ನವದೆಹಲಿ(ಫೆ17): ರೂಪಾಂತರಿ ಬ್ರಿಟನ್‌ ವೈರಸ್‌ ಹಾವಳಿ ತಪ್ಪಿಸಲು ಭಾರತ ಸಫಲವಾಗಿರುವ ಹೊತ್ತಿನಲ್ಲೇ, ಇದೇ ಮೊದಲ ಬಾರಿಗೆ ಭಾರತದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ ಮಾದರಿ ರೂಪಾಂತರಿ ಕೊರೋನಾ ವೈರಸ್‌ ಪತ್ತೆಯಾಗಿದೆ. ಕಳೆದ 2 ತಿಂಗಳ ಅವಧಿಯಲ್ಲಿ ವಿದೇಶದಿಂದ ಭಾರತಕ್ಕೆ ಆಗಮಿಸಿದವರ ಪೈಕಿ ನಾಲ್ವರಲ್ಲಿ ಆಫ್ರಿಕಾ ಮಾದರಿ ಮತ್ತು ಒಬ್ಬರಲ್ಲಿ ಬ್ರೆಜಿಲ್‌ ಮಾದರಿ ವೈರಸ್‌ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಮಾಹಿತಿ ನೀಡಿದೆ.

"

ಆದರೆ ರೂಪಾಂತರಿ ವೈರಸ್‌ ಪತ್ತೆಯಾದ ಬೆನ್ನಲ್ಲೇ ಎಲ್ಲಾ 5 ಜನರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ಅವರ ಸಂಪರ್ಕಕ್ಕೆ ಬಂದವರನ್ನು ಕೂಡಾ ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಹೀಗಾಗಿ ನಾಗರಿಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಪ್ರಧಾನ ನಿರ್ದೇಶಕ ಬಲರಾಮ್‌ ಭಾರ್ಗವ ಭರವಸೆ ನೀಡಿದ್ದಾರೆ.

ಈ ಎರಡು ದೇಶಗಳಿಂದ ಬಂದರೆ ಕೋವಿಡ್‌ ಟೆಸ್ಟ್‌ ಕಡ್ಡಾಯ

ಕಳೆದ ಜನವರಿ ತಿಂಗಳಲ್ಲಿ ಅಂಗೋಲಾ, ತಾಂಜೇನಿಯಾದಿಂದ ಬಂದಿದ್ದ ತಲಾ ಒಬ್ಬರು ಮತ್ತು ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ರೂಪಾಂತರಿ ವೈರಸ್‌ ಪತ್ತೆಯಾಗಿದೆ. ಇನ್ನು ಫೆಬ್ರುವರಿ ತಿಂಗಳಲ್ಲಿ ಬ್ರೆಜಿಲ್‌ನಿಂದ ಬಂದ ವ್ಯಕ್ತಿಯಲ್ಲಿ ಈ ರೀತಿಯ ರೂಪಾಂತರಿ ವೈರಸ್‌ ಪತ್ತೆಯಾಗಿದೆ. ಬಳಿಕ ಅವರಿಗೆಲ್ಲಾ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ವೈರಸ್‌ ಅನ್ನು ಪ್ರತ್ಯೇಕಗೊಳಿಸುವಲ್ಲಿ ಪುಣೆಯಲ್ಲಿನ ಐಸಿಎಂಆರ್‌- ಎನ್‌ಐವಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಆ ವೈರಸ್‌ ಮೇಲೆ ಹಾಲಿ ದೇಶದಲ್ಲಿ ಲಭ್ಯವಿರುವ ಲಸಿಕೆಗಳ ಕಾರ್ಯಕ್ಷಮತೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರ್ಗವ ತಿಳಿಸಿದ್ದಾರೆ.

ಇದೇ ವೇಳೆ ದೇಶದಲ್ಲಿ ಭಾರೀ ಆತಂಕ ಹುಟ್ಟುಹಾಕಿದ್ದ ಬ್ರಿಟನ್‌ ಮಾದರಿ ಹೈಸ್ಪೀಡ್‌ ಕೊರೋನಾ ಸೋಂಕು ಈವರೆಗೆ ಭಾರತದಲ್ಲಿ 187 ಜನರಲ್ಲಿ ಪತ್ತೆಯಾಗಿದೆ. ಆದರೆ ಇದರಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.