ದಕ್ಷಿಣ ರೈಲ್ವೆ ವಲಯದ ತಿರುವನಂತಪುರಂ ವಿಭಾಗದ ರೈಲು ಚಾಲಕರಿಗೆ ಕೆಲವು ಪಾನೀಯಗಳ ಸೇವನೆಯನ್ನು ನಿಷೇಧಿಸಲಾಗಿದೆ. 

ದಕ್ಷಿಣ ರೈಲ್ವೆ ವಲಯದ ತಿರುವನಂತಪುರಂ ವಿಭಾಗದ ರೈಲು ಚಾಲಕರಿಗೆ ಸಾಫ್ಟ್‌ ಡ್ರಿಂಕ್ಸ್‌ ಸೇವನೆ ನಿಷೇಧ

ತಿರುವನಂತಪುರಂ: ದಕ್ಷಿಣ ರೈಲ್ವೆ ವಲಯದ ತಿರುವನಂತಪುರಂ ವಿಭಾಗದ ಲೋಕೋ ಪೈಲಟ್‌ಗಳು ಎಳನೀರು, ಕೆಲ ಪಾನೀಯ ಹಾಗೂ ಹಣ್ಣುಗಳು, ಕೆಮ್ಮಿನ ಸಿರಪ್‌, ಹೋಮಿಯೋಪತಿ ಔಷಧಿಗಳ ಸೇವಿಸುವುದನ್ನು ಹಾಗೂ ಮೌತ್‌ ವಾಷ್‌ ಬಳಸುವುದನ್ನು ನಿಷೇಧಿಸಲಾಗಿದೆ. ಕಾರಣ, ಇವುಗಳಿಂದಾಗಿ ಅವರ ಉಸಿರಾಟದ ಪರೀಕ್ಷೆ ನಡೆಸಿದಾಗ ಯಂತ್ರ ದೋಷದಿಂದ ಅದರಲ್ಲಿ ಮದ್ಯದ ಅಂಶ ಇದೆ ಎಂಬ ಫಲಿತಾಶ ಬರುತ್ತಿದ್ದು, ಇದರಿಂದ ಕೆಲಸಕ್ಕೆ ಅಡ್ಡಿಯಾಗುತ್ತಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ‘ಸಿಬ್ಬಂದಿ ಕೆಲಸಕ್ಕೆ ಹಾಜರಾದಾಗ ಹಾಗೂ ಕೆಲಸ ಮುಗಿಸಿ ಹೊರಡುವಾಗ ನಡೆಸಲಾಗುವ ಉಸಿರಾಟ ಪರೀಕ್ಷೆಯಲ್ಲಿ ಮದ್ಯದ ಅಂಶ ಪತ್ತೆಯಾಗುತ್ತಿದೆ. ಹಾಗಾಗಿ ಪಟ್ಟಿ ಮಾಡಲಾದ ಪದಾರ್ಥಗಳ ಸೇವನೆಯನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಅವುಗಳ ಸೇವನೆ ಅನಿವಾರ್ಯವಿದ್ದಲ್ಲಿ ಮೊದಲೇ ಸಾಕ್ಷಿಯೊಂದಿಗೆ ಮಾಹಿತಿ ನೀಡಬೇಕು’ ಎಂದು ಅದರಲ್ಲಿ ಸೂಚಿಸಲಾಗಿದೆ.

ಉತ್ತರಾಖಂಡದಲ್ಲಿ ಪರರಾಜ್ಯದವರು ಕೃಷಿ ಭೂಮಿ ಖರೀದಿಗೆ ನಿಷೇಧ

ಡೆಹ್ರಾಡೂನ್‌: ಕೃಷಿ ಭೂಮಿಯ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಉತ್ತರಾಖಂಡದ ಪುಷ್ಕರ್‌ ಸಿಂಗ್‌ ಧಾಮಿ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿರುವ 13 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಪರರಾಜ್ಯದವರು ಕೃಷಿ ಭೂಮಿ ಖರೀದಿಸುವುದನ್ನು ನಿಷೇಧಗೊಳಿಸುವ ಮಸೂದೆಯನ್ನು ಸರ್ಕಾರ ಮಂಡಿಸಲಿದೆ. ಈಗಾಗಲೇ ಕರಡು ಮಸೂದೆಗೆ ಸಂಪುಟ ಅನುಮೋದನೆ ನೀಡಿದ್ದು, ಬಜೆಟ್‌ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಹರಿದ್ವಾರ ಮತ್ತು ಉಧಂ ಸಿಂಗ್‌ ನಗರ ಜಿಲ್ಲೆಗಳನ್ನು ಹೊರತುಪಡಿಸಿ ಮಿಕ್ಕ 11 ಜಿಲ್ಲೆಗಳಲ್ಲಿ ಪರ ರಾಜ್ಯದವರು ಕೃಷಿ ಭೂಮಿ ಖರೀದಿಯನ್ನು ಈ ಮಸೂದೆ ನಿಷೇಧಿಸುತ್ತದೆ. ಆದರೆ ಗೃಹ ನಿರ್ಮಾಣಕ್ಕೆ ಯಾವುದೇ ತೊಂದರೆಯಿರುವುದಿಲ್ಲ. ಜೊತೆಗೆ ಭೂಮಿ ವ್ಯಾಜ್ಯಗಳಲ್ಲಿ ಜಿಲ್ಲಾಧಿಕಾರಿಯ ಅಧಿಕಾರವನ್ನು ಮೊಟಕುಗೊಳಿಸಿ, ರಾಜ್ಯ ಸರ್ಕಾರಕ್ಕೆ ವರ್ಗಾಯಿಸುತ್ತದೆ.