ಮುಂಬೈ[ಡಿ.03[]: ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗಿನ ಚುನಾವಣಾ ಪೂರ್ವ ಮೈತ್ರಿ ಮುರಿದ ಬಳಿಕ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಜೊತೆ ಮೈತ್ರಿ ಸಾಧಿಸಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಯತ್ನಿಸಿತ್ತು ಎಂಬ ವಿಚಾರವನ್ನು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಬಹಿರಂಗಪಡಿಸಿದ್ದಾರೆ.

ಅಲ್ಲದೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ತಮಗೆ ಇಂಥ ಆಫರ್‌ ನೀಡಿದ್ದರು ಎಂಬುದಾಗಿಯೂ ಪವಾರ್‌ ಹೇಳಿದ್ದಾರೆ. ಆದರೆ, ಈ ಆಫರ್‌ ಅನ್ನು ತಾನು ತಿರಸ್ಕರಿಸಿದ್ದೆ. ಅಲ್ಲದೆ, ಅಜಿತ್‌ ಪವಾರ್‌ ಅವರು ರಾತ್ರೋರಾತ್ರಿ ಬಿಜೆಪಿ ಪಾಳೆಯ ಸೇರಿ ಡಿಸಿಎಂ ಆಗಿದ್ದ ವಿಚಾರ ಮಾಧ್ಯಮಗಳಲ್ಲಿ ಬರುವವರೆಗೂ ತನಗೆ ತಿಳಿದಿರಲೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸೋಮವಾರ ಮರಾಠಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ಪವಾರ್‌, ‘ಪ್ರಧಾನಿ ಮೋದಿ ಅವರು ಜೊತೆಗೂಡಿ ಕಾರ್ಯ ನಿರ್ವಹಿಸುವ ಕುರಿತ ಪ್ರಸ್ತಾವನೆಯನ್ನು ನನ್ನ ಮುಂದಿಟ್ಟರು. ಆದರೆ, ನಿಮ್ಮ ಜೊತೆ ಕೆಲಸ ಮಾಡುವುದು ನನ್ನಿಂದ ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದೆ’ ಎಂದು ಹೇಳಿದ್ದಾರೆ.

ತಮ್ಮನ್ನು ರಾಷ್ಟ್ರಪತಿ ಮಾಡುತ್ತೇವೆ ಎಂದು ಮೋದಿ ಸರ್ಕಾರ ಆಮಿಷ ಹೊಡ್ಡಿತ್ತು ಎಂಬ ವರದಿಗಳನ್ನು ಅಲ್ಲಗೆಳೆದಿರುವ ಅವರು, ಸುಪ್ರಿಯಾ ಸುಳೆ ಅವರಿಗೆ ತಮ್ಮ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ನೀಡುವುದಾಗಿ ಮೋದಿ ಹೇಳಿದ್ದರು ಎಂದು ತಿಳಿಸಿದ್ದಾರೆ.