Asianet Suvarna News Asianet Suvarna News

Diwali 2021: ಅಯೋಧ್ಯೆಯಲ್ಲಿ ಇಂದು 9 ಲಕ್ಷ ದೀಪಗಳಿಂದ ದೀಪೋತ್ಸವ!

* ಅಯೋಧ್ಯೆಯಲ್ಲಿ ಗಿನ್ನೆಸ್‌ ದಾಖಲೆಗೆ ಸಿದ್ಧತೆ

* ಅಯೋಧ್ಯೆಯಲ್ಲಿ ಇಂದು 9 ಲಕ್ಷ ದೀಪಗಳಿಂದ ದೀಪೋತ್ಸವ

* ಡ್ರೋನ್‌ ಮೂಲಕ ದೀಪೋತ್ಸವದ ಬೆರಗು ಸೆರೆ

Set For New World Record, Ayodhya To Light 9 Lakh Diyas pod
Author
Bangalore, First Published Nov 3, 2021, 1:50 PM IST

ಅಯೋಧ್ಯೆ(ನ.03) ದೀಪಾವಳಿ(Diwali 2021) ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ(Ayodhya) ಸೋಮವಾರ ಸಂಜೆಯಿಂದ ಅದ್ಧೂರಿ ದೀಪೋತ್ಸವಕ್ಕೆ ಚಾಲನೆ ನೀಡಲಾಗಿದೆ. ದೀಪೋತ್ಸವದ ಕೇಂದ್ರ ಬಿಂದು ‘ರಾಮ್‌ ಕಿ ಪೈದಿ’ ಘಾಟ್‌ಅನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ.

ನರಕ ಚತುರ್ದಶಿ ದಿನವಾದ ಬುಧವಾರ ಇಲ್ಲಿ 9 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ಗಿನ್ನೆಸ್‌ ದಾಖಲೆ (Guinness World Records) ನಿರ್ಮಿಸಲು ಸ್ಥಳೀಯ ಆಡಳಿತ ಮಂಡಳಿ ನಿರ್ಧರಿಸಿದೆ. ಇದಕ್ಕೆಂದೇ 12,000 ಸ್ವಯಂಪ್ರೇರಿತರನ್ನು ನಿಯೋಜಿಸಲಾಗಿದೆ. ಉಳಿದ 32 ಘಾಟ್‌ಗಳೂ ದೀಪಗಳಿಂದ ಅಲಂಕೃತವಾಗಲಿವೆ. ಇದೇ ಮೊದಲ ಬಾರಿಗೆ ದೀಪೋತ್ಸವವವನ್ನು 500 ಡ್ರೋನ್‌ಗಳ ಮೂಲಕ ಸೆರೆಹಿಡಿಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಉಪಸ್ಥಿತರಿರಲಿದ್ದಾರೆ.

ಕಳೆದ 5 ವರ್ಷಗಳಿಂದ ದೀಪೋತ್ಸವ ಆಚರಣೆ ನಡೆಯುತ್ತಿದ್ದು, ಅಯೋಧ್ಯೆಯ ಪ್ರತಿ ದೇಗುಲಗಳನ್ನೂ ದೀಪಗಳಿಂದ ಅಲಂಕರಿಸಲಾಗುತ್ತದೆ. ದೀಪೋತ್ಸವದಲ್ಲಿ ಸಂಗೀತ ಸಂಜೆ, ನೃತ್ಯ ಮತ್ತಿತರ ಮನರಂಜನಾ ಕಾರ‍್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ.

ರಾಮಮಂದಿರ ನಿರ್ಮಾಣಕ್ಕೆ ಆಫ್ಘನ್‌ ನದಿ ನೀರು!

ಅಫ್ಘಾನಿಸ್ತಾನದ (Afghanistan) ಹುಡುಗಿಯೊಬ್ಬಳು ಕಳುಹಿಸಿಕೊಟ್ಟಕಾಬೂಲ್‌ ನದಿ ನೀರನ್ನು ರಾಮಜನ್ಮ ಭೂಮಿ (Ram Janmbhumi) ಸ್ಥಳಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾನುವಾರ ಪ್ರೋಕ್ಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಕಾಬೂಲ್‌ ನದಿ ನೀರನ್ನು ಗಂಗಾಜಲದೊಂದಿಗೆ ಸೇರಿಸಿ ಪ್ರೋಕ್ಷಣೆ ಮಾಡಲಾಯಿತು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗಿ, ‘ಆಫ್ಘನ್‌ನ ಮಹಿಳೆಯೊಬ್ಬರು ಭಕ್ತಿಯಿಂದ ಕಾಬೂಲ್‌ ನದಿ ನೀರನ್ನು ರಾಮಜನ್ಮಭೂಮಿಯಲ್ಲಿ ಬಳಸಿಕೊಳ್ಳುವಂತೆ ಮೋದಿ ಅವರಿಗೆ ಕಳುಹಿಸಿದ್ದರು. ಅಯೋಧ್ಯೆಯ ದೀಪೋತ್ಸವದ ಸಿದ್ದತೆಯನ್ನು ವೀಕ್ಷಿಸಲು ಹೋಗಿದ್ದ ವೇಳೆ ಅವರ ಕೋರಿಕೆಯನ್ನು ಈಡೇರಿಸಿದ್ದೇನೆ. ಜೊತೆಗೆ ರಾಮಜನ್ಮಭೂಮಿಯ ಬಗ್ಗೆ ಭಕ್ತಿ ಗೌರವವುಳ್ಳ ಜನರಿಗೋಸ್ಕರ ಅಯೋಧ್ಯೆಗೆ ಭೇಟಿ ನೀಡುತ್ತಿದ್ದೇನೆ’ ಎಂದು ಯೋಗಿ ಹೇಳಿದರು.

ಅಯೋಧ್ಯೆ ರಾಮಮಂದಿರ ಅಡಿಪಾಯಕ್ಕೆ ರಾಜ್ಯದ ಗ್ರಾನೈಟ್‌

ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ (Ram Mandir) ತಳಪಾಯವನ್ನು ಹನುಮನ ನಾಡೆನಿಸಿದ ಕನ್ನಡ ನೆಲದ ಶಿಲೆಗಳು ಭದ್ರಗೊಳಿಸಲಿವೆ. ಈ ಮೂಲಕ ರಾಮಮಂದಿರದಲ್ಲಿ ಕರುನಾಡಿನ ಶಿಲಾ ವೈಭವ ಅಮರವಾಗಲಿದೆ.

ದೊಡ್ಡಬಳ್ಳಾಪುರ-ದೇವನಹಳ್ಳಿ ಭಾಗದ ಶಿಲೆಗಳು ಅತ್ಯಂತ ಗಟ್ಟಿಯಾದ ಮತ್ತು ವಿಶಿಷ್ಟಮಾದರಿಗಳನ್ನು ಕೆತ್ತಲು ಪೂರಕವಾದ ಶಿಲಾ ರಚನೆಗಳಿಂದಾಗಿವೆ ಎಂಬುದು ಅನೇಕರ ಅಭಿಪ್ರಾಯ. ಇದಕ್ಕಾಗಿಯೇ ಈ ಭಾಗದ ಕೊಯಿರಾ ಬೆಟ್ಟಪ್ರಸಿದ್ಧ. ಈ ಬೆಟ್ಟದಿಂದ ಕಡೆದ ಕಲ್ಲುಗಳು ಕನ್ಯಾಕುಮಾರಿಯ ವಿವೇಕಾನಂದ ರಾಕ್‌ನ ತಳಪಾಯ ನಿರ್ಮಾಣಕ್ಕೂ ಬಳಸಲ್ಪಟ್ಟಿವೆ. ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಕೂಡ ಇಲ್ಲಿನ ಕಲ್ಲುಗಳನ್ನೇ ಬಳಸಲಾಗಿದೆ. ಅನೇಕ ಶಿಲಾ ಮೂರ್ತಿಗಳನ್ನು ಕೆತ್ತಲೂ ಈ ಶಿಲೆಗಳು ಪೂರಕವಾಗಿವೆ. ಇತ್ತೀಚೆಗೆ ನಟ ಅರ್ಜುನ್‌ ಸರ್ಜಾ ಸ್ಥಾಪಿಸಿದ ಹನುಮ ಮೂರ್ತಿಯನ್ನೂ ಇದೇ ಕಲ್ಲಿನಿಂದಲೇ ಕೆತ್ತಲಾಗಿತ್ತು.

ಸಾದಹಳ್ಳಿ ಎಂಬ ಕಲ್ಲುಗಾವಲು:

ಸಾದಹಳ್ಳಿಯ ಸುತ್ತಮುತ್ತ ಬೃಹತ್‌ ಕಲ್ಲು ಕ್ವಾರಿಗಳು ಈಗ ಕಾರ್ಯನಿರ್ವಹಿಸುತ್ತಿವೆ. ದೇಶದ ಹಲವು ಮಹತ್ವದ ನಿರ್ಮಾಣ ಕಾಮಗಾರಿಗಳಲ್ಲಿ ಇಲ್ಲಿನ ಶಿಲೆಗಳನ್ನು ಬಳಸಲಾಗುತ್ತಿದೆ. ಬಹುಮುಖ್ಯವಾಗಿ ಇಲ್ಲಿನ ಕಲ್ಲು ಗುಡ್ಡಗಳು ಬೃಹತ್‌ ಬಂಡೆಗಳಿಂದ ಮಾಡಲ್ಪಟ್ಟಿದ್ದು ಕಠಿಣ ಶಿಲೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಕಲ್ಲು ಕ್ವಾರಿಗಳಲ್ಲಿ ಗ್ರಾನೈಟ್‌ ಉತ್ಪಾದನೆ ಹೆಚ್ಚಿದೆ. ದೇಶಾದ್ಯಂತ ಬೇಡಿಕೆಯೂ ಹೆಚ್ಚಿದೆ. ಸಾವಿರಾರು ಎಕರೆ ಪ್ರದೇಶ ಆವರಿಸಿರುವ ಕಲ್ಲುಗಣಿಗಳ ದುರ್ಗಮ ಹಾದಿ ಮೈ ಜುಂ ಎನಿಸುತ್ತದೆ. ಇಂತಹ ಕಲ್ಲುಗಾವಲಿನಲ್ಲಿ ತೆಗೆದು ಒಪ್ಪ ಮಾಡಿದ ಗ್ರಾನೈಟ್‌ಗಳು ಇಂದು ರಾಮಮಂದಿರದ ಅಡಿಪಾಯಕ್ಕೆ ಬಳಕೆಯಾಗುತ್ತಿವೆ.

300 ಲೋಡ್‌ ಗ್ರಾನೈಟ್‌ ಪೂರೈಕೆಗೆ ತಯಾರಿ:

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸಾದಹಳ್ಳಿ ಕಲ್ಲುಕ್ವಾರಿಗಳಿಂದ 300 ಲೋಡ್‌ ಬಿಳಿ ಹಾಗೂ ಗುಲಾಬಿ ಬಣ್ಣದ ಗ್ರಾನೈಟ್‌ ಶಿಲೆಗಳು ರವಾನೆಯಾಗಲಿವೆ. ಇದಕ್ಕಾಗಿ ಕ್ವಾರಿಗಳಲ್ಲಿ ನಿತ್ಯ ಗ್ರಾನೈಟ್‌ ಶಿಲಾ ಪದರಗಳ ಬೇರ್ಪಡಿಸುವಿಕೆ, ಕತ್ತರಿಸುವಿಕೆ ಹಾಗೂ ಹೊಳಪು ಕೊಡುವ ಕಾರ‍್ಯಗಳಲ್ಲಿ 800ಕ್ಕೂ ಅಧಿಕ ಕಾರ್ಮಿಕರು ತೊಡಗಿದ್ದಾರೆ. ಬರುವ ಮೇ ತಿಂಗಳ ಒಳಗೆ ಶಿಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಯೋಧ್ಯೆಗೆ ತಲುಪಿಸುವ ಕಾರ‍್ಯಯೋಜನೆ ಹೊಂದಲಾಗಿದೆ ಎಂಬ ಮಾಹಿತಿ ಇದೆ.

Follow Us:
Download App:
  • android
  • ios