Asianet Suvarna News Asianet Suvarna News

ಈ ಸಲದ ಗಣರಾಜ್ಯೋತ್ಸವದ ಪ್ರಥಮಗಳು..!

ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಬಸವಣ್ಣನವರ ಅನುಭವ ಮಂಟಪದ ಸ್ತಬ್ಧಚಿತ್ರ ಈ ಬಾರಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದೆ. 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ್ದ ಬಸವಣ್ಣನವರ ಪರಿಕಲ್ಪನೆ ರಾಜಪಥದಲ್ಲಿ ಅನಾವರಣಗೊಳ್ಳಲಿದೆ. ಈ ಸ್ತಬ್ಧಚಿತ್ರದಲ್ಲಿ ಕಾಯಕವೇ ಕೈಲಾಸ, ದೇಹವೇ ದೇಗುಲ, ದಯವೇ ಧರ್ಮದ ಮೂಲವಯ್ಯ ಎನ್ನುವ ಮೂರು ಅಂಶಗಳನ್ನು ಮುಖ್ಯವಾಗಿ ಚಿತ್ರಿಸಲಾಗಿದೆ.

Republic Day 2020 Witness First ever Karnataka Anubhava mantapa tableau
Author
Bengaluru, First Published Jan 26, 2020, 9:33 AM IST
  • Facebook
  • Twitter
  • Whatsapp

ನವದೆಹಲಿ (ಜ. 26): ಸಂವಿಧಾನ ಜಾರಿಗೆ ಬಂದು ಭಾರತ ಗಣರಾಜ್ಯವಾಗಿ 70 ವರ್ಷಗಳನ್ನು ಪೂರೈಸಿದೆ. ಗಣರಾಜ್ಯೋತ್ಸವದ ವಿಶೇಷವೆಂದರೆ ದೆಹಲಿಯ ರಾಜಪಥ್‌ನಲ್ಲಿ ನಡೆಯುವ ಮೆರವಣಿಗೆ. ಈ ಬಾರಿಯ ಗಣರಾಜ್ಯೋತ್ಸವ ಅನೇಕ ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ.

ಯುದ್ಧ ಸ್ಮಾರಕದಲ್ಲಿ ಪ್ರಮುಖ ಕಾರ‍್ಯಕ್ರಮ

ಈ ಬಾರಿ ಗಣರಾಜ್ಯೋತ್ಸವದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಆಕರ್ಷಣೆಯ ಕೇಂದ್ರಬಿಂದು ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಶಸ್ತ್ರ ಪಡೆಗಳ ಮುಖ್ಯಸ್ಥ ಮತ್ತು ಮೂವರು ಸೇನಾ ಮುಖ್ಯಸ್ಥರ ಜೊತೆಗೂಡಿ ಇಂಡಿಯಾ ಗೇಟ್‌ ಸಮೀಪವೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಲಿದ್ದಾರೆ. ಗಣರಾಜ್ಯೋತ್ಸವದ ವೇಳೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು.

ಅಮರ್‌ ಜವಾನ್‌ ಜ್ಯೊತಿಗೆ ನಮನ ಇಲ್ಲ

ಗಣರಾಜ್ಯೋತ್ಸವದ ದಿನ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ದೆಹಲಿಯ ಇಂಡಿಯಾ ಗೇಟ್‌ ಬಳಿ 1972ರಲ್ಲಿ ನಿರ್ಮಾಣಗೊಂಡ ಅಮರ್‌ ಜವಾನ್‌ ಜ್ಯೋತಿ ಸ್ಮಾರಕದಲ್ಲೇ ಪ್ರಧಾನಿ ಗೌರವ ಸಲ್ಲಿಸುವುದು ಇದುವರೆಗೆ ನಡೆದ ಸಂಪ್ರದಾಯ. ಆದರೆ ಈ ಬಾರಿ ಗಣರಾಜ್ಯೋತ್ಸವ ಪರೇಡ್‌ಗೆ ಆಗಮಿಸುವ ಮುನ್ನ ಅವರು ಇಂಡಿಯಾ ಗೇಟ್‌ನಲ್ಲಿ ಅಮರ್‌ ಜವಾನ್‌ ಜ್ಯೋತಿಗೆ ಪುಷ್ಪಗುಚ್ಚ ಅರ್ಪಿಸುವ ಸಂಪ್ರದಾಯಕ್ಕೆ ತೆರೆ ಬೀಳಲಿದೆ. ಅದರ ಬದಲು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಸಶಸ್ತ್ರ ಪಡೆಯ ಮುಖ್ಯಸ್ಥರ ಉಪಸ್ಥಿತಿ

ಇದೇ ಮೊದಲ ಬಾರಿ ಸಶಸ್ತ್ರ ಪಡೆಯ ಮುಖ್ಯಸ್ಥರು ಗಣರಾಜ್ಯೋತ್ಸವದ ವೇಳೆ ಭೂ ಸೇನೆ, ವಾಯು ಪಡೆ ಮತ್ತು ನೌಕಾ ಪಡೆಗಳನ್ನು ಪ್ರತಿನಿಧಿಸಲಿದ್ದಾರೆ. ಸೇನಾ ಪಡೆಯ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಜ ಬಿಪಿನ್‌ ರಾವತ್‌ ಅವರು ಜ.1ರಂದು ದೇಶದ ಮೊದಲ ಸಶಸ್ತ್ರ ಪಡೆಯ ಮುಖ್ಯಸ್ಥ ಹುದ್ದೆಯನ್ನು ವಹಿಸಿಕೊಂಡಿದ್ದರು. ಮೂರೂ ಸೇನೆಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ಪ್ರಧಾನ ಸಲಹೆಗಾರರಾಗಿ ಕಾರ‍್ಯನಿರ್ವಹಿಸುವ ಸಲುವಾಗಿ ಇತ್ತೀಚೆಗಷ್ಟೇ ಈ ಹುದ್ದೆಯನ್ನು ಸೃಷ್ಟಿಲಾಗಿದೆ.

ಉಪಗ್ರಹ ಛೇದಕ ಕ್ಷಿಪಣಿ ಪ್ರದರ್ಶನ

ಭಾರತ ಕಳೆದ ವರ್ಷದ ಮಾಚ್‌ರ್‍ನಲ್ಲಿ ಮಿಷನ್‌ ಶÜಕ್ತಿ ಹೆಸರಿನಲ್ಲಿ ಅಂತರಿಕ್ಷದಲ್ಲೇ ಉಪಗ್ರಹವನ್ನು ಛೇದಿಸಬಲ್ಲ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿತ್ತು. ಈ ಮೂಲಕ ಈ ಸಾಧನೆ ಮಾಡಿದ ಅಮೆರಿಕ, ರಷ್ಯಾ ಹಾಗೂ ಚೀನಾ ಸಾಲಿಗೆ ಭಾರತ ಸೇರ್ಪಡೆ ಆಗಿತ್ತು. ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈ ಕ್ಷಿಪಣಿ ಮೊದಲ ಬಾರಿ ಪ್ರದರ್ಶನಗೊಳ್ಳಲಿದೆ.

ಅಪಾಚೆ, ಚಿನೂಕ್‌ ಕಾಪ್ಟರ್‌ ಆಕರ್ಷಣೆ

ಭಾರತೀಯ ವಾಯುಪಡೆಗೆ ಹೊಸದಾಗಿ ಸೇರ್ಪಡೆ ಆಗಿರುವ ಅಪಾಚೆ ಹಾಗೂ ಚಿನೂಕ್‌ ಹೆಲಿಕಾಪ್ಟರ್‌ಗಳು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೊದಲ ಬಾರಿ ಹಾರಾಟ ನಡೆಸಲಿವೆ. ಮೂರು ಚಿನೂಕ್‌ ಹೆಲಿಕಾಪ್ಟರ್‌ಗಳು ರಾಜಪಥದ ಮೇಲೆ ಹಾರಾಟ ಕೈಗೊಳ್ಳಲಿವೆ. ಬಳಿಕ ಅಪಾಚೆ ಹೆಲಿಕಾಪ್ಟರ್‌ಗಳು ಹಿಂಬಾಲಿಸಲಿವೆ. ಇದೇ ವೇಳೆ ಭಾರತೀಯ ವಾಯುಪಡೆಯ ಟ್ಯಾಬ್ಲೋನಲ್ಲಿ ರಫೇಲ್‌ ಯುದ್ಧ ವಿಮಾನದ ಮಾದರಿಯನ್ನು ಪ್ರದರ್ಶಿಸಲಾಗುತ್ತದೆ.

ದೇಶಿ ಬೋಫೋರ್ಸ್‌ ಫಿರಂಗಿ ಅನಾವರಣ

ದೇಶಿ ಬೋಫೋರ್ಸ್‌ ಎಂದೇ ಹೆಸರಾಗಿರುವ ಧನುಷ್‌ ಫಿರಂಗಿಗಳು ಗಣರಾಜ್ಯೋತ್ಸವದ ವೇಳೆ ಪ್ರಮುಖ ಆಕರ್ಷಣೆ ಎನಿಸಲಿವೆ. ಸ್ವದೇಶಿ ನಿರ್ಮಿತ ಈ ಫಿರಂಗಿಯನ್ನು ಪರೇಡ್‌ನಲ್ಲಿ ಮೊದಲ ಬಾರಿ ಪದರ್ಶಿಸಲಾಗುತ್ತಿದೆ. ಏರ್‌ ಡಿಫೆನ್ಸ್‌ ಟೆಕ್ನಿಕಲ್‌ ಕಂಟ್ರೋಲ್‌ ರಾಡಾರ್‌ ಅನ್ನು ಕೂಡ ಪರೇಡ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಇದೇ ವೇಳೆ ಸ್ವದೇಶಿ ನಿರ್ಮಿತ ಕೆ-9 ವಜ್ರ ಟ್ರಾಂಕರ್‌ ಕೂಡ ಪ್ರದರ್ಶನಗೊಳ್ಳಿದೆ.

ಮಹಿಳಾ ಬೈಕರ್‌ ತಂಡದ ಪ್ರದರ್ಶನ

ಮಹಿಳೆಯರ ಸಿಆರ್‌ಪಿಎಫ್‌ ಬೈಕ್‌ ಸವಾರರ ತಂಡ ಈ ಬಾರಿಯ ಗಣರಾಜ್ಯೋತ್ಸವದ ವೇಳೆ ಮೊದಲ ಬಾರಿ ಸಾಹಸ ಪ್ರದರ್ಶನ ನೀಡಲಿದೆ. 65 ಸದಸ್ಯರ ಈ ತಂಡ 360 ಸಿಸಿಯ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಬೈಕಿನಲ್ಲಿ ಚಮತ್ಕಾರಿಕ ಕೌಶಲ್ಯಗಳನ್ನು ಪ್ರದರ್ಶಿಸಲಿದೆ. 2014ರಲ್ಲಿ ಮಹಿಳಾ ಸಿಆರ್‌ಪಿಎಫ್‌ ಬೈಕರ್‌ ತಂಡವನ್ನು ಸ್ಥಾಪಿಸಲಾಗಿತ್ತು.

ಕೇಂದ್ರಾಡಳಿತ ಪ್ರದೇಶವಾಗಿ ಕಾಶ್ಮೀರ ಭಾಗಿ

ಭಾರತದ ಮುಕುಟಗಾಗಿರುವ ಜಮ್ಮು-ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿದ್ದ ಆರ್ಟಿಕಲ್‌ 370ಯನ್ನು ರದ್ದು ಮಾಡಿದ ಬಳಿಕ ಜಮ್ಮು-ಕಾಶ್ಮಿರ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲಾಗಿದೆ. ಹಾಗಾಗಿ ಈ ಗಣರಾಜ್ಯೋತ್ಸವದಲ್ಲಿ ಜಮ್ಮು ಕಾಶ್ಮೀರವು ಮೊದಲ ಬಾರಿ ಕೇಂದ್ರಾಡಳಿತ ಪ್ರದೇಶವಾಗಿ ಭಾಗವಹಿಸಲಿದ್ದು, ಅಲ್ಲಿನ ಸ್ತಬ್ಧಚಿತ್ರವು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಂಚರಿಸಲಿದೆ.

ಬ್ರೆಜಿಲ್‌ ಅಧ್ಯಕ್ಷ ಮುಖ್ಯ ಅತಿಥಿ

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸೊನಾರೋ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇವರು ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿ ಭಾರತಕ್ಕೆ ಆಗಮಿಸುತ್ತಿದ್ದಾರೆ.

ದೆಹಲಿಯಲ್ಲಿ ಬಿಗಿ ಭದ್ರತೆ

ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಆರಂಭವಾಗುವ ರಾಜಪಥದಿಂದ ಇಂಡಿಯಾ ಗೇಟ್‌ವರೆಗೆ ಸುಮಾರು 8 ಕಿ.ಮೀ. ಗಣರಾಜ್ಯೋತ್ಸವದ ಪರೇಡ್‌ ನಡೆಯಲಿದೆ. ಈ ಪ್ರದೇಶದ 5 ಕಿ.ಮೀ ಸುತ್ತಲೂ ಸೂಕ್ಷ್ಮಪ್ರದೇಶ ಎಂದು ಘೋಷಿಸಲಾಗಿದೆ. ದೆಹಲಿಯಲ್ಲಿ ಒಟ್ಟು 22 ಸಾವಿರ ದೆಹಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಾಜಪಥದ ಸುತ್ತ 10 ಸಾವಿರ ಪೊಲೀಸರು ನಿಯೋಜನೆಗೊಂಡಿದ್ದಾರೆ. ವೇದಿಕೆ ಸುತ್ತ ಎನ್‌ಎಸ್‌ಜಿ, ಎಸ್‌ಪಿಜಿ, ಐಟಿಬಿಪಿ ಭದ್ರತಾ ಪಡೆಗಳನ್ನು ಹಲವು ಸುತ್ತಿನಲ್ಲಿ ನಿಯೋಜಿಸಲಾಗಿದೆ.

ಸುಲಭ ಸಂಚಾರಕ್ಕೆ 2 ಸಾವಿರ ಟ್ರಾಫಿಕ್‌ ಪೊಲೀಸರನ್ನು ನೇಮಕ ಮಾಡಿದ್ದು, 150 ಉನ್ನತ ತಂತ್ರಜ್ಞಾನದ ಸಿಸಿಟಿವಿಗಳನ್ನು ಅಳವಡಿಸಿದೆ. ಭದ್ರತೆ ದೃಷ್ಟಿಯಿಂದ ಎತ್ತರದ ಕಟ್ಟಡಗಳಲ್ಲಿ ಶಾಪ್‌ರ್‍ ಶೂಟರ್‌ಗಳನ್ನು ನೇಮಕ ಮಾಡಿದ್ದು, ಡ್ರೋನ್‌ ಕ್ಯಾಮರಗಳನ್ನು ಅಳವಡಿಸಲಾಗಿದೆ. ಈ ಬಾರಿ ಫೇಶಿಯಲ್‌ ರೆಕಗ್ನಿಷನ್‌ ತಂತ್ರಜ್ಞಾನವನ್ನೂ ಬಳಕೆ ಮಾಡಿಕೊಳ್ಳಲಾಗಿದೆ. ಕೇವಲ ರಾಜಪಥ ಮಾತ್ರವಲ್ಲದೆ ದೆಹಲಿಯ ಎಲ್ಲ ಮೆಟ್ರೋ ರೈಲು, ವಿಮಾನ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸಿದ್ದು, ಸಿಎಎ, ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆಗಳಾಗದಂತೆ ಎಚ್ಚರಿಕೆ ವಹಿಸಲಾಗಿದೆ.

- 8 ಕಿಮೀ ಪರೇಡ್‌

- 22 ಸಾವಿರ ಪೊಲೀಸರ ನಿಯೋಜನೆ

- 150 ಹೈಟೆಕ್‌ ಸಿಸಿಟೀವಿ ಅಳವಡಿಕೆ

- ಎತ್ತರದ ಕಟ್ಟಡಗಳಲ್ಲಿ ಶಾಪ್‌ರ್‍ ಶೂಟ​ರ್‍ಸ್

- ಪರೇಡ್‌ ಮೇಲೆ ಡ್ರೋನ್‌ ಕ್ಯಾಮರಾ ಕಣ್ಗಾವಲು

- ಮೊದಲ ಬಾರಿ ಫೇಶಿಯಲ್‌ ರೆಕಗ್ನಿಶನ್‌ ತಂತ್ರಜ್ಞಾನ ಬಳಕೆ

ಕರ್ನಾಟಕದ ಸ್ತಬ್ಧಚಿತ್ರ ಅನುಭವ ಮಂಟಪ

ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಬಸವಣ್ಣನವರ ಅನುಭವ ಮಂಟಪದ ಸ್ತಬ್ಧಚಿತ್ರ ಈ ಬಾರಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದೆ. 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ್ದ ಬಸವಣ್ಣನವರ ಪರಿಕಲ್ಪನೆ ರಾಜಪಥದಲ್ಲಿ ಅನಾವರಣಗೊಳ್ಳಲಿದೆ. ಈ ಸ್ತಬ್ಧಚಿತ್ರದಲ್ಲಿ ಕಾಯಕವೇ ಕೈಲಾಸ, ದೇಹವೇ ದೇಗುಲ, ದಯವೇ ಧರ್ಮದ ಮೂಲವಯ್ಯ ಎನ್ನುವ ಮೂರು ಅಂಶಗಳನ್ನು ಮುಖ್ಯವಾಗಿ ಚಿತ್ರಿಸಲಾಗಿದೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ಬಸವಣ್ಣನವರ ಪ್ರತಿಕೃತಿ ನಿರ್ಮಿಸಲಾಗಿದೆ. ಹಿಂಭಾಗದಲ್ಲಿ ಅನುಭವ ಮಂಟಪ, ಅದರೊಳಗೆ ಅಕ್ಕಮಹಾದೇವಿ, ಅಲ್ಲಮ ಪ್ರಭು ಸೇರಿ ಕೆಲವು ಪಾತ್ರಗಳನ್ನು ಕಲಾವಿದರು ಅಭಿನಯಿಸಲಿದ್ದಾರೆ. ಇದರೊಟ್ಟಿಗೆ ಕರ್ನಾಟಕದ ಜಾನಪದ ನೃತ್ಯಗಳ ಪ್ರದರ್ಶನ ಕೂಡ ನಡೆಯಲಿದೆ.

Follow Us:
Download App:
  • android
  • ios