ಹೈದರಾಬಾದ್‌ನ ರಾಮೇಶ್ವರಂ ಕೆಫೆಯು ತನ್ನ ಪಾರ್ಸಲ್ ಮತ್ತು ಪೇಪರ್ ಬ್ಯಾಗ್ ಶುಲ್ಕಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ₹150ರ ಪುಳಿಯೋಗರೆಗೆ ₹40 ಪ್ಯಾಕಿಂಗ್ ಶುಲ್ಕ ವಿಧಿಸಿದ್ದು, ಈ 'ಹಿಡನ್ ಚಾರ್ಜ್' ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ಹೈದರಾಬಾದ್ (ಮಾ.30): ದಕ್ಷಿಣ ಭಾರತದ ಖ್ಯಾತ ಫುಡ್ ಕೋರ್ಟ್ 'ದ ರಾಮೇಶ್ವರಂ ಕೆಫೆ' ಈಗ ಕೇವಲ ತನ್ನ ರುಚಿಯಾದ ತುಪ್ಪದ ಇಡ್ಲಿ ಅಥವಾ ಗರಿಗರಿಯಾದ ದೋಸೆಗಾಗಿ ಸುದ್ದಿಯಲ್ಲಿಲ್ಲ. ಬದಲಾಗಿ, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಅದರ 'ಪಾರ್ಸಲ್ ಚಾರ್ಜ್' ಮತ್ತು 'ಪೇಪರ್ ಬ್ಯಾಗ್' ಬೆಲೆಯಿಂದಾಗಿ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.
ಇತ್ತೀಚೆಗೆ ಹೈದರಾಬಾದ್‌ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ ಗ್ರಾಹಕರೊಬ್ಬರು ಕೇವಲ 150 ರೂಪಾಯಿಯ 'ಪುಳಿಯೋಗರೆ' ಆರ್ಡರ್ ಮಾಡಿದ್ದರು. ಆದರೆ ಬಿಲ್ ನೋಡಿದ ಅವರು ದಂಗಾಗಿದ್ದಾರೆ. ಏಕೆಂದರೆ ಆ ಪುಳಿಯೋಗರೆಯನ್ನು ಮನೆಗೆ ಕೊಂಡೊಯ್ಯಲು (Takeaway) ಕೆಫೆಯವರು ಬರೋಬ್ಬರಿ 40 ರೂಪಾಯಿ ಹೆಚ್ಚುವರಿ ಚಾರ್ಜ್ ಮಾಡಿದ್ದಾರೆ!
ಬಿಲ್‌ನಲ್ಲಿ ಏನಿದೆ?: ಅವರ ಬಿಲ್‌ನಲ್ಲಿ ಪುಳಿಯೊಗರೆಗೆ ಬೆಲೆಯೊಂದಿಗೆ, ಪಾರ್ಸಲ್ ಚಾರ್ಜ್ ಎಂದು ₹20 ರೂಪಾಯಿ, ಬ್ರೌನ್ ಪೇಪರ್ ಬ್ಯಾಗ್‌ಗಾಗಿ 20 ರೂಪಾಯಿ ಸೇರಿ ಒಟ್ಟು ಪ್ಯಾಕಿಂಗ್‌ಗಾಗಿ 40 ರೂಪಾಯಿ ಚಾರ್ಜ್‌ಅನ್ನು ಸೇರಿಸಿದ್ದಾರೆ. 'ಇದು ಸಂಪೂರ್ಣ ಅನೈತಿಕ. ಪಾರ್ಸಲ್ ಚಾರ್ಜ್ ಅಂದಮೇಲೆ ಅದರಲ್ಲೇ ಬ್ಯಾಗ್ ಕೂಡ ಬರಬೇಕಲ್ಲವೇ? ಒಂದು ಸಾದಾ ಪೇಪರ್ ಬ್ಯಾಗ್‌ಗೆ 20 ರೂಪಾಯಿ ವಸೂಲಿ ಮಾಡುವುದು ಯಾವ ನ್ಯಾಯ? 5 ಸ್ಟಾರ್ ಹೋಟೆಲ್‌ಗಳೂ ಈ ರೀತಿ ಮಾಡುವುದಿಲ್ಲ' ಎಂದು ಗ್ರಾಹಕರು ಎಕ್ಸ್‌ನಲ್ಲಿ ರಾಮೇಶ್ವರಂ ಕೆಫೆ ಬಿಲ್ ಹಾಗೂ ಪೇಪರ್ ಬ್ಯಾಗ್‌ನ ಫೋಟೋ ಜೊತೆ ಪೋಸ್ಟ್ ಮಾಡಿದ್ದಾರೆ.
ನೆಟ್ಟಿಗರ ಪರ-ವಿರೋಧ ಚರ್ಚೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಕೆಫೆಯ ಈ ನಡೆಯನ್ನು ಬೆಂಬಲಿಸಿ ಮತ್ತು ವಿರೋಧಿಸಿ ಹಲವರು ಕಾಮೆಂಟ್ ಮಾಡಿದ್ದಾರೆ. "ಮಾರುಕಟ್ಟೆಯಲ್ಲಿ 1 ರೂಪಾಯಿಗೆ ಸಿಗುವ ಬ್ರೌನ್ ಪೇಪರ್ ಬ್ಯಾಗ್‌ಗೆ 20 ರೂಪಾಯಿ ಚಾರ್ಜ್ ಮಾಡುವುದು ಹಗಲು ದರೋಡೆ. ಬ್ರ್ಯಾಂಡ್ ಹೆಸರಿನಲ್ಲಿ ಇಂತಹ ಲೂಟಿ ಮಾಡುವುದು ಸರಿಯಲ್ಲ" ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಪಾರ್ಸಲ್ ಚಾರ್ಜ್ ಎಂಬುದು ಗ್ರಾಹಕರನ್ನು ಸುಲಿಯುವ ಹೊಸ ದಾರಿ" ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಕೆಲವರು ಕೆಫೆಯ ಪರವಾಗಿ ಮಾತನಾಡಿದ್ದಾರೆ. "ಪರಿಸರ ಸ್ನೇಹಿ ಬ್ಯಾಗ್ ಮತ್ತು ಪ್ಯಾಕೇಜಿಂಗ್ ಕಾರ್ಮಿಕರ ಕೂಲಿ ಎಲ್ಲವೂ ಸೇರಿರುತ್ತದೆ. ಇಷ್ಟವಿಲ್ಲದಿದ್ದರೆ ಮನೆಯಿಂದಲೇ ಬಾಕ್ಸ್ ಮತ್ತು ಬ್ಯಾಗ್ ಹಿಡಿದುಕೊಂಡು ಹೋಗಿ" ಎಂದು ಟಾಂಗ್ ನೀಡಿದ್ದಾರೆ. "ಇದು ಖಾಸಗಿ ಸಂಸ್ಥೆ, ಬೆಲೆ ನಿಗದಿ ಮಾಡುವ ಅಧಿಕಾರ ಅವರಿಗಿದೆ, ಇಷ್ಟವಿದ್ದವರು ಮಾತ್ರ ಹೋಗಿ" ಎಂದು ಕೆಲವರು ವಾದಿಸಿದ್ದಾರೆ.
ಪುಳಿಯೋಗರೆಗೆ 150 ರೂಪಾಯಿನಾ?
ಕೆಲವು ನೆಟ್ಟಿಗರು ಮತ್ತೊಂದು ವಿಷಯದ ಬಗ್ಗೆ ಗಮನ ಸೆಳೆದಿದ್ದಾರೆ. "ಮನೆಯಲ್ಲೇ ಅತೀ ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಪುಳಿಯೋಗರೆಗೆ 150 ರೂಪಾಯಿ ಕೊಟ್ಟು ಕೆಫೆಯಲ್ಲಿ ತಿನ್ನುವುದೇ ತಪ್ಪು. ಅಷ್ಟೊಂದು ಹಣ ಕೊಟ್ಟು ತಿನ್ನುವವರಿಗೆ 40 ರೂಪಾಯಿ ಪ್ಯಾಕಿಂಗ್ ಚಾರ್ಜ್ ದೊಡ್ಡದಲ್ಲ" ಎಂದು ವ್ಯಂಗ್ಯವಾಡಿದ್ದಾರೆ. ರಾಮೇಶ್ವರಂ ಕೆಫೆಯ ಈ ವಿಚಿತ್ರ ಬೆಲೆ ನೀತಿ ಈಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದು, ಜನಸಾಮಾನ್ಯರು ಹೋಟೆಲ್‌ಗಳ ಈ 'ಹಿಡನ್ ಚಾರ್ಜ್'ಗಳ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಮಾಡಿದೆ.


