ಕೊಚ್ಚಿ[ಜ.11]: ಸೋಶಿಯಲ್ ಮೀಡಿಯಾದಲ್ಲಿ ಬೆಚ್ಚಿ ಬೀಳಿಸುವ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದನ್ನು ವೀಕ್ಷಿಸಿದರೆ ಕಾರಿನಲ್ಲಿ ಪ್ರಯಾಣಿಸುವ ವೇಳೆ ಚೈಲ್ಡ್ ಲಾಕ್ ಹಾಕುವುದು ಎಷ್ಟು ಅಗತ್ಯ ಎಂಬುವುದು ಮನವರಿಕೆಯಾಗುತ್ತದೆ. ಮಗುವೊಂದು ಚಲಿಸುತ್ತಿದ್ದ ಕಾರಿನಿಂದ ರಸ್ತೆಗುರುಳಿದ ವಿಡಿಯೋ ಇದಾಗಿದ್ದುಮ, ಟ್ವಿಟರ್ ನಲ್ಲಿ ಭಾರೀ ವೈರಲ್ ಆಗಿದೆ. 

ಕೇರಳದಲ್ಲಿ ನಡೆದ ಘಟನೆ ಇದಾಗಿದ್ದು, 2019ರ ಡಿಸೆಂಬರ್ 26ರಂದು ಮೊದಲ ಬಾರಿ ಇದನ್ನು ಯೂ ಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ. ಸದ್ಯ IPS ಅಧಿಕಾರಿ ಪಂಕಜ್ ಜೈನ್ ಈ ವಿಡಿಯೋ ವನ್ನು ಟ್ವೀಟ್ ಮಾಡುತ್ತಾ ರಸ್ತೆ ಸುರಕ್ಷತೆ ಕುರಿತು ಸಂದೇಶ ನೀಡಿದ್ದಾರೆ.

ರೈಲು ಹತ್ತುವ ವೇಳೆ ಇರಲಿ ಎಚ್ಚರ: ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ!

ಕೇವಲ 31 ಸೆಕೆಂಡ್ ಗಳ ಸಿಸಿಟಿವಿ ದೃಶ್ಯ ಇದಾಗಿದ್ದು, ವಿಡಿಯೋದಲ್ಲಿ ರಭಸದಿಂದ ಬರುವ ಕಾರು ತಿರುವಿನಲ್ಲಿ ಟರ್ನ್ ಆಗುತ್ತಿದ್ದಂತೆ ಕಾರಿನ ಬಾಗಿಲು ತೆರೆದುಕೊಳ್ಳುತ್ತದೆ. ನೋಡ ನೋಡುತ್ತಿದ್ದಂತೆಯೇ ವೇಗವಾಗಿ ಸಾಗುತ್ತಿದ್ದ ಕಾರಿನೊಳಗಿದ್ದ ಪುಟ್ಟ ಮಗು ರಸ್ತೆಗುರುಳಿ ಬೀಳುತ್ತದೆ. ಹೀಗಿರುವಾಗಲೇ ಎದುರಿನಿಂದ ಬಸ್ ಒಂದು ಬಂದರೆ, ಹಿಂಬದಿಯಿಂದ ಟ್ರಕ್ ಒಂದು ಬರುತ್ತದೆ. ಅದೃಷ್ಟವಶಾತ್ ರಸ್ತೆಯಲ್ಲಿ ಬಿದ್ದ ಮಗುವನ್ನು ನೋಡಿದ ಬಸ್ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾನೆ. ಚಾಲಕನ ಸಮಯಪ್ರಜ್ಞೆಯಿಂದ ಮಗು ಬದುಕುಳಿದಿದೆ.

ವಿಡಿಯೋ ಶೇರ್ ಮಾಡಿಕೊಂಡಿರುವ ಪಂಕಜ್ ಜೈನ್ 'ಮಕ್ಕಳೊಂದಿಗೆ ಪ್ರಯಾಣಿಸುವಾಗ ಚೈಲ್ಡ್ ಲಾಕ್ ಹಾಗೂ ಚೈಲ್ಡ್ ಸೀಟ್ ಅತೀ ಅಗತ್ಯ. ಅಲ್ಲದೇ ಎಲ್ಲಾ ಬಾಗಿಲುಗಳು ಸರಿಯಾಗಿ ಮುಚ್ಚಿದ್ದೀರಾ ಎಂಬುವುದನ್ನು ಖಾತ್ರಿ ಪಡಿಸಿಕೊಳ್ಳಿ. ಮಗುವನ್ನು ಸರಿಯಾಗಿ ಕುಳ್ಳಿರಿಸಿ. ಎಲ್ಲಾ ಮಕ್ಕಳು ಈ ಮಗುವಿನಂತೆ ಅದೃಷ್ಟಶಾಲಿಗಳಾಗಿರುವುದಿಲ್ಲ' ಎಂದು ಬರೆದಿದ್ದಾರೆ.