ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಬಡ್ಡಿದರವನ್ನು ಶೇ.0.25 ರಷ್ಟು ಇಳಿಕೆ ಮಾಡಿದ್ದು, ಫೆಬ್ರವರಿ 15 ರಿಂದ ಜಾರಿಗೆ ಬರಲಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ನೂತನ ಮುಖ್ಯಮಂತ್ರಿ ಆಯ್ಕೆಗೆ ಫೆಬ್ರವರಿ 19 ರಂದು ಸಭೆ ಸೇರಲಿದೆ.

ಮುಂಬೈ: ಸಾರ್ವಜನಿಕ ವಲಯದಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನಸಾಲದ ಮೇಲಿನ ಬಡ್ಡಿದರವನ್ನು ಶೇ. 0.25ರಷ್ಟು ಇಳಿಕೆ ಮಾಡಿದೆ. ಇದು ಫೆ.15ರಿಂದಲೇ ಜಾರಿಗೆ ಬರಲಿದೆ ಎಂದು ಎಸ್‌ಬಿಐ ತಿಳಿಸಿದೆ. ಫೆ.7ರಂದು ಭಾರತೀಯ ರಿಸರ್ವ್ ಬ್ಯಾಂಕ್‌ ರೆಪೋದರವನ್ನು ಶೇ.0.25ರಷ್ಟು ಕಡಿತಗೊಳಿಸಿ ಶೇ.6.25ಕ್ಕೆ ಇಳಿಕೆ ಮಾಡಿದ ಬೆನ್ನಲ್ಲೇ ಎಸ್‌ಬಿಐ ಈ ನಿರ್ಧಾರ ಪ್ರಕಟಸಿದೆ. 

ಹೀಗಾಗಿ ಗೃಹ, ವಾಹನ, ವೈಯಕ್ತಿಕ, ವಾಣಿಜ್ಯ ಸಾಲದ ಮೇಲಿನ ಸಾಲದ ಬಡ್ಡಿದರಗಳು ಇಳಿಕೆಯಾಗಲಿವೆ. ಪರಿಣಾಮ ಗ್ರಾಹಕರ ಮಾಸಿಕ ಇಎಂಐ ಮೊತ್ತದಲ್ಲಿ ಇಳಿಕೆ ಕಂಡು ಬರಲಿದೆ. ಆರ್‌ಬಿಐ ಬಡ್ಡಿದರವನ್ನು ಇಳಿಸಿದ ಪ್ರತಿಯಾಗಿ ಕಳೆದ ವಾರ ಕೆನರಾ ಬ್ಯಾಂಕ್, ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕರೂ‌ರ್ ವೈಶ್ಯ ಬ್ಯಾಂಕ್, ಆರ್ ಬಿಎಲ್ ಬ್ಯಾಂಕ್‌ಗಳು ಬಡ್ಡಿ ದರವನ್ನು ಇಳಿಕೆ ಮಾಡಿದ್ದವು.

ಹಿಂದೂ ಸಂಘಟನೆ ಆರೆಸ್ಸೆಸ್ ಗುರಿ: ಮೋಹನ್ ಭಾಗವತ್ 

ಬರ್ಧಮಾನ್: ಹಿಂದೂ ಸಮಾಜ ಒಂದು ಜವಾಬ್ದಾರಿಯುತ ಸಮುದಾಯ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಸಮಾಜ ಅದು. ಹೀಗಾಗಿಯೇ ಈ ಸಮಾಜವನ್ನು ಸಂಘಟಿಸಲು ಆರೆಸ್ಸೆಸ್ ಬಯಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮೋಹನ ಭಾಗವತ್ ಹೇಳಿದರು. ಭಾನುವಾರ ಪ.ಬಂಗಾಳದ ಬರ್ಧಮಾನ್‌ನಲ್ಲಿ ನಡೆದ ಸಭೆಯೊಂದರಲ್ಲಿ ಅವರು ಮಾತನಾಡಿ, 'ಆರೆಸ್ಸೆಸ್ ಕೇವಲ ಹಿಂದೂ ಸಮುದಾಯದ ಮೇಲೆ ಏಕೆ ಗಮನ ಕೇಂದ್ರೀಕರಿಸುತ್ತದೆ ಎಂದು ಜನ ಕೇಳುತ್ತಾರೆ. ಅವರಿಗೆ ನನ್ನ ಉತ್ತರ ಒಂದೇ. ಹಿಂದೂ ಸಮಾಜವು ದೇಶದ ಜವಾಬ್ದಾರಿಯುತ ಸಮಾಜ. ಅದಕ್ಕೆಂದೇ ಆ ಸಮುದಾಯಕ್ಕೆ ಸಂಘಟನೆಯ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ. ಅನೇಕ ದೇಶಗಳು ಇತರರೊಂದಿಗೆ ಬಾಳಲು ಸಾಧ್ಯವಿಲ್ಲ ಎಂದು ತಮ್ಮದೇ ಧರ್ಮಾಧರಿತ ದೇಶ ಸ್ಥಾಪಿಸಿವೆ. ಆದರೆ ಹಿಂದೂ ಸಮಾಜ ಹಾಗಲ್ಲ ಎಂದರು.

ಯಾರಾಗ್ತಾರೆ ದೆಹಲಿ ಸಿಎಂ: ನಾಡಿದ್ದು ಹೆಸರು ಘೋಷಣೆ? 

ನವದೆಹಲಿ: 27 ವರ್ಷಗಳ ಬಳಿಕ ದೆಹಲಿ ವಿಧಾನಸಭೆ ಚುನಾವಣೆ ಜಯಿಸಿರುವ ಬಿಜೆಪಿ ತನ್ನ ನೂತನ ಮುಖ್ಯಮಂತ್ರಿ ಆಯ್ಕೆಗೆ ಬುಧವಾರ ಸಭೆ ಸೇರಲಿದೆ. ದೆಹಲಿ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ಫೆ.19 ನಿಗದಿಯಾಗಿದ್ದು ಅಲ್ಲಿ ನೂತನ ಸಿಎಂ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ. ಸಿಎಂ ಹುದ್ದೆಗೆ ಮಾಜಿ ಸಿಎಂ ಅರವಿಂದ್ ಕೇಜ್ರವಾಲ್ ಅವರನ್ನು ಮಣಿಸಿದ ಪರ್ವೇಶ್ ವರ್ಮಾ, ಬಿಜೆಪಿ ರಾಜ್ಯಾ ಧ್ಯಕ್ಷ ವೀರೇಂದ್ರ ಸಚ್‌ದೇವಾ, ಆಶಿಷ್ ಸೂದ್, ಆರ್‌ಎಸ್ ಎಸ್ ಪ್ರಬಲ ವ್ಯಕ್ತಿ ಜಿತೇಂದ್ರ ಮಹಾಜನ್, ರೇಖಾ ಗುಪ್ತಾ, ಆಪ್‌ನ ಮಾಜಿ ಸಚಿವ ಸೌರಭ್ ಭಾರದ್ವಾಜ್‌ರನ್ನು ಮಣಿಸಿದ ಶಿಖಾ ರಾಯ್ ಮೊದಲಾದವರ ಹೆಸರು ಕೇಳಿಬರುತ್ತಿದೆ. ಸಿಎಂ ಜೊತೆಗೆ ಇಬ್ಬರು ಡಿಸಿಎಂಗಳ ಹೆಸರು ಸೋಮವಾರವೇ ಘೋಷಣೆಯಾಗಲಿದೆ. ನೂತನ ಸರ್ಕಾರ ಫೆ.20ರಂದು ರಚನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಫೆ.5ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯು 70 ವಿಧಾನಸಭಾ ಕ್ಷೇತ್ರಗಳಲ್ಲಿ ಪೈಕಿ 48ರಲ್ಲಿ ಗೆದ್ದರೆ ಆಪ್ 22ರಲ್ಲಿ ಗೆದ್ದಿತ್ತು.