ನವದೆಹಲಿ[ಮಾ.09]: ಮಹಿಳಾ ದಿನದ ಅಂಗವಾಗಿ ಮೋದಿ ಅವರ ಟ್ವೀಟರ್‌ ಖಾತೆಯನ್ನು ನಿರ್ವಹಿಸಿ ಗೌರವಕ್ಕೆ ಪಾತ್ರವಾಗುವಂತೆ ಮೋದಿ ಅವರು ನೀಡಿದ್ದ ಆಹ್ವಾನವನ್ನು ಮುಣಿಪುರದ 8 ವರ್ಷದ ಬಾಲಕಿಯೊಬ್ಬಳು ತಿರಸ್ಕರಿಸಿದ್ದಾಳೆ.

ವಿಶ್ವ ಮಕ್ಕಳ ಪ್ರಶಸ್ತಿ, ಡಾ. ಎಪಿಜೆ ಅಬ್ದುಲ್‌ ಕಲಾಮ್‌ ಮಕ್ಕಳ ಪ್ರಶಸ್ತಿ, ವಿಶ್ವ ಮಕ್ಕಳ ಶಾಂತಿ ಪ್ರಶಸ್ತಿಗಳಿಗೆ ಭಾಜನವಾಗಿರುವ ಮಣಿಪುರದ ಪರಿಸರ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್‌ ಅಭಿಯಾನದಲ್ಲಿ ಆಯ್ಕೆ ಆದ ಸ್ಫೂರ್ತಿದಾಯಕ ಮಹಿಳೆಯರ ಪೈಕಿ ಒಬ್ಬಳಾಗಿದ್ದಳು. ಆದರೆ, ಈ ಆಹ್ವಾನವನ್ನು ತಿರಸ್ಕರಿಸಿರುವ ಲಿಸಿಪ್ರಿಯಾ, ‘ದೇಶದ ಸ್ಫೂರ್ತಿದಾಯಕ ಮಹಿಳೆಯರ ಪೈಕಿ ಒಬ್ಬಳಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಮೋದಿ ಅವರೇ ನನ್ನ ಧ್ವನಿಯನ್ನು ಕೇಳಿಸಿಕೊಳ್ಳದೇ ಇದ್ದರೆ ಅಭಿಯಾನಕ್ಕೆ ನನ್ನ ಹೆಸರನ್ನು ಸೇರಿಸಬೇಡಿ. ಹಲವು ಬಾರಿ ಯೋಚಿಸಿದ ಬಳಿಕ ಈ ಗೌರವವನ್ನು ತಿರಸ್ಕರಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಲಿಸಿಪ್ರಿಯಾ ಟ್ವೀಟ್‌ ಮಾಡಿದ್ದಾಳೆ.

‘ಹವಾಮಾನ ಬದಲಾವಣೆ ನಿಯಂತ್ರಿಸುವ ಕುರಿತು ನಾನು ಇಟ್ಟಬೇಡಿಕೆಯನ್ನು ಸರ್ಕಾರ ಕೇಳಿಸಿಕೊಂಡಿಲ್ಲ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣಗಳನ್ನು ಪರಿಗಣಿಸಿದರೆ ಸರ್ಕಾರ ಅವುಗಳ ನಿಯಂತ್ರಣಕ್ಕೆ ಸರ್ಕಾರ ಏನೂ ಮಾಡಿಲ್ಲ. ಇದು ಒಂದು ರೀತಿಯಲ್ಲಿ ಮುಖಕ್ಕೆ ಸೌಂದರ್ಯ ವರ್ಧಕ ಕ್ರೀಮ್‌ ಹಚ್ಚಿಕೊಂಡಂತೆ. ಮುಖ ತೊಳೆದ ಬಳಿಕ ಅದು ಅಳಿಸಿಹೋಗುತ್ತದೆ. ಇದರ ಬದಲು ಮೋದಿ ಅವರು ನನ್ನ ಧ್ವನಿಯನ್ನು ಕೇಳಿಸಿಕೊಳ್ಳಬೇಕು ಮತ್ತು ನಮ್ಮ ಮುಖಂಡರು ಹವಾಮಾನ ಬದಲಾವಣೆಯನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು ನಾನು ಬಯಸುತ್ತೇನೆ’ ಎಂದು ಲಿಸಿಪ್ರಿಯಾ ಹೇಳಿದ್ದಾಳೆ.

ಮಾರ್ಚ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ