ಮೋದಿ ಸರ್ಕಾರದ ಉಜ್ವಲಾ, ಜನಧನ್‌ಗೆ ರಾಹುಲ್ ಮೆಚ್ಚುಗೆ
ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ 'ಉಜ್ವಲಾ' ಹಾಗೂ 'ಜನಧನ್' ಯೋಜನೆಗಳು ಒಳ್ಳೆಯ ಕಾರ್ಯಕ್ರಮಗಳು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೆಚ್ಚಿಕೊಂಡಿದ್ದಾರೆ.
ಲಂಡನ್: ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ 'ಉಜ್ವಲಾ' ಹಾಗೂ 'ಜನಧನ್' ಯೋಜನೆಗಳು ಒಳ್ಳೆಯ ಕಾರ್ಯಕ್ರಮಗಳು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೆಚ್ಚಿಕೊಂಡಿದ್ದಾರೆ. ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡುವುದು (ಉಜ್ವಲಾ) ಅಥವಾ ಜನರಿಗೆ ಬ್ಯಾಂಕ್ ಖಾತೆಗಳನ್ನು ಒದಗಿಸುವುದು (ಜನಧನ್) ಕೆಟ್ಟ ಯೋಜನೆಯಲ್ಲ, ಅದು ಒಳ್ಳೆಯ ಕೆಲಸ. ಮೋದಿ ಸರ್ಕಾರ 2-3 ಒಳ್ಳೆಯ ನೀತಿಗಳನ್ನು ತಂದಿದೆ ಎಂದು ಬ್ರಿಟನ್ನಿನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಭಾಷಣದ ವೇಳೆ ಪ್ರಶ್ನೆಯೊಂದಕ್ಕೆ ರಾಹುಲ್ ಉತ್ತರಿಸಿದ್ದಾರೆ.
ಆದರೆ ನಾನು ಹೀಗೆ ಹೇಳಿದಾಕ್ಷಣ ನನ್ನ ಆಶಯವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು. ನಾನು ಈ 2-3 ಒಳ್ಳೆಯ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಏಕೆಂದರೆ ಮೋದಿ ನಮ್ಮ ದೇಶವನ್ನು ಛಿದ್ರಗೊಳಿಸುತ್ತಿದ್ದಾರೆ ಎಂದೂ ರಾಹುಲ್ ವಾಗ್ದಾಳಿ ನಡೆಸಿದ್ದಾರೆ. ಸದಾ ಮೋದಿ ಸರ್ಕಾರವನ್ನು ಟೀಕಿಸುವ ರಾಹುಲ್ ಇದೇ ಮೊದಲ ಬಾರಿ ಕೇಂದ್ರ ಸರ್ಕಾರದ ಎರಡು ಯೋಜನೆಗಳನ್ನು ಮೆಚ್ಚಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಮೋದಿ ಸರ್ಕಾರ ಜಾರಿಗೆ ತಂದ ಬಡವರ ಪರ ಯೋಜನೆಗಳನ್ನು ರಾಹುಲ್ ಗಾಂಧಿ ಕೂಡ ಅನಿವಾರ್ಯವಾಗಿ ಮೆಚ್ಚಿಕೊಳ್ಳಬೇಕಾಗಿ ಬಂದಿದೆ ಎಂದು ಹೇಳಿದೆ.
ಕೇಂಬ್ರಿಜ್‌ನಲ್ಲಿ ರಾಹುಲ್‌ನಿಂದ ಚೀನಾ ಗುಣಗಾನ: ಬಿಜೆಪಿ ತಿರುಗೇಟು
ಬ್ರಿಟನ್ನಿನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿರುವ ರಾಹುಲ್ ಗಾಂಧಿ, ಭಾರತದ ಮೋದಿ ಸರ್ಕಾರದ ಕಾರ್ಯವಿಧಾನವನ್ನು ಒಂದೆಡೆ ಟೀಕಿಸಿದ್ದರೆ, ಇನ್ನೊಂದು ಕಡೆ ಭಾರತದ ವೈರಿದೇಶವಾದ ಚೀನಾವನ್ನು ‘ಸೂಪರ್ ಪವರ್’ ಹಾಗೂ ‘ಚೀನಾ: ಒಂದು ನೈಸರ್ಗಿಕ ಶಕ್ತಿ’ ಎಂದು ಹೊಗಳಿರುವುದು ವಿವಾದಕ್ಕೆ ಕಾರಣವಾಗಿದೆ. ರಾಹುಲ್ ನುಡಿಗಳನ್ನು ಬಿಜೆಪಿ ಬಲವಾಗಿ ಖಂಡಿಸಿದೆ.
ಕೇಂಬ್ರಿಜ್ ವಿವಿಯಲ್ಲಿ ವಿವಿಧ ವಿಷಯಗಳ ಮೇಲೆ ಮಾತನಾಡಿದ ರಾಹುಲ್, ‘ಅಮೆರಿಕನ್ನರು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಎಷ್ಟು ಗೌರವ ನೀಡುತ್ತಾರೋ ಅಷ್ಟೇ ಪ್ರಮಾಣದಲ್ಲಿ ಚೀನೀಯರು ಸೌಹಾರ್ದತೆಗೆ ಗೌರವ ನೀಡುತ್ತಾರೆ. ಚೀನಾದಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಷ್ಟು ಬೆಲೆಯಿಲ್ಲ. ಆದರೆ ಭೂಕಂಪ, ನಾಗರಿಕ ದಂಗೆಯಂಥ ಸವಾಲು ಎದುರಿಸಿರುವ ದೇಶದಲ್ಲಿ ಸೌಹಾರ್ದತೆಗೆ ಬೆಲೆ ನೀಡಲಾಗುತ್ತದೆ’ ಎಂದರು.
ನಾನು ಚೀನಾ ಬಗ್ಗೆ ತಜ್ಞನಲ್ಲ. ಆದರೆ ಸಾಕಷ್ಟು ಓದಿದ್ದೇನೆ. ಅಲ್ಲಿನ ಬಗ್ಗೆ ತಕ್ಕ ಮಟ್ಟಿಗೆ ತಿಳಿದಿದ್ದೇನೆ ಹಾಗೂ ಕಮ್ಯುನಿಸ್ಟ್ ಪಕ್ಷ ಕಟ್ಟಿದ ಅಲ್ಲಿನ ನಾಯಕರ ಜತೆ ಮಾತನಾಡಿದ್ದೇನೆ. ಆ ನಾಯಕರು ನನಗೆ ಚೀನಾದ ಹಳದಿ ನದಿಯ (yellow river)ಬಗ್ಗೆ ಹೇಳಿದರು. ಆ ನದಿ ಸಾಕಷ್ಟುಇಂಧನ ಶಕ್ತಿಯನ್ನು ಹೊಂದಿದೆ. ಆ ನದಿಯನ್ನು ಸದ್ಬಳಕೆ ಮಾಡಿಕೊಳ್ಳದೇ ಹೋದರೆ ಚೀನಾ ಆಡಳಿತ ಸರಿಯಿಲ್ಲ ಎಂದರ್ಥ ಎಂದು ಅವರು ನನಗೆ ಹೇಳಿದರು. ಇಂಥ ವಿಭಿನ್ನ ಚಿಂತನೆಯನ್ನು ನಾನು ಯಾವ ರಾಜಕಾರಣಿಯಲ್ಲೂ ಕೇಳಿರಲಿಲ್ಲ. ಆ ನದಿಯ ನೈಸರ್ಗಿಕ ಸಂಪತ್ತನ್ನು ಸದ್ಬಳಕೆ ಮಾಡಿಕೊಂಡು ಚೀನಾ ಅವುಗಳಿಗೆ ರೂಪ ನೀಡಿದೆ ಎಂಬುದನ್ನು ನೋಡಿ. ಅದೇ ರೀತಿ ಬೆಲ್ಟ್ ಆ್ಯಂಡ್ ರೋಡ್ ಯೋಜನೆ (ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ನಿರ್ಮಿಸಿದ ರಸ್ತೆ). ನೈಸರ್ಗಿಕ ಸಂಪತ್ತಿಗೆ ರೂಪು ನೀಡುವಲ್ಲಿ ಚೀನಾ (China) ಎತ್ತಿದ ಕೈ’ ಎಂದರು.
ದಾಖಲೆ ಸಮೇತ ರಾಹುಲ್ ಗಾಂಧಿ ಕೇಂಬ್ರಿಡ್ಜ್ ಭಾಷಣದ ಷಡ್ಯಂತ್ರ ಬಟಾ ಬಯಲು, ಕಾಂಗ್ರೆಸ್ ಕಂಗಾಲು!