ನವದೆಹಲಿ(ನ.30): ಕೋವಿಶೀಲ್ಡ್‌ ಕೊರೋನಾ ಲಸಿಕೆಯನ್ನು ಪಡೆದ ಬಳಿಕ ತಲೆ ಸಿಡಿತದಂತಹ ಸಮಸ್ಯೆ ಕಾಣಿಸಿಕೊಂಡಿದ್ದಾಗಿ ಆರೋಪಿಸಿರುವ ವ್ಯಕ್ತಿಯ ವಿರುದ್ಧ 100 ಕೋಟಿ ರು. ಮೊತ್ತದ ಮಾನಹಾನಿ ಕೇಸ್‌ ದಾಖಲಿಸಲು ಸೀರಂ ಇನ್‌ಸ್ಟಿಟ್ಯೂಟ್‌ ಮುಂದಾಗಿದೆ.

ಲಸಿಕೆ ಪರೀಕ್ಷೆಗೆ ಒಳಗಾದ ವ್ಯಕ್ತಿಯ ಆರೋಗ್ಯ ಸ್ಥಿತಿಗೂ ಕೋವಿಶೀಲ್ಡ್‌ ಲಸಿಕೆಗೂ ಪರಸ್ಪರ ಸಂಬಂಧವೇ ಇಲ್ಲ. ಇದೊಂದು ದುರುದ್ದೇಶಪೂರಿತ ಹಾಗೂ ತಪ್ಪು ಕಲ್ಪನೆಯಿಂದ ಕೂಡಿದ ಆರೋಪ. ಪರೀಕ್ಷಾರ್ಥಿ ತನ್ನ ಆರೋಗ್ಯ ಸಮಸ್ಯೆಗೆ ಲಸಿಕೆಯನ್ನು ದೂಷಿಸುತ್ತಿದ್ದಾನೆ. ಆತನ ಆರೋಗ್ಯ ಸ್ಥಿತಿಯ ಬಗ್ಗೆ ಸಂಸ್ಥೆ ಅನುಕಂಪ ಹೊಂದಿದೆ.

ಆದರೆ, ಸುಳ್ಳು ಆರೋಪದಿಂದ ಸಂಸ್ಥೆಯ ಘನತೆಗೆ ಧಕ್ಕೆ ಆಗಿದ್ದು, ಆರೋಪವನ್ನು ನಿಲ್ಲಿಸದಿದ್ದರೆ 100 ಕೋಟಿ ರು. ಮಾನನಷ್ಟಮೊಕದ್ದಮೆ ದಾಖಲಿಸಲಾಗುವುದು ಎಂದು ಸೀರಂ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೊರೋನಾ ಲಸಿಕೆ ನೀಡಲು 1 ಲಕ್ಷ ವ್ಯಾಕ್ಸಿನೇಟರ್‌ಗಳ ಪಡೆ

 

ಕೊರೋನಾ ವೈರಸ್‌ಗೆ ಲಸಿಕೆ ಬಂದಾಕ್ಷಣ ಅದನ್ನು ಆರೋಗ್ಯ ಕಾರ್ಯಕರ್ತರು ಮುಂತಾದ ಆದ್ಯತಾ ವಲಯದ ಜನರಿಗೆ ನೀಡಲು 1 ಲಕ್ಷ ವ್ಯಾಕ್ಸಿನೇಟರ್‌ಗಳ (ಲಸಿಕೆ ನೀಡುವವರು) ಪಡೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ.

2021ರ ಆರಂಭಿಕ ತಿಂಗಳಲ್ಲಿ ಸುಮಾರು 30 ಕೋಟಿ ಜನರಿಗೆ ಲಸಿಕೆ ನೀಡುವ ಸಿದ್ಧತೆಯನ್ನು ಸರ್ಕಾರ ಮಾಡಿಕೊಂಡಿದ್ದು, ನಂತರ ಹಂತಹಂತವಾಗಿ ಹೆಚ್ಚಿನ ಜನಸಿಗೆ ಲಸಿಕೆ ನೀಡಲಿದೆ. ದೇಶದ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳೂ ಸೇರಿದಂತೆ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಈಗಾಗಲೇ 70,000 ವ್ಯಾಕ್ಸಿನೇಟರ್‌ಗಳು ಲಭ್ಯವಿದ್ದಾರೆ. ಜೊತೆಗೆ, ಖಾಸಗಿ ವಲಯದಿಂದ 30,000 ವೈದ್ಯರು, ನರ್ಸ್‌ಗಳು ಹಾಗೂ ಪ್ರಯೋಗಾಲಯದ ಸಿಬ್ಬಂದಿಯನ್ನು ಬಳಸಿಕೊಳ್ಳಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.