆಪಿ ತೆಕ್ಕೆಗೆ ಬಂದಂತೆ ಆಗಲಿದೆ.
ನಿನ್ನೆ ಆಗಿದ್ದೇನು?
- ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆ ಮಾಡಿ
- ಉದ್ಧವ್ ಠಾಕ್ರೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಆದೇಶ
- ಇದರ ವಿರುದ್ಧ ಮಹಾ ಅಘಾಡಿ ಮೈತ್ರಿಕೂಟ ಸುಪ್ರೀಂಕೋರ್ಟಿಗೆ
- ಸುಪ್ರೀಂಕೋರ್ಟಿನಲ್ಲಿ ಎರಡೂ ಬಣಗಳ ಸುದೀರ್ಘ ವಾದ-ವಿವಾದ
- ಕಡೆಗೆ ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ನಿರಾಕರಣೆ
- ವಿಶ್ವಾಸಮತದಲ್ಲಿ ಸೋಲು ಖಚಿತ ಎಂದರಿತ ಉದ್ಧವ್ ರಾಜೀನಾಮೆ
ನನಗೆ ದ್ರೋಹ ಮಾಡಿದರು
ನಾವೆಲ್ಲರೂ ಸುಪ್ರೀಂಕೋರ್ಚ್ ಆದೇಶ ಪಾಲಿಸಬೇಕು. ಮುಖ್ಯಮಂತ್ರಿ ಸ್ಥಾನ ಮತ್ತು ವಿಧಾನ ಪರಿಷತ್ ಸ್ಥಾನ ಎರಡಕ್ಕೂ ನಾನು ರಾಜೀನಾಮೆ ನೀಡುತ್ತಿದ್ದೇನೆ. ಏಕೆಂದರೆ ನಾಳೆ ಶಿವ ಸೈನಿಕರ ಕೈಯಲ್ಲಿ ರಕ್ತ ಕಾಣುವುದಕ್ಕೆ ನಾನು ಬಯಸುವುದಿಲ್ಲ. ಯಾರನ್ನು ನಾವು ಬೆಳೆಸಿದೆವೋ, ಯಾರನ್ನು ನಾವು ಉತ್ತೇಜಿಸಿದೆವೋ ಅವರೇ ನಮಗೆ ದ್ರೋಹ ಮಾಡಿದರು. ನಾನು ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದೆ, ಅದೇ ರೀತಿ ತೆರಳುತ್ತಿದ್ದೇನೆ. ಸೇನೆ ಯಾವಾಗಲೂ ಒಂದೇ ಕುಟುಂಬವಿದ್ದಂತೆ, ಅದನ್ನು ಯಾವುದೇ ಕಾರಣಕ್ಕೂ ಹರಿದುಹೋಗಲು ಬಿಡುವುದಿಲ್ಲ. ನಾನು ಎಲ್ಲಿಗೂ ಹೋಗುವುದಿಲ್ಲ. ಮತ್ತೆ ಎಲ್ಲಾ ನನ್ನೆಲ್ಲಾ ಬೆಂಬಲಿಗರನ್ನು ಒಟ್ಟುಗೂಡಿಸುತ್ತೇನೆ. ನನಗೆ ಸಿಎಂ ಆಗಲು ಅವಕಾಶ ಕೊಟ್ಟಸೋನಿಯಾ ಗಾಂಧಿ ಮತ್ತು ಅಜಿತ್ ಪವಾರ್‌ಗೆ ವಂದನೆಗಳು.
- ಉದ್ಧವ್ ಠಾಕ್ರೆ, ನಿರ್ಗಮಿತ ಮುಖ್ಯಮಂತ್ರಿ
