Asianet Suvarna News Asianet Suvarna News

ಪರಂಪರೆ-ಆಧುನಿಕತೆಯನ್ನು ಬೆಸೆದ ದಿವ್ಯಚೇತನ ದೀನ ದಯಾಳ್ ಉಪಾಧ್ಯಾಯ

ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವು ದೀನದಯಾಳರು ಕಂಡಿದ್ದ ಮುನ್ನೋಟದ ಹಾದಿಯಲ್ಲಿಯೇ ಹೆಜ್ಜೆಯಿಡುತ್ತಾ ಮುಂದೆ ಸಾಗುತ್ತಿದೆ. ಇಂದು ಉಪಾಧ್ಯಾಯರ 104 ನೇ ಜನ್ಮದಿನ. ಅವರ ಬಗ್ಗೆ ತಿಳಿಯೋಣ ಬನ್ನಿ!

Remembering and Recalling Pandit Deendayal Upadhyaya on his 104 th Birth Anniversary
Author
Bengaluru, First Published Sep 25, 2020, 11:11 AM IST

ಭಾರತೀಯ ಜನತಾ ಪಕ್ಷ ಇದೀಗ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಜನ್ನಮನ್ನಣೆಗೆ ಪಾತ್ರವಾಗಿ ಅಧಿಕಾರದಲ್ಲಿದೆ. ಅದರ ಜನಬೆಂಬಲದ ತಳಹದಿ ಇನ್ನೂ ವಿಸ್ತಾರವಾಗುತ್ತಲೂ ಸಾಗಿದೆ. ಪಕ್ಷದ ವಿಚಾರಧಾರೆಗಳು, ಪ್ರತಿಪಾದನೆಗಳು, ತತ್ವ ಸಿದ್ಧಾಂತಗಳು ಜನಸಮೂಹಕ್ಕೆ ಒಪ್ಪಿತವಾಗಿರುವುದೇ ಇದಕ್ಕೆ ಕಾರಣ. ಈ ಯಶಸ್ಸಿನ ಹಿಂದಿನ ಮರ್ಮವೇನು ಎಂದು ಹುಡುಕುತ್ತಾ ಹೋದರೆ ಅದು ನಮಗೆ ಪಂಡಿತ ದೀನದಯಾಳ್‌ ಉಪಾಧ್ಯಾಯರು ಹಾಕಿದ ತಾತ್ವಿಕ ಪ್ರತಿಪಾದನೆಗಳ ಅಸ್ತಿವಾರದ ದರ್ಶನವಾಗುತ್ತದೆ.

ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ತನ್ನ ಆಡಳಿತವನ್ನು ತಾನೇ ನಡೆಸಿಕೊಳ್ಳಲು ಆರಂಭಿಸಿದ್ದ ದಿನಗಳು ಅವು. ಅಂತಹ ಆರಂಭದ ದಿನಗಳಲ್ಲೇ ಭಾರತ ಅನುಸರಿಸಲು ಹೊರಟಿದ್ದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ನೀತಿಗಳ ಅಪಾಯವನ್ನು ದೀನದಯಾಳರು ಸ್ಪಷ್ಟವಾಗಿ ಮನಗಂಡಿದ್ದರು. ಪಾಶ್ಚಿಮಾತ್ಯ ದೇಶಗಳ ವ್ಯಕ್ತಿವಾದ, ಸಮಾಜವಾದ, ಕಮ್ಯುನಿಸಂ ಮತ್ತಿತರ ಪ್ರತಿಪಾದನೆಗಳು ವ್ಯಕ್ತಿಯ ಸಮಗ್ರ ವಿಕಾಸಕ್ಕೆ ಪೂರಕವಾದವುಗಳಲ್ಲ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. ಇವೆಲ್ಲವುಗಳಿಗಿಂತ ಮಿಗಿಲಾದ, ವ್ಯಕ್ತಿ ವಿಕಾಸಕ್ಕೆ ಅನುವು ಮಾಡಿಕೊಡುವಂತಹ ರಾಜಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ಜೀವನ ಪದ್ಧತಿ ನಮ್ಮ ಪರಂಪರೆಯಲ್ಲಿ ಮುಂಚಿನಿಂದಲೇ ಅಡಕವಾಗಿದೆ ಎಂಬುದನ್ನು ಅವರು ಮನಗಂಡಿದ್ದರು.

ಪತ್ರಿಕೆಯಿಂದ ರಾಷ್ಟ್ರೀಯತೆಯ ಜಾಗೃತಿ

ದೀನದಯಾಳರು ಎಷ್ಟು ಸಂಯಮಶೀಲರೋ ಅಷ್ಟೇ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಶ್ರೇಷ್ಠ ವಿದ್ಯಾರ್ಥಿಯಾಗಿದ್ದ ಅವರು ವ್ಯಾಸಂಗ ಮುಗಿಸಿದ ಸಂದರ್ಭದಲ್ಲಿ ಕುಟುಂಬದ ಹಿರಿಯರು ಒಳ್ಳೆಯ ಸರ್ಕಾರಿ ಉದ್ಯೋಗಕ್ಕೆ ಸೇರಿ ಬದುಕು ಕಟ್ಟಿಕೊಳ್ಳುವಂತೆ ಅವರಿಗೆ ಹೇಳಿದ್ದರು. ಮನಸ್ಸು ಮಾಡಿದ್ದರೆ ಅವರಿಗೆ ಅದನ್ನು ಪಡೆಯುವುದು ಕಷ್ಟವೂ ಆಗುತ್ತಿರಲಿಲ್ಲ. ಆದರೆ ಅವರು ಆ ಬಗ್ಗೆ ಮನಸ್ಸು ಮಾಡಲಿಲ್ಲ. ತಾನು ಏನು ಮಾಡಬೇಕೆಂಬ ಬಗ್ಗೆ ತಮ್ಮದೇ ದೃಷ್ಟಿಕೋನ ಹೊಂದಿದ್ದ ಅವರು, ಉತ್ತರ ಪ್ರದೇಶದಲ್ಲಿ ‘ರಾಷ್ಟ್ರಧರ್ಮ’ ಪ್ರಕಾಶನ ಸ್ಥಾಪಿಸಿದರು. ಆ ಮೂಲಕ ‘ರಾಷ್ಟ್ರಧರ್ಮ’ ಎಂಬ ಮಾಸ ಪತ್ರಿಕೆ, ‘ಪಾಂಚಜನ್ಯ’ ಎಂಬ ವಾರ ಪತ್ರಿಕೆ ಹಾಗೂ ‘ಸ್ವದೇಶಿ’ ಎಂಬ ದಿನಪತ್ರಿಕೆಗಳು ಹೊರಬರಲು ಕಾರಣರಾದರು. ಸ್ವತಃ ಲೇಖನಗಳನ್ನು ಬರೆಯುವ ಜೊತೆಗೆ ಮೊಳೆ ಅಚ್ಚು ಜೋಡಿಸುವುದರಿಂದ ಹಿಡಿದು ಬಂಡಲ್‌ ಕಟ್ಟಿಅದನ್ನು ಜನರಿಗೆ ತಲುಪಿಸುವ ಕಾರ್ಯದವರೆಗೆ ಪ್ರತಿಯೊಂದು ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಸುಮಾರು 15 ವರ್ಷ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲೂ ಅವರು ತೆಗೆದುಕೊಂಡ ಕಠಿಣ ನಿರ್ಧಾರಗಳಿಗೆ ಸಾಕಷ್ಟುಉದಾಹರಣೆಗಳು ಸಿಗುತ್ತವೆ.

ಬಿಹಾರ: ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಅಮೆರಿಕಾ ಮಾದರಿ

ಅಖಂಡ ಭಾರತದ ವಿಶಿಷ್ಟಕಲ್ಪನೆ

ದೀನ ದಯಾಳರು ಚುನಾವಣಾ ರಾಜಕೀಯವನ್ನೂ ಎದುರಿಸಿದ್ದರು. ಆದರೆ, ಅವರು ಎಂದಿಗೂ ಗೆಲ್ಲುವುದಕ್ಕಾಗಿ ರಾಜಕಾರಣ ಮಾಡಿದವರಲ್ಲ. ಚುನಾವಣೆಯಲ್ಲಿ ಗೆಲ್ಲಬೇಕೆಂಬ ಕಾರಣಕ್ಕಾಗಿ ಅವರು ಎಂದೂ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ‘ಕೇವಲ ಗೆಲ್ಲಬೇಕು ಎಂಬುದಕ್ಕಾಗಿ ನಾನು ಚುನಾವಣೆಯಲ್ಲಿ ನಿಲ್ಲುವುದಿಲ್ಲ’ ಎಂದು ಸ್ಪಷ್ಟವಾದ ಮಾತುಗಳಲ್ಲಿ ಪ್ರಕಟಿಸಿದ್ದರು. ಅದಕ್ಕೆ ಬದಲಾಗಿ, ಅದು ಗೆಲುವೇ ಆಗಿರಲಿ ಅಥವಾ ಸೋಲೇ ಆಗಿರಲಿ, ಅದರಲ್ಲಿ ಒಂದು ಮೌಲ್ಯಯುತವಾದ ಸಂದೇಶ ಇರಬೇಕು ಎಂಬುದು ಅವರ ಸಂಕಲ್ಪವಾಗಿತ್ತು.

ಅವರ ‘ಅಖಂಡ ಭಾರತ’ ಕಲ್ಪನೆಯೇ ವಿಶಿಷ್ಟವಾದುದು. ಸಾಂಸ್ಕೃತಿಕ ಏಕತೆ ಸಾಧಿಸಲು ಪರಿಶ್ರಮಿಸಿದ ಶ್ರೀ ಶಂಕರಾಚಾರ್ಯರು, ರಾಜಕೀಯ ಏಕತೆ ಸಾಧಿಸಲು ಬಯಸಿದ ಚಾಣಕ್ಯ, ಶ್ರೀ ಅರವಿಂದರ ಪ್ರತಿಪಾದನೆಗಳ ಸಾರವನ್ನು ಹೀರಿಕೊಂಡು ಒಡಮೂಡಿದ ಕಲ್ಪನೆ ಇದಾಗಿದೆ. ಇವರ ವೈಚಾರಿಕ ನಿಲುವುಗಳು ಗಾಂಧೀಜಿಯವರ ಹಲವು ವಿಚಾರಧಾರೆಗಳೊಂದಿಗೆ ಕೂಡ ಸಾಮ್ಯತೆ ಹೊಂದಿವೆ. ‘ಅಖಂಡ ಭಾರತ’ ಎಂದರೆ ಅದು ಕೇವಲ ಭೌತಿಕ ಗಡಿ ರೇಖೆಯ ಸರಹದ್ದಲ್ಲ. ಬದಲಾಗಿ ‘ಅಖಂಡ ಭಾರತ’ ಎಂಬುದು ಪರಿಪೂರ್ಣತೆಗೆ ತುಡಿಯುವ ಒಂದು ಜೀವನ ದೃಷ್ಟಿಎಂಬುದು ಅವರ ನಿಲುವಾಗಿತ್ತು.

ತಾಳ್ಮೆ, ಸಂಯಮದ ಮೂರ್ತಿ

ದೀನದಯಾಳರ ನೀತಿ, ನಿಲುವು, ಪ್ರತಿಪಾದನೆಗಳಲ್ಲಿ ಆವೇಶ ಎಂಬುದು ಎಳ್ಳಷ್ಟೂಇರಲಿಲ್ಲ. ಬದಲಿಗೆ ಸಹಿಷ್ಣುತೆ, ತಾಳ್ಮೆ, ಸಂಯಮ ಅವರ ಮೂಲ ಗುಣಗಳಾಗಿದ್ದವು. ತನ್ನ ಪ್ರತಿಪಾದನೆಯನ್ನು ಬಲವಂತವಾಗಿ ಒಪ್ಪಿಸಬೇಕು ಎಂಬ ಹಟ ಅವರಿಗೆ ಎಂದಿಗೂ ಇರಲಿಲ್ಲ. ಬದಲಾಗಿ ವಿಷಯವನ್ನು ಪರಿಣಾಮಕಾರಿಯಾಗಿ ಮನಮುಟ್ಟಿಸಬೇಕು ಎಂಬುದು ಅವರ ನಂಬಿಕೆಯಾಗಿತ್ತು. ‘ನುಡಿದರೆ ಲಿಂಗ ಮೆಚ್ಚೆ ಅಹುದಹುದೆನ್ನಬೇಕು’ ಎಂಬುದಕ್ಕೆ ಅಪ್ಪಟ ನಿದರ್ಶನವಾಗಿ ಅವರು ಬದುಕಿದ್ದರು.

ಅವರು ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದರು. ‘ಅಖಂಡ ಭಾರತ’ದ ವೈವಿಧ್ಯತೆ ಉಳಿಯಬೇಕೆಂದರೆ ವಿಕೇಂದ್ರೀಕೃತ ರಾಜಕೀಯ ವ್ಯವಸ್ಥೆ ಅತ್ಯಗತ್ಯ ಎಂಬುದು ಅವರ ಸ್ಪಷ್ಟನಿಲುವಾಗಿತ್ತು. ಒಕ್ಕೂಟ ವ್ಯವಸ್ಥೆಯು ಯಾವತ್ತಿಗೂ ವೈವಿಧ್ಯಕ್ಕೆ ಕುತ್ತು ತರಬಾರದು ಎಂಬ ಎಚ್ಚರಿಕೆಯನ್ನು ಅವರು ಹೊಂದಿದ್ದರು.

 

BSY ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಮಂಡನೆ..!

ಅವರ ಹೆಜ್ಜೆಯಲ್ಲಿಯೇ ಇಂದಿನ ಬಿಜೆಪಿ

ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವು ದೀನದಯಾಳರು ಕಂಡಿದ್ದ ಮುನ್ನೋಟದ ಹಾದಿಯಲ್ಲಿಯೇ ಹೆಜ್ಜೆಯಿಡುತ್ತಾ ಮುಂದೆ ಸಾಗುತ್ತಿದೆ. ಕಾಶ್ಮೀರದ ವಿಷಯವೇ ಆಗಿರಬಹುದು, ರಾಷ್ಟ್ರೀಯ ಶಿಕ್ಷಣ ನೀತಿಯೇ ಆಗಿರಬಹುದು, ಮೇಕ್‌ ಇನ್‌ ಇಂಡಿಯಾ, ಸ್ವಚ್ಛ ಭಾರತ್‌ ಸೇರಿದಂತೆ ಅನೇಕ ಯೋಜನೆ ಹಾಗೂ ಅಭಿಯಾನಗಳೇ ಇರಬಹುದು- ಇವೆಲ್ಲದರಲ್ಲೂ ಅವರು ಪ್ರತಿಪಾದಿಸಿದ್ದ ನೀತಿಗಳು ಕಾಣಿಸುತ್ತಿವೆ.

ಉಪಾಧ್ಯಾಯರು ವಿರೋಧಿಗಳೂ ಒಪ್ಪುವಂತಹ ತಾರ್ಕಿಕ ವಿಶ್ಲೇಷಣಾ ಶಕ್ತಿ ಹೊಂದಿದ್ದರು. ಪರಂಪರೆಯ ಬೇರಿನೊಂದಿಗೆ ಅಧುನಿಕತೆಯ ತೇರು ಎಳೆಯುವ ಸಂಕಲ್ಪ ಅವರದ್ದಾಗಿತ್ತು. ಪಾಶ್ಚಿಮಾತ್ಯ ಚಿಂತನೆಯು ಕೇವಲ ಜ್ಞಾನೇಂದ್ರಿಯಗಳ ಗ್ರಹಿಕೆಯನ್ನಷ್ಟೇ ಆಧರಿಸಿದ್ದಾಗಿದೆ. ಆದರೆ, ಭಾರತೀಯ ದರ್ಶನವು ಇವುಗಳ ಜೊತೆಗೆ ‘ಪ್ರಜ್ಞೆ’ ಎಂಬುದನ್ನು ಒಳಗೊಂಡಿದೆ. ಹೀಗಾಗಿ, ಪಾಶ್ಚಿಮಾತ್ಯ ತತ್ವವು ಕೇವಲ ಭೌತಿಕವಾದಿಯಾಗಿದ್ದರೆ, ಭಾರತೀಯ ಚಿಂತನೆಯು ಅದನ್ನು ಮೀರಿದ್ದಾಗಿದೆ. ಅದು ಬದುಕಿನ ನಿರಂತರ ಹರಿವಿಗೆ ಇಂಬು ನೀಡುವಂತದ್ದಾಗಿದೆ ಎಂಬುದು ಅವರ ಪ್ರತಿಪಾದನೆಯಾಗಿತ್ತು.

ಸಂಸ್ಕಾರದಿಂದ ಕೂಡಿದ ರಾಷ್ಟ್ರ ನಿರ್ಮಾಣವೇ ನಮ್ಮ ಅಂತಿಮ ಧ್ಯೇಯವಾಗಬೇಕು ಎಂದು ಅವರು ಹಲವು ಬಾರಿ ಪ್ರತಿಪಾದಿಸಿದ್ದರು. ಭಾರತೀಯ ಜನಸಂಘದ ಸ್ಥಾಪಕರಾದ ಶ್ಯಾಂ ಪ್ರಸಾದ್‌ ಮುಖರ್ಜಿ ಅವರು ‘ಮತ್ತೊಬ್ಬ ದೀನದಯಾಳರು ನನ್ನ ಜೊತೆ ಇದ್ದಿದ್ದರೆ ಭಾರತದ ರಾಜಕೀಯ ಚಿತ್ರಣವನ್ನೇ ಬದಲಿಸುತ್ತೇನೆ’ ಎಂದು ಉದ್ಗರಿಸಿದ್ದು ದೀನದಯಾಳರ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ.

ಭಾರತೀಯ ಪರಂಪರೆಯ ಪ್ರತಿಪಾದಕ

ದೀನ ದಯಾಳರ ಜೀವನ ದೃಷ್ಟಿವಿಚ್ಛಿದ್ರಕಾರಿ ಆಗಿರಲಲ್ಲ. ಇದಕ್ಕೆ ಬದಲಾಗಿ, ವ್ಯಷ್ಟಿ-ಸಮಷ್ಟಿ-ಪರಮೇಷ್ಟಿಪ್ರಜ್ಞೆಯಿಂದ ಕೂಡಿದ ಬದುಕು ಅವರದ್ದಾಗಿತ್ತು. ‘ಯಾವುದು ಸಮರ್ಥವೋ ಅದು ಬದುಕುಳಿಯುತ್ತದೆ’ (ಸರ್ವೈವಲ್‌ ಆಫ್‌ ದಿ ಫಿಟ್ಟೆಸ್ಟ್‌) ಎಂದ ಡಾರ್ವಿನ್‌ ಹಾಗೂ ಕಾಲ್‌ರ್‍ ಮಾರ್ಕ್ಸ್‌ ಸಿದ್ಧಾಂತಗಳ ಪರಿಮಿತಿ ಏನೆಂಬುದನ್ನು ಅವರು ಮನಗಂಡಿದ್ದರು. ಹಾಗೆಯೇ, ಭಾರತೀಯ ಋುಷಿ ಮುನಿಗಳ ಜೀವನದರ್ಶನ ಹೇಗೆ ವ್ಯಕ್ತಿಯ ಆಂತರಿಕ ವಿಕಾಸಕ್ಕೆ ಪೂರಕ ಎಂಬುದನ್ನು ಮನಗಂಡವರಾಗಿದ್ದರು. ಎಲ್ಲವನ್ನೂ ಒಂದಕ್ಕೊಂದು ಬೆಸೆದುಕೊಂಡು ಐಕ್ಯವಾಗುವ ಸಮನ್ವಯ ಮಾರ್ಗ ಅವರದ್ದಾಗಿತ್ತು. ಅಧ್ಯಾತ್ಮಿಕತೆ-ಲೌಕಿಕತೆ, ಪರಂಪರೆ-ಆಧುನಿಕತೆ ಇವುಗಳ ಮಿಳಿತ ಎಂದರೇನು ಎಂಬುದನ್ನು ಗ್ರಹಿಸಿದ್ದ ವ್ಯಕ್ತಿತ್ವ ಅವರದ್ದಾಗಿತ್ತು. ಪ್ರಕೃತಿಯ ಮೇಲೆ ಹಿಡಿತ ಸಾಧಿಸುವ ಪಾಶ್ಚಿಮಾತ್ಯ ದೃಷ್ಟಿಕೋನವನ್ನು ಅವರು ಎಂದಿಗೂ ಒಪ್ಪಲಿಲ್ಲ. ಬದಲಿಗೆ ಅವರು ಪ್ರಕೃತಿಯನ್ನು ಮಾತೆ ಎಂದು ಪರಿಭಾವಿಸಿದ್ದರು. ಜಗತ್ತು ಇಂದು ಕೊರೋನಾ ಸಂಕಷ್ಟದಲ್ಲಿ ಸಿಲುಕಿರುವಾಗ ಅವರು ಪ್ರಕೃತಿಯೆಡೆಗೆ ಹೊಂದಿದ್ದ ಧೋರಣೆ ಕೂಡ ಎಷ್ಟುಪ್ರಸ್ತುತವಾದುದು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಭಾರತೀಯ ಚಿಂತನೆಯಲ್ಲಿ ಹುದುಗಿರುವ ‘ಏಕಾತ್ಮ ಮಾನವತೆಯ ದರ್ಶನವು’ ವಿಶ್ವಾತ್ಮಕ ದೃಷ್ಟಿಗೆ ಪೂರಕವಾಗಿದೆ. ಈ ವಿಶ್ವಾತ್ಮಕ ದೃಷ್ಟಿಯು ಅಂತಾರಾಷ್ಟ್ರೀಯವಾದಕ್ಕಿಂತ ಭಿನ್ನವಾದುದು. ಭಾರತೀಯ ಸಂಸ್ಕೃತಿ ಕೋಮುವಾದಿಯಾದುದಲ್ಲ. ಅದು ಒಂದು ಪುಸ್ತಕ ಅಥವಾ ವ್ಯಕ್ತಿಯನ್ನು ಅಂತಿಮ ಪ್ರಮಾಣವೆಂದು ಒಪ್ಪುವುದಿಲ್ಲ. ‘ವಾದೇ ವಾದೇ ಜಾಯತೇ ತತ್ವÜಬೋಧಃ’ (ವಿಚಾರ-ವಿಮರ್ಶೆಯ ಮೂಲಕ ತತ್ವದ ಅರಿವು ಉಂಟಾಗುತ್ತದೆ) ಎಂಬುದು ಅದರ ನಿಲುವು. ಹೀಗಾಗಿ ಭಾರತೀಯ ಪರಂಪರೆ ಎಂದರೆ ಉಪನಿಷತ್ತುಗಳು ಮತ್ತು ತತ್ವಶಾಸ್ತ್ರದ ಪರಂಪರೆಯೇ ಆಗಿದೆ ಎಂದು ಪ್ರಚುರಪಡಿಸಿದರು.

ಭಾರತೀಯ ಸಂಸ್ಕೃತಿಯು ರಾಜ್ಯವನ್ನು ಬದುಕಿನ ಕೇಂದ್ರ ಎಂದು ಭಾವಿಸುವುದಿಲ್ಲ. ಧರ್ಮ ಮತ್ತು ಸಂಸ್ಕೃತಿಗಳನ್ನು ಬದುಕಿನ ಕೇಂದ್ರವೆಂದು ಭಾವಿಸುತ್ತದೆ. ‘ಯತ್‌ ಪಿಂಡೇ ತತ್‌ ಬ್ರಹ್ಮಾಂಡೇ’ (ಯಾವುದು ಪಿಂಡದಲ್ಲಿದೆಯೋ ಅದೇ ಬ್ರಹ್ಮಾಂಡದಲ್ಲೂ ಇದೆ) ಹಾಗೂ ‘ಆತ್ಮವತ್‌ ಸರ್ವಭೂತೇಷು’ (ಜಗತ್ತಿನಲ್ಲಿ ಸಂಪೂರ್ಣವಾಗಿ ಒಂದೇ ಆತ್ಮ ವ್ಯಾಪಿಸಿಕೊಂಡಿರುತ್ತದೆ) ಎಂಬುದೇ ಭಾರತದ ಚಿಂತನೆಯಾಗಿದೆ. ಹೀಗಾಗಿ ಭಾರತೀಯ ಸಂಸ್ಕೃತಿ ಸಂಘರ್ಷವಾದಿಯಲ್ಲ ಬದಲಿಗೆ ಇದು ‘ಸಮನ್ವಯವಾದಿ’ ಆಗಿದೆ ಎಂಬುದು ಅವರ ಪ್ರತಿಪಾದನೆಯಾಗಿತ್ತು.

ಪ್ರಾಯೋಗಿಕ ಚಿಂತನೆಯ ವಿಚಾರವಂತ

ದೆಹಲಿಗೆ ಸುಮಾರು 150 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಮಥುರಾ ಸಮೀಪದ ಹಳ್ಳಿಯೊಂದರಲ್ಲಿ ಹುಟ್ಟಿದ ದೀನ ದಯಾಳರು ರಾಜಕೀಯದಲ್ಲಿ ಸಂಸ್ಕೃತಿಯ ರಾಯಭಾರಿಯಾಗಿದ್ದರು. ಚಿಕ್ಕಂದಿನಲ್ಲೇ ತಂದೆ-ತಾಯಿಯರನ್ನು ಕಳೆದುಕೊಂಡು, ಒಡಹುಟ್ಟಿದವರ ಸಾವನ್ನು ಕಂಡು, ಕಷ್ಟ-ನಷ್ಟಗಳನ್ನು ಉಂಡು ಬೆಳೆದಿದ್ದ ದೀನದಯಾಳರು ಕಾರ್ಯಸಾಧುವಾದ ಪ್ರಾಯೋಗಿಕ ನೆಲೆಯ ಚಿಂತನೆಗಳನ್ನು ಹೊಂದಿದ್ದರು. ಕಾಶ್ಮೀರ ವಿಷಯವೇ ಇರಲಿ, ಅಣು ಬಾಂಬ್‌ ಹೊಂದುವ ವಿಷಯವಿರಲಿ, ಸ್ವದೇಶಿ, ಸ್ವಾಭಿಮಾನ, ಜನಪದ, ಭಾಷಾ ನೀತಿ, ಶಿಕ್ಷಣ ನೀತಿ ಇವುಗಳೆಲ್ಲದರಲ್ಲೂ ದೀನದಯಾಳರು ಪ್ರಾಯೋಗಿಕವೆನ್ನಿಸುವ ಚಿಂತನೆಗಳನ್ನು ಹಾಗೂ ವೈಚಾರಿಕ ನಿಲುವುಗಳನ್ನು ಹೊಂದಿದ್ದರು. ಅವರು ಬದುಕಿದ್ದು ಕೇವಲ 52 ವರ್ಷ. ಆದರೆ ‘ಅಖಂಡ ಭಾರತ’ ಪರಿಕಲ್ಪನೆಯ ಬಗ್ಗೆ ಬೆಳಕು ಚೆಲ್ಲುತ್ತಲೇ ‘ವಿಶ್ವಾತ್ಮಕ ದೃಷ್ಟಿ’ ಪಸರಿಸಿದ ಅವರು ಎಲ್ಲರ ಮೈಮನಗಳಲ್ಲಿ ಬೆರೆತು ಸದಾ ಬೆಳಗುತ್ತಲೇ ಇರುತ್ತಾರೆ.

- ಕೆ.ಎನ್‌.ಚಕ್ರಪಾಣಿ, ಬಿಜೆಪಿ ಹಿರಿಯ ಮುಖಂಡ

Follow Us:
Download App:
  • android
  • ios