ಗೂಡ್ಸ್ ಲಾರಿಯೊಂದು ರಸ್ತೆ ಬದಿ ನಿಂತಿದ್ದ ಪ್ರವಾಸಿ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅದು ರಸ್ತೆ ಪಕ್ಕದ ಕಾಂಕ್ರೀಟ್ ಕಟ್ಟೆ ಮೇಲೆ ಕುಳಿತಿದ್ದ ಮಹಿಳೆಯರ ಮೇಲೆ ಬಿದ್ದು 7 ಜನ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಚೆನ್ನೈ ಬೆಂಗಳೂರು ಹೈವೇಯಲ್ಲಿ ನಡೆದಿದೆ.

ತಿರುಪತ್ತೂರು: ಗೂಡ್ಸ್ ಲಾರಿಯೊಂದು ರಸ್ತೆ ಬದಿ ನಿಂತಿದ್ದ ಪ್ರವಾಸಿ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅದು ರಸ್ತೆ ಪಕ್ಕದ ಕಾಂಕ್ರೀಟ್ ಕಟ್ಟೆ ಮೇಲೆ ಕುಳಿತಿದ್ದ ಮಹಿಳೆಯರ ಮೇಲೆ ಬಿದ್ದು 7 ಜನ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಚೆನ್ನೈ ಬೆಂಗಳೂರು ಹೈವೇಯಲ್ಲಿ ನಡೆದಿದೆ. ದುರಂತದಲ್ಲಿ ಮೃತಪಟ್ಟವರೆಲ್ಲಾ ಕರ್ನಾಟಕ ಪ್ರವಾಸ ಮುಗಿಸಿ ತಮ್ಮೂರಾದ ತಮಿಳುನಾಡಿನ ವೆಲ್ಲೂರು ಜಿಲ್ಲೆಯತ್ತ ತೆರಳುತ್ತಿದ್ದರು. 

ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ತಿರುಪತ್ತೂರು (Tirupattur) ಜಿಲ್ಲೆಯ ನತ್ರಂಪಲ್ಲಿ ನಗರದ ಸಂದೈಪಲ್ಲಿ ಎಂಬಲ್ಲಿ ಈ ದುರಂತ ಸಂಭವಿಸಿದೆ. 7 ಮಹಿಳೆಯರು ಸ್ಥಳದಲ್ಲೇ ಪ್ರಾಣ ಬಿಟ್ಟರೆ ಪ್ರವಾಸಿ ವ್ಯಾನ್‌ನ ಚಾಲಕ ಹಾಗೂ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮಂಡ್ಯ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಪ್ರತ್ಯೇಕ ಅಪಘಾತ, ಮೂವರು ಸಾವು

ಮೃತರನ್ನು 50 ವರ್ಷ ಪ್ರಾಯದ ಮೀನಾ, 32 ವರ್ಷ ಪ್ರಾಯದ ದೇವಯಾನಿ (Devayani), 55 ವರ್ಷ ಪ್ರಾಯದ ಪಿ. ಸೈತು, 50 ವರ್ಷ ಪ್ರಾಯದ ದೇವಿಕಾ, 42 ವರ್ಷ ಪ್ರಾಯದ ಸಾವಿತ್ರಿ 50 ವರ್ಷ ಪ್ರಾಯದ ಕಲಾವತಿ ಹಾಗೂ 34 ವರ್ಷ ಪ್ರಾಯದ ಗೀತಾ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ವೆಲ್ಲೂರು ಜಿಲ್ಲೆಯ ಪೆರ್ನಂಬುತ್ ( Pernambut) ನಗರದ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಪರಸ್ಪರ ಸಂಬಂಧಿಗಳಾಗಿದ್ದು, ಎಲ್ಲರೂ ಜೊತೆಯಾಗಿ ಸೆಪ್ಟೆಂಬರ್ 8 ರಿಂದ ಕರ್ನಾಟಕದಲ್ಲಿರುವ ತೀರ್ಥಕ್ಷೇತ್ರಗಳನ್ನು ನೋಡಲು ಪ್ರವಾಸ ಆರಂಭಿಸಿದ್ದು, ಪ್ರವಾಸ ಮುಗಿಸಿ ವಾಪಸ್ ಹೋಗುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ಟೂರಿಸ್ಟ್ ವಾಹನದ ಮುಂಭಾಗದ ಚಕ್ರ ಹೆದ್ದಾರಿಯಲ್ಲಿ ಪಂಕ್ಚರ್ ಆಗಿದೆ. ಪರಿಣಾಮ ಎಲ್ಲರೂ ವಾಹನದಿಂದ ಇಳಿದು ರಸ್ತೆ ಬದಿಯ ಕಾಂಕ್ರೀಟ್ ಕಟ್ಟೆ ಮೇಲೆ ವ್ಯಾನ್ ಸಮೀಪದಲ್ಲೇ ಕುಳಿತಿದ್ದರು. ವಾಹನದ ಡೇಂಜರ್‌ ಲೈಟ್‌ಗಳು ಕೂಡ ಆನ್ ಆಗಿಯೇ ಇದ್ದವು. ಆದರೂ ಗೂಡ್ದ್‌ ಲಾರಿಯೊಂದು ಬಂದು ಇವರ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ.

ಗೂಡ್ಸ್ ಲಾರಿ ಚಾಲಕ ಅರುಣಾಚಲಂ ತಮ್ಮ ಲಾರಿಯಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಸ್ಮಾರ್ಟ್‌ ಬೋರ್ಡ್‌ಗಳನ್ನು(smart boards) ಸಾಗಣೆ ಮಾಡುತ್ತಿದ್ದರು. ವಾಹನ ಕೆಟ್ಟು ನಿಂತಿರುವುದನ್ನು ಗಮನಿಸುವಲ್ಲಿ ವಿಫಲರಾದ ಅವರು ಅದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ವ್ಯಾನ್ ಸಮೀಪದಲ್ಲಿ ಕುಳಿತಿದ್ದ ಮಹಿಳೆಯರ ಮೇಲೆ ಬಿದ್ದಿದೆ, ಪರಿಣಾಮ 7 ಮಹಿಳೆಯರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇಂದು ನಸುಕಿನ ಜಾವ 2.40ರ ಸುಮಾರಿಗೆ ಈ ದುರಂತ ಸಂಭವಿಸಿದೆ. 

ಬ್ರೇಕ್‌ ಫೇಲ್‌ ಆಗಿ ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್‌: 35 ಪ್ರಯಾಣಿಕರು ಜಸ್ಟ್‌ ಸೇಫ್‌

ತಕ್ಷಣವೇ ನಟ್ರಂಪಲ್ಲಿ ಪೊಲೀಸರು (Natrampalli police) ಮತ್ತು ಎನ್‌ಎಚ್‌ಎಐ ಗಸ್ತು ವಾಹನಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ಅವರನ್ನು ಕೃಷ್ಣಗಿರಿ ಮತ್ತು ತಿರುಪತ್ತೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮತ್ತು ವಾಣಿಯಂಬಾಡಿಯ ಸರ್ಕಾರಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಮೃತದೇಹಗಳನ್ನು ತಿರುಪತ್ತೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಾಟ್ರಂಪಲ್ಲಿ ಪೊಲೀಸರು ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿರುಪತ್ತೂರು ಜಿಲ್ಲಾಧಿಕಾರಿ ಡಿ.ಭಾಸ್ಕರ ಪಾಂಡಿಯನ್ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಸಂಬಂಧಿಕರಲ್ಲಿ ಮಾತನಾಡಿದ್ದಾರೆ.