ನವದೆಹಲಿ(ಏ.12): ರಷ್ಯಾದ ಸ್ಪುಟ್ನಿಕ್‌-5 ಕೊರೋನಾ ಲಸಿಕೆಗೆ ಇನ್ನು 10 ದಿನಗಳಲ್ಲಿ ಭಾರತದಲ್ಲಿ ಅನುಮತಿ ದೊರೆಯಲಿದ್ದು, ಇದೂ ಸೇರಿದಂತೆ ಅಕ್ಟೋಬರ್‌ ಒಳಗೆ ಒಟ್ಟು 5 ಹೊಸ ಕೊರೋನಾ ಲಸಿಕೆಗಳಿಗೆ ದೇಶದಲ್ಲಿ ಅನುಮತಿ ಸಿಗಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಭಾರತದಲ್ಲಿ ಸದ್ಯ ಕೋವಿಶೀಲ್ಡ್‌ ಮತ್ತು ಕೋವಾಕ್ಸಿನ್‌ ಲಸಿಕೆಗಳಿಗಷ್ಟೇ ಅನುಮತಿಯಿದ್ದು, ಅವುಗಳನ್ನೇ ಜನರಿಗೆ ನೀಡಲಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ಕೊರೋನಾ ಲಸಿಕೆಯ ಕೊರತೆ ಕಾಣಿಸಿಕೊಳ್ಳುತ್ತಿದೆ. ಈ ಮಧ್ಯೆ, ಸುಮಾರು 20 ಬೇರೆ ಬೇರೆ ಕೊರೋನಾ ಲಸಿಕೆಗಳು ದೇಶದಲ್ಲಿ ಪ್ರಯೋಗದ ವಿವಿಧ ಹಂತದಲ್ಲಿವೆ. ಅವುಗಳ ಪೈಕಿ ರಷ್ಯಾದ ಸ್ಪುಟ್ನಿಕ್‌-5 ಲಸಿಕೆಯ ಪ್ರಯೋಗ ಬಹುತೇಕ ಪೂರ್ಣಗೊಂಡಿದ್ದು, 10 ದಿನದಲ್ಲಿ ಅದಕ್ಕೆ ಕೇಂದ್ರ ಸರ್ಕಾರದ ಔಷಧ ನಿಯಂತ್ರಣ ಪ್ರಾಧಿಕಾರ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಿದೆ ಎಂದು ಹೇಳಲಾಗಿದೆ. ಈ ಲಸಿಕೆಯನ್ನು ಭಾರತದಲ್ಲಿ ಡಾ| ರೆಡ್ಡೀಸ್‌ ಕಂಪನಿ ಜನರ ಮೇಲೆ ಪ್ರಯೋಗ ನಡೆಸುತ್ತಿದ್ದು, ಅನುಮತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ.

ಜೊತೆಗೆ, ಅಕ್ಟೋಬರ್‌ ಒಳಗೆ ಜಾನ್ಸನ್‌ ಅಂಡ್‌ ಜಾನ್ಸನ್‌, ನೋವಾವಾಕ್ಸ್‌, ಜೈಡಸ್‌ ಕ್ಯಾಡಿಲಾ ಹಾಗೂ ಇಂಟ್ರಾನೇಸಲ್‌ (ಮೂಗಿನ ಮೂಲಕ ತೆಗೆದುಕೊಳ್ಳುವ) ಲಸಿಕೆಗೂ ಸರ್ಕಾರದ ಅನುಮತಿ ಸಿಗಲಿದೆ ಎಂದು ಹೇಳಲಾಗಿದೆ.

ಸ್ಪುಟ್ನಿಕ್‌ ಲಸಿಕೆಯನ್ನು ಭಾರತದಲ್ಲಿ ಹೈದರಾಬಾದ್‌ನ ಡಾ| ರೆಡ್ಡೀಸ್‌ ಲ್ಯಾಬೋರೇಟರಿ, ಹೆಟೆರೊ ಬಯೋಫಾರ್ಮಾ, ಗ್ಲಾಂಡ್‌ ಫಾರ್ಮಾ, ಸ್ಟೆಲಿಸ್‌ ಬಯೋಫಾರ್ಮಾ ಹಾಗೂ ವಿಕ್ರೋ ಬಯೋಟೆಕ್‌ ಕಂಪನಿಗಳಲ್ಲಿ ಈಗಾಗಲೇ ತಯಾರಿಸಲಾಗುತ್ತಿದೆ. ಈ ಲಸಿಕೆಗೆ ಒಪ್ಪಿಗೆ ದೊರೆತರೆ ಲಸಿಕೆ ಅಭಿಯಾನಕ್ಕೆ ಇನ್ನಷ್ಟುವೇಗ ಲಭಿಸಲಿದೆ. ಸದ್ಯ ವರ್ಷಕ್ಕೆ 85 ಕೋಟಿ ಸ್ಪುಟ್ನಿಕ್‌ ಲಸಿಕೆಯನ್ನು ತಯಾರಿಸುವ ಸಾಮರ್ಥ್ಯ ಭಾರತದ ವಿವಿಧ ಘಟಕಗಳಿಗಿದೆ.

ಸ್ಪುಟ್ನಿಕ್‌ಗೆ ಈಗಲೇ ಒಪ್ಪಿಗೆ ದೊರೆತರೆ ಜೂನ್‌ ವೇಳೆಗೆ ಅದು ಜನರಿಗೆ ಸಿಗಲಿದೆ. ಜಾನ್ಸನ್‌ ಅಂಡ್‌ ಜಾನ್ಸನ್‌ (ಅಮೆರಿಕ) ಹಾಗೂ ಜೈಡಸ್‌ ಕ್ಯಾಡಿಲಾ (ಭಾರತ) ಲಸಿಕೆ ಆಗಸ್ಟ್‌ನಲ್ಲಿ, ನೋವಾವಾಕ್ಸ್‌ (ಸೀರಂ) ಲಸಿಕೆ ಸೆಪ್ಟೆಂಬರ್‌ನಲ್ಲಿ ಹಾಗೂ ನೇಸಲ್‌ ಲಸಿಕೆ (ಭಾರತ್‌ ಬಯೋಟೆಕ್‌) ಅಕ್ಟೋಬರ್‌ನಲ್ಲಿ ಜನರ ಬಳಕೆಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.