ಇಸ್ಲಾಮಾಬಾದ್‌[ಮಾ.03]: ತಮ್ಮ ದೇಶದಲ್ಲಿ ಸೆರೆ ಸಿಕ್ಕ ಭಾರತೀಯ ಯೋಧ ಅಭಿನಂದನ್‌ ಅವರನ್ನು ಶಾಂತಿಯ ಸಂಕೇತವಾಗಿ ಭಾರತಕ್ಕೆ ಬಿಡುಗಡೆ ಮಾಡಿ, ಉಭಯ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಿದ, ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ನೊಂಬೆಲ್‌ ಶಾಂತಿ ಪುರಸ್ಕಾರ ನೀಡಬೇಕೆಂಬ ಪ್ರಸ್ತಾಪವೊಂದು ಸಂಸತ್ತಿಗೆ ಸಲ್ಲಿಕೆಯಾಗಿದೆ.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್‌ ಚೌಧರಿ ಈ ಕುರಿತ ಪ್ರಸ್ತಾಪವನ್ನು ಪಾಕಿಸ್ತಾನ ಸಂಸತ್ತಿನ ಕೆಳಮನೆಗೆ ಸಲ್ಲಿಸಿದ್ದು, ಅದು ಸೋಮವಾರ ಚರ್ಚೆಗೆ ಬರಲಿದೆ. ಭಾರತೀಯ ವಾಯು ಸೇನೆಯ ಪೈಲಟ್‌ ವಿಂಗ್‌ ಕಮಾಂಡರ್‌ ಅಭಿನಂದನ್‌ ಪಾಕಿಸ್ತಾನ ವಶಕ್ಕೆ ಸಿಕ್ಕ ಸಂದರ್ಭದಲ್ಲಿ ಇಡೀ ಪ್ರಕರಣವನ್ನು ಜಾಣ್ಮೆಯಿಂದ ನಿಭಾಯಿಸಿದ್ದಾರೆ. ಪೈಲಟ್‌ರನ್ನು ಭಾರತಕ್ಕೇ ಹಸ್ತಾಂತರಿಸುವ ನಿರ್ಧಾರ ಬಹಳ ಮಹತ್ವದ್ದಾಗಿದೆ.

ಶಾಂತಿ ಬಯಸಿ ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಶ್ರಮಿಸುತ್ತಿದ್ದಾರೆ ಎಂದು ನಿರ್ಣಯ ಮಂಡನೆಗಾಗಿ ಸಲ್ಲಿಸಲಾದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.