ನವದೆಹಲಿ(ಸೆ.13): ಕಾಂಗ್ರೆಸ್‌ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಪಕ್ಷದ ಪರಮೋಚ್ಚ ನೀತಿ ನಿರ್ಣಾಯಕ ಸಮಿತಿಯಾದ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ (ಸಿಡಬ್ಲುಸಿ) ಹಾಗೂ ವಿವಿಧ ಸಮಿತಿಗಳನ್ನು ಪುನಾರಚನೆ ಮಾಡಿರುವ ಹಿಂದೆ ಜಾಣ ತಂತ್ರ ಅಡಗಿದೆ. ಈ ಆಮೂಲಾಗ್ರ ಬದಲಾವಣೆಯು ಅವರ ಪುತ್ರ ರಾಹುಲ್‌ ಗಾಂಧಿ ಅವರ ಕೈ ಬಲಪಡಿಸಿದೆ. ಇನ್ನು 6 ತಿಂಗಳ ಬಳಿಕ ಅವರೇ ಪುನಃ ಅಧ್ಯಕ್ಷ ಪಟ್ಟಕ್ಕೆ ಬಂದು ಕೂರಬಹುದು ಎಂದು ವಿಶ್ಲೇಷಿಸಲಾಗಿದೆ.

ಇದಲ್ಲದೆ, ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಬಯಸಿ ಪತ್ರ ಬರೆದು ವಿವಾದ ಎಬ್ಬಿಸಿದ್ದ 23 ಕಾಂಗ್ರೆಸ್‌ ನಾಯಕರ ಪೈಕಿ ಬಹುತೇಕ ಮಂದಿಯನ್ನು ನಿರ್ಲಕ್ಷಿಸಲಾಗಿದೆ. ಅಲ್ಲದೆ, ಸಿಡಬ್ಲುಸಿಗೆ ಚುನಾವಣೆ ನಡೆಯಬೇಕು ಎಂಬ ಅವರ ಬೇಡಿಕೆಯನ್ನೂ ತಳ್ಳಿಹಾಕಲಾಗಿದೆ. ಈ ಮೂಲಕ ಒತ್ತಡ ತಂತ್ರಕ್ಕೆ ತಾವು ಮಣಿಯಲ್ಲ ಎಂಬ ಸಂದೇಶವನ್ನು ಸೋನಿಯಾ ನೀಡಿದ್ದಾರೆ.

ಸೋನಿಯಾ ಅವರಿಗೆ ಸಲಹೆ ನೀಡಲು ತಾತ್ಕಾಲಿಕ ವಿಶೇಷ ಸಮಿತಿ ರಚಿಸಲಾಗಿದ್ದು, ಅದರಲ್ಲಿ ಪತ್ರ ಬರೆದ 23 ಮಂದಿಯಲ್ಲಿ ಸ್ಥಾನ ಪಡೆದಿರುವುದು ಮುಕುಲ್‌ ವಾಸ್ನಿಕ್‌ ಮಾತ್ರ. ಪತ್ರಕ್ಕೆ ಸಹಿ ಹಾಕಿದ್ದ ಗುಲಾಂ ನಬಿ ಆಜಾದ್‌, ಆನಂದ ಶರ್ಮಾ, ಕಪಿಲ್‌ ಸಿಬಲ್‌, ಶಶಿ ತರೂರ್‌, ಮನೀಶ್‌ ತಿವಾರಿ ಅವರನ್ನು ನಿರ್ಲಕ್ಷಿಸಲಾಗಿದೆ.

ಇನ್ನು ಸಿಡಬ್ಲುಸಿಯ 26 ಕಾಯಂ ಆಹ್ವಾನಿತರಲ್ಲಿ ರಾಹುಲ್‌ ಗಾಂಧಿ ಬೆಂಬಲಿಗ 11 ಮಂದಿ ಇದ್ದಾರೆ. ಸಿಡಬ್ಲುಸಿ ಸದಸ್ಯರಲ್ಲಿ ರಾಹುಲ್‌ ಬಲಗೈನಂತಿರುವ 22 ಮುಖಂಡರಿದ್ದಾರೆ. ಸಿಡಬ್ಲುಸಿ ವಿಶೇಷ ಆಹ್ವಾನಿತರಲ್ಲಿ ‘ಯುವರಾಜ’ನ 7 ಬೆಂಬಲಿಗರು ಉಂಟು.

17 ರಾಜ್ಯಗಳ ಕಾಂಗ್ರೆಸ್‌ ಉಸ್ತುವಾರಿಗಳು ನೇಮಕವಾಗಿದ್ದು ಅವರಲ್ಲಿ 13 ಮಂದಿ ರಾಹುಲ್‌ ಆಪ್ತರು. 9 ಪ್ರಧಾನ ಕಾರ್ಯದರ್ಶಿಗಳಲ್ಲಿ ಅವರ ಬೆಂಬಲಿಗರು 4 ಮಂದಿ.

‘ಸೋನಿಯಾ ಅವರು ಯುವ ಹಾಗೂ ಹಿರಿಯರ ಸಮತೋಲಿತ ತಂಡ ರಚಿಸಿದ್ದಾರೆ. ವಿಶೇಷ ಸಲಹಾ ಸಮಿತಿಗೆ ಕಾಲಮಿತಿ ಹೇರಿರುವ ಕಾರಣ, ಶೀಘ್ರದಲ್ಲೇ ಅಧ್ಯಕ್ಷಗಿರಿಗೆ ಚುನಾವಣೆ ನಡೆಯಲಿದೆ ಎಂಬ ಸಂದೇಶವನ್ನು ಸೋನಿಯಾ ನೀಡಿದ್ದಾರೆ’ ಎಂದು ಪಕ್ಷದ ಹಿರಿಯ ಮುಖಂಡ ಅಶ್ವನಿ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.