ನವದೆಹಲಿ (ಅ. 23): ಜಮ್ಮು-ಕಾಶ್ಮೀರ ಅ.31 ರಂದು ಹೊಸ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬರಲಿದ್ದು, ಈಗಿನ ರಾಜ್ಯಪಾಲರಾದ ಸತ್ಯಪಾಲ್‌ ಮಲ್ಲಿಕ್‌ ಅವರೇ ಮೊದಲ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕವಾಗುವ ಸಾಧ್ಯತೆ ಇದೆ.

ಲೆಫ್ಟಿನೆಂಟ್‌ ಗವರ್ನರ್‌ ಹುದ್ದೆಗೆ ಹಲವು ಗಣ್ಯರ ಹೆಸರುಗಳು ಕೇಳಿಬಂದಿವೆ. ಆದರೆ, ಸತ್ಯಪಾಲ್‌ ಮಲ್ಲಿಕ್‌ ಹೆಸರು ಮುಂಚೂಣಿಯಲ್ಲಿದ್ದು, ಅವರನ್ನೇ ಕೇಂದ್ರ ಸರ್ಕಾರ ನೇಮಕ ಮಾಡಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ವಿಶೇಷಾಧಿಕಾರ ರದ್ದು ಮಾಡಿದ ಬಳಿಕ ಮಲ್ಲಿಕ್‌ ಅವರು ಅಲ್ಲಿನ ಪರಿಸ್ಥಿತಿಯ ಸಮತೋಲನ ಕಾಪಾಡಿದ ಅನುಭವವಿದೆ.

ಪ್ರಸ್ತುತ ಸನ್ನಿವೇಶದ ಬಗ್ಗೆಯೂ ಮಲ್ಲಿಕ್‌ರಿಗೆ ಸಂಪೂರ್ಣ ಮಾಹಿತಿ ಇದ್ದ ಕಾರಣ ಅವರನ್ನೇ ಅಂತಿಮಗೊಳಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ನ್ಯೂಸ್‌18 ವರದಿ ಮಾಡಿದೆ.