ಇಂಟರ್ನೆಟ್ ಪಡೆಯುವುದು ಹಕ್ಕು: ಕಣಿವೆಯ ಸ್ಥಿತಿ ಪರಾಮರ್ಶೆಗೆ ಸುಪ್ರೀಂ ಸೂಚನೆ!
ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಹಿನ್ನೆಲೆ| 7 ದಿನಗಳೊಳಗೆ ಪರಾಮರ್ಶೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ| ಇಂಟರ್ನೆಟ್ ಸೇವೆ ನಾಗರಿಕರ ಮೂಲಭೂತ ಹಕ್ಕು ಎಂದ ಸುಪ್ರೀಂ| ಇಂಟರ್ನೆಟ್ ಸೇವೆಗಳಿಗೆ ಹೇರಿದ್ದ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ| 'ಸಮಂಜಸ ಕಾರಣಗಳಿಗೆ ಮಾತ್ರ ಇಂಟರ್ನೆಟ್ ಸೇವೆಗಳಿಗೆ ನಿರ್ಬಂಧ ಹೇರಬಹುದು'| ಸುಪ್ರೀಂಕೋರ್ಟ್ ನಿರ್ಧಾರ ಸ್ವಾಗತಿಸಿದ ಪ್ರತಿಪಕ್ಷ ಕಾಂಗ್ರೆಸ್|
ನವದೆಹಲಿ(ಜ.10): ಇಂಟರ್ನೆಟ್ ಸೇವೆ ಸ್ಥಗಿತಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸುವಂತೆ ಸುಪ್ರೀಂಕೋರ್ಟ್ ಕಾಶ್ಮೀರ ಆಡಳಿತಕ್ಕೆ ಸೂಚನೆ ನೀಡಿದೆ.
ಇಂಟರ್ನೆಟ್ ಸೇವೆ ಪಡೆಯುವುದು ಸಂವಿಧಾನದ 19ನೇ ಪರಿಚ್ಛೇದದ ಅನ್ವಯ ನಾಗರಿಕರ ಮೂಲಭೂತ ಹಕ್ಕು. ಸಮಂಜಸವಾದ ನಿರ್ದಿಷ್ಟ ಕಾರಣಗಳಿಗೆ ಮಾತ್ರ ಇಂಟರ್ನೆಟ್ ಸೇವೆಗಳಿಗೆ ನಿರ್ಬಂಧ ಹೇರಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದ ಕೇಂದ್ರ ಸರ್ಕಾರ, ಇಂಟರ್ನೆಟ್ ಸೇವೆಗಳಿಗೆ ಹೇರಿದ್ದ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, 7 ದಿನಗಳೊಳಗೆ ಕಣಿವೆಯ ಸ್ಥಿತಿಗತಿಯ ಪರಾಮರ್ಶೆ ನಡೆಸುವಂತೆ ಜಮ್ಮು-ಕಾಶ್ಮೀರ ಆಡಳಿತಕ್ಕೆ ಸೂಚನೆ ನೀಡಿದೆ.
ಕಾಶ್ಮೀರಕ್ಕೆ ಉಪಗ್ರಹದಿಂದ ಇಂಟರ್‌ನೆಟ್: ಆಫರ್ ನೀಡಿ ಜೋಕರ್ ಆದ ಪಾಕ್ ಸಚಿವ!
ಇದೇ ವೇಳೆ ಇಂಟರ್ನೆಟ್ ಸೇವೆ ಸ್ಥಗಿತದ ಹಿಂದಿನ ರಾಜಕೀಯ ವಿಚಾರಗಳ ಕುರಿತು ನ್ಯಾಯಾಲಯ ತನಿಖೆ ಮಾಡಲು ಹೋಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಇನ್ನು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಇಡೀ ದೇಶ ಸಂವಿಧಾನಕ್ಕೆ ತಲೆಬಾಗುತ್ತದೆ ಎಂಬುದನ್ನು ಸುಪ್ರೀಂಕೋರ್ಟ್ ಪ್ರಧಾನಿ ಮೋದಿಗೆ ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದೆ.