ಶ್ರೀನಗರ(ಮೇ.06): ಸಾಮಾಜಿಕ ಬೇಧ ಭಾವ, ಧಾರ್ಮಿಕ ಅಂತರ ಇವೆಲ್ಲವೂ ಸಂಕಷ್ದ ಪರಿಸ್ಥಿತಿ ಕ್ಷಣಮಾತ್ರದಲ್ಲಿ ಅಳಿಸಿ ಹಾಕುತ್ತದೆ. ಇದಕ್ಕೆ ತಕ್ಕ ಉದಾಹರಣೆಯಂತಿದೆ ಗಡಿ ನಗರ ಮೆಂಧಾರ್‌ನಲ್ಲಿ ನಡೆದ ಮಾನವೀಯ ಕಾರ್ಯ.

ಹೌದು ಕೊರೋನಾದಿಂದ ಸದ್ಯ ಪರಿಸ್ಥಿತಿ ಬಿಗಡಾಯಿಸಿದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬನಿಗೆ ಸೋಂಕು ತಗುಲಿದೆ ಎಂದಾಗ ತಮ್ಮವರೇ ದೂರ ಉಳಿಯುತ್ತಾರೆ. ಹೀಗಿರುವಾಗ ಅನಾಥರ ಪಾಡೇನು? ಇಲ್ಲೂ ಒಬ್ಬ ಹಿಂದೂ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದಾರೆ. ಹೀಗಿರುವಾಗ ಕೊರೋನಾ ತಗುಲುವ ಭಯದಿಂದ ಎಲ್ಲರೂ ಆಕೆ ಬಳಿ ಸುಳಿದಾಡಲು ಹೆದರುತ್ತಿದ್ದರು. ಇಂತಹ ಸಂದರ್ಭದಲ್ಲಿ ಮಾನವೀಯತೆಯೇ ಮೇಲು ಎಂದು ಜಾತಿ, ಧರ್ಮ ಎಂಬ ರೇಖೆಯನ್ನು ಅಳಿಸಿ ಹಾಕಿದ ಆಂಬುಲೆನ್ಸ್ ಚಾಲಕ, ಮುಸ್ಲಿಂ ವ್ಯಕ್ತಿ ಮೀರ್‌ ಅಹ್ಮದ್ ಅನಾಥ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. 

6 ಲಕ್ಷ ಮಂದಿ ಹೊಟ್ಟೆ ತುಂಬಿಸಲು 120 ದಿನದಲ್ಲಿ 2 ಕೋಟಿ ರೂ. ಖರ್ಚು ಮಾಡಿದ ಕುಟುಂಬ!

ಕೊರೋನಾ ಮಹಾಮಾರಿ ದೇಶವನ್ನು ಕಾಡುತ್ತಿರುವ ಸಂದರ್ಭದಲ್ಲಿ, ಧರ್ಮವನ್ನು ಮುಂದಿಟ್ಟುಕೊಂಡು ಗಲಭೆ ನಡೆಸುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಿರುವಾಗ ಜಮ್ಮು ಕಾಶ್ಮೀರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಂಬುಲೆನ್ಸ್ ಚಾಲಕನಾಗಿ ಸೇವೆ ಸಲ್ಲಿಸುವ ಮೀರ್‌ ಅಹ್ಮದ್ ಧಾರ್ಮಿಕ ವಿಚಾರವನ್ನು ಬದಿಗಿಟ್ಟು, ಮಾನವೀಯತೆಗೆ ಮಹತ್ವ ಕೊಟ್ಟಿರುವುದು ಎಲ್ಲರಿಗೂ ಮಾದರಿ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಇಲ್ಲಿನ ಡಾಕ್ಟರ್‌ ಒಬ್ಬರು 'ಕಳೆದೆರಡು ದಿನಗಳ ಹಿಂದೆ ಅನಾಮಿಕ, ಬುದ್ಧಿಮಾಂದ್ಯ ಮಹಿಳೆಯೊಬ್ಬರು ಉಸಿರಾಡಲಾಗದೆ ರಸ್ತೆಯಲ್ಲೇ ಬಿದ್ದು ನರಳಾಡುತ್ತಿದ್ದರು. ಕೂಡಲೇ ಅವರನ್ನು ಪೊಲೀಸರು ಮೆಂಧಾರ್‌ನ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಇಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ, ಆ ಮಹಿಳೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ದುರಾದೃಷ್ಟವಶಾತ್ ಈ ಅನಾಥ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಲು ಯಾರೂ ಮುಂದಾಗಲಿಲ್ಲ. ಅಂತಿಮವಾಗಿ ಮುಸ್ಲಿಂ ಆಂಬುಲೆನ್ಸ್ ಚಾಲಕ ಈ ಕಾರ್ಯ ತಾನು ಮಾಡುವುದಾಗಿ ಮುಂದೆ ಬಂದಿದ್ದಾರೆ' ಎಂದಿದ್ದಾರೆ.

ಪಿಪಿಇ ಕಿಟ್ ಧರಿಸಿದ ಮೀರ್‌ ಅಹ್ಮದ್ ಹಿಂದೂ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ನೆರವೇರಿಸಿ ಅಗ್ನಿ ಸ್ಪರ್ಶ ಮಾಡಿದ್ದಾರೆ. ತಮ್ಮ ಈ ಮಾನವೀಯ ನಡೆ ಮೂಲಕ ಮೀರ್‌ ಅಹ್ಮದ್ ಭಾರತೀಯ ಹೃದಯ ಗೆದ್ದಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona