ಕಣ್ಣಾಲಿ ತೇವಗೊಳಿಸಿದ ಜೊಮ್ಯಾಟೋ ಡೆಲಿವರಿ ಬಾಯ್ ಬದುಕು, ಏನಾಯ್ತು ರಾತ್ರಿ 3 ಗಂಟೆಗೆ?
ವಯಸ್ಸು 20, ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾನೆ. ಆದರೆ ಕೊರೆವ ಚಳಿಯಲ್ಲಿ ತಡ ರಾತ್ರಿ ಅಂದರೆ 3 ಗಂಟೆಗೆ ಡೆಲವರಿ ನೀಡಿದ ಈ ಹುಡುಗನ ಕತೆ ಕಣ್ಣಾಲಿ ತೇವಗೊಳಿಸಿದೆ. ಅಷ್ಟಕ್ಕೂ ಆ ರಾತ್ರಿ 3 ಗಂಟೆಗೆ ನಡೆದಿದ್ದೇನು?
ದೆಹಲಿ(ಡಿ.25) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತೀವ ಚಳಿ. ಮಂಜು ಮುಸುಕಿದ ವಾತಾವರಣದಿಂದ ವಿಮಾನ ಹಾರಾಟಗಳು ವಿಳಂಬವಾಗುತ್ತಿದೆ. ಕೊರೆವ ಚಳಿ ದೆಹಲಿ ಜನರನ್ನು ಮನೆಯಿಂದ ಹೊರಬರದಂತೆ ಮಾಡುತ್ತಿದೆ. ಇದರ ನಡುವೆ 20ರ ಹರೆಯದ ಜೋಮ್ಯಾಟೋ ಡೆಲಿವರಿ ಬಾಯ್ ರಾತ್ರಿ 3 ಗಂಟೆಗೆ ಆಹಾರದ ಪ್ಯಾಕೆಟ್ ಹಿಡಿದು ಡೆಲಿವರಿಗೆ ತೆರಳಿದ್ದ. ವಿಳಾಸಕ್ಕೆ ತೆರಳಿ ಬಾಗಿಲು ತಟ್ಟಿ ಆರ್ಡರ್ ಮಾಡಿದ ವ್ಯಕ್ತಿ ಆಹಾರ ನೀಡಿದ್ದ. ಕೊರೆವ ಚಳಿಯಲ್ಲಿ ಆಗಮಿಸಿದ ಡೆಲಿವರಿ ಬಾಯ್‌ನ ಒಳಗೆ ಕರೆದು ಬಿಸಿ ನೀರು ನೀಡಿ ಸತ್ಕರಿಸಿದ ವ್ಯಕ್ತಿ, ಪ್ರೀತಿಯಿಂದ ಮಾತನಾಡಿಸಿದ್ದಾರೆ. ಈ ವೇಳೆ ಈ 20ರ ಹರೆಯದ ಹುಡುಗನ ಕಣ್ಣೀರ ಬದುಕು ತೆರೆದುಕೊಂಡಿದೆ. ಡೆಲಿವರಿ ನೀಡಿ ಹೊರಬಂದ ಹುಡುಗ ಕಣ್ಣೀರಾಗಿದ್ದರೆ, ಆರ್ಡರ್ ಪಡೆದ ವ್ಯಕ್ತಿಯೂ ಭಾವುಕರಾಗಿದ್ದರು.
ಅಷ್ಟಕ್ಕು ಆ ರಾತ್ರಿ 3 ಗಂಟೆಗೆ ಏನಾಯ್ತು? ವೈಲ್ಡ್‌ನೆಟ್ ಟೆಕ್ನಾಲಜಿಸಿ ನಿರ್ದೇಶಕ ಹಿಮಾಂಶು ಬೋರಾ ಈ ಹುಡುಗನ ಬದುಕಿನ ಕತೆಯನ್ನು ವಿವರಿಸಿದ್ದಾರೆ. ಇಷ್ಟೇ ಅಲ್ಲ ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್‌ಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಇದೀಗ ಬೋರಾ ಮಾಡಿದ ಮನವಿಗೆ ಹಲವು ಗಣ್ಯರು ಕೈಜೋಡಿಸಲು ಮುಂದೆ ಬಂದಿದ್ದಾರೆ. ಬೋರಾ ಈ ಕುರಿತು ಸುದೀರ್ಘವಾಗಿ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
ಕೆಲಸ ಕಳೆದುಕೊಂಡು ಡೆಲಿವರಿ ಬಾಯ್ ಆದ ಟೆಕ್ಕಿ, ಬೀದಿಗೆ ಬಿದ್ದು ಬೀದಿಯಿಂದ ಕಟ್ಟಿದ ಜೀವನ ನೆನೆದು ಭಾವುಕ!
ಹೆಚ್ಚು ಕೆಲಸಗಳು ಬಾಕಿ ಇದ್ದ ಕಾರಣ ಮುಗಿಸುವಾಗ ತಡ ರಾತ್ರಿ 3 ಗಂಟೆಯಾಗಿದೆ. ಹೀಗಾಗಿ ಜೋಮ್ಯಾಟೋ ಮೂಲಕ ಆಹಾರ ಆರ್ಡರ್ ಮಾಡಿದ್ದೆ. ಕೆಲವೇ ಹೊತ್ತಲ್ಲಿ ನನ್ನ ಮನೆಯ ಬಾಗಿಲ ಬೆಲ್ ಶಬ್ದ ಮಾಡಿತ್ತು. ಎದ್ದು ಬಾಗಿಲು ತೆರೆದಾಗ, ಜೊಮ್ಯಾಟೋ ಡೆಲಿವರಿ ಬಾಯ್ ಶಿವ ಸರ್ಕಾರ ಎದುರಿಗೆ ನಿಂತಿದ್ದ. ಹೊರಗಡೆ ಅತೀವ ಚಳಿ ಇದ್ದರೂ ಶಿವ ಸರ್ಕಾರ ನಗು ಮುಖದಿಂದ ನನಗೆ ಫುಡ್ ಡೆಲಿವರಿ ಮಾಡಿದ. ಆದರೆ ಆತನ ಕಣ್ಣುಗಳಲ್ಲಿ ಬೇರೆಯೇ ಬದುಕು ಅಡಗಿತ್ತು. ಆ ಭಾರವಾದ ಕತೆ ಅನಾವರಣಗೊಂಡಾದ ನಾನು ಭಾವುಕನಾಗಿದ್ದೆ ಎಂದು ಹಿಮಾಂಶು ಬೋರಾ ಹೇಳಿದ್ದಾರೆ.
ಭಾರಿ ಚಳಿ ಕಾರಣ 20-21ರ ಹರೆಯದ ಜೋಮ್ಯಾಟೋ ಡೆಲಿವರಿ ಬಾಯ್ ಶಿವ ಸರ್ಕಾರ್‌ನನ್ನು ಒಳಗೆ ಕರೆದು ಬಿಸಿ ನೀರು ನೀಡಿದೆ. ಈ ಚಳಿಯಲ್ಲಿ ಡೆಲಿವರಿ ಮಾಡುತ್ತಿದ್ದಿಯಾ, ಆರಾಮಾಗಿದ್ದೀ ತಾನೆ? ಎಲ್ಲವೂ ಒಕೆ ಎಂದು ಕೇಳಿದ್ದಾರೆ. ಎಲ್ಲವೂ ಒಕೆ ಎಂದು ಉತ್ತರಿಸಿದ ಶಿವ ಸರ್ಕಾರ ಜೊತೆ ಮಾತನಾಡುತ್ತಿರುವಾಗ ಆತನ ಕಣ್ಣೀರ ಬದುಕು ತೆರೆದುಕೊಂಡಿತು. ಶಿವ ಸರ್ಕಾರ್ ಅತೀವ ನೋವು, ದುಃಖದಿಂದ ತನ್ನ ಬದುಕಿನ ಕರಾಳ ಘಟನೆ ಹಾಗೂ ಜವಾಬ್ದಾರಿಗಳನ್ನು ತೆರೆದಿಟ್ಟಿದ್ದಾನೆ.ಇದು ನನ್ನನ್ನು ಅತೀವವಾಗಿ ಕಾಡುತ್ತಿದೆ ಎಂದು ಹಿಮಾಂಶು ಬೋರಾ ಹೇಳಿದ್ದಾರೆ.
ಶಿವ ಸರ್ಕಾರ 8ನೇ ತರಗತಿಯಲ್ಲಿರುವಾಗ ತಂದೆ ಹಠಾತ್ ನಿಧನ ಕುಟುಂಬವನ್ನೇ ಬುಡಮೇಲು ಮಾಡಿತ್ತು. ತಂದೆ ಒಬ್ಬರೆ ಕುಟಂಬಕ್ಕೆ ಜೀವನಾಧಾರವಾಗಿದ್ದರು. ಶಿವ ಸರ್ಕಾರ ಹಾಗೂ ಆತನ ತಂಗಿ ಹಾಗೂ ತಾಯಿಗೆ ಯಾರೂ ಇಲ್ಲದಾಯಿತು. ಆದಾಯ ನಿಂತಿತು. ವಿದ್ಯಾಬ್ಯಾಸ ಮುಂದುವರಿಸುವುದು ಕಷ್ಟವಾಯಿತು. ಹೀಗಾಗಿ 8ನೇ ತರಗತಿಗೆ ಶಾಲೆ ತೊರೆಯಬೇಕಾಯಿತು. ಶಿವ ಸರ್ಕಾರ್ ಬಾಲ್ಯ, ಯೌವನ, ಎಲ್ಲರಂತೆ ವಿದ್ಯಾಬ್ಯಾಸ, ಕಾಲೇಜು ಎಲ್ಲವೂ ಮರೆಯಾಯಿತು. ಅತೀ ದೊಡ್ಡ ಜವಾಬ್ದಾರಿ ಹೆಗಲ ಮೇಲೇರಿತ್ತು. ಕುಟುಂಬ ನಿರ್ವಹಣೆಗಾಗಿ ಕೆಲಸ ಹುಡುಕಬೇಕಾಯಿತು. ಹಗಲು ರಾತ್ರಿ ಎನ್ನದೇ ಶಿವ ಸರ್ಕಾರ ದುಡಿಯುತ್ತಿದ್ದಾನೆ. ಕಳೆದ ಕೆಲ ವರ್ಷಗಳಿಂದ ಶಿವ ಸರ್ಕಾರ ವಿಶ್ರಾಂತಿ ತೆಗೆದುಕೊಂಡಿಲ್ಲ. ದುಡಿಯುತ್ತಿದ್ದಾನೆ. ಸಿಕ್ಕ ಸಣ್ಣ ವೇತನದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾನ. ಇದೀಗ ತಂಗಿಯ ಮದುವೆಗೆ ಕಷ್ಟಪಡುತ್ತಿದ್ದಾನೆ. ಮುಂದಿನ ವರ್ಷ ತಂಗಿ ಮದುವೆ ಮಾಡಿಸಲು ಹಗಲಿರುಳು ಕಷ್ಟಪಡುತ್ತಿದ್ದಾನೆ ಎಂದು ಹಿಮಾಂಶು ಬೋರಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.
ಮನ ಕಲುಕಿದ ಡೆಲಿವರಿ ಬಾಯ್ ಪರಿಸ್ಥಿತಿ: 2 ವರ್ಷದ ಮಗಳ ಕೂರಿಸಿಕೊಂಡೆ ಎಲ್ಲೆಡೆ ಡೆಲವರಿ!
ತಂಗಿ ಮದುವೆ ಮಾಡಿ ವಿದ್ಯಾಭ್ಯಾಸ ಮುಂದುವರಿಸಿ ಒಳ್ಳೆ ಕೆಲಸ ಗಿಟ್ಟಿಸಬೇಕು. ಕಷ್ಟಗಳಿಂದ ಹೊರಬರಬೇಕು ಅನ್ನೋ ಆಸೆ ಶಿವ ಸರ್ಕಾರ್‌ಗೆ ಇದೆ. ಆದರೆ ಪರಿಸ್ಥಿತಿ ಇದಕ್ಕೆ ಅನುವು ಮಾಡಿಕೊಡತ್ತಿಲ್ಲ.ತನ್ನ ಕತೆ ಬಿಚ್ಚಿಟ್ಟು ಕಣ್ಮೀರಾದ ಶಿವ ಸರ್ಕಾರ ಧನ್ಯವಾದ ಹೇಳಿ ಅದೇ ನಗುಮುಖದಿಂದ ಹೊರಟು ಹೋದ. ಆದರೆ ಆತನ ಭಾವುಕ ಕತೆ ನನ್ನ ಮನಸ್ಸಿನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ರೀತಿ ಅದೆಷ್ಟು ಶಿವ ಸರ್ಕಾರ ಈ ಸಮಾಜದಲ್ಲಿದ್ದಾರೆ. ಎಲ್ಲವನ್ನೂ ತೊರೆದು ಕುಟುಂಬ ನಿರ್ವಹಣೆಗಾಗಿ ಹಗಳಿರುಳು ಕೆಲಸ ಮಾಡುವ ಅದೆಷ್ಟು ಮಂದಿ ಇದ್ದಾರೆ. ಜೊಮ್ಯಾಟೋ ಇವರಿಗೆ ಏನಾದರು ಮಾಡಲು ಸಾಧ್ಯವೆ? ಇವರ ಶಿಕ್ಷಣಕ್ಕೆ ಸುಲಭ ಸಾಲ, ಅವರಿಗೆ ವೇದಿಕೆ ಕಲ್ಪಿಸಲು ಸಾಧ್ಯವೇ? ದೀಪಿಂದರ್ ಗೋಯಲ್ ಹಾಗೂ ಜೊಮ್ಯಾಟಾ ನಾವು ಹೆಚ್ಚುವರಿಯಾಗಿ ಏನಾದರೂ ಮಾಡಬಹುದೇ? ಶಿವ ಸರ್ಕಾರ್‌ಗೆ ಸಹಾಯ ಮಾಡಲು ನನ್ನಲ್ಲಿ ಕೆಲ ಯೋಜನೆಗಳಿವೆ. ಅದನ್ನು ನಾನು ಮಾಡುತ್ತೇನೆ ಎಂದು ಹಿಮಾಂಶು ಬೋರಾ ಹೇಳಿದ್ದಾರೆ.