ಮಾನ್ ಗೈರಲ್ಲಿ ಪಂಜಾಬ್ ಅಧಿಕಾರಿಗಳ ಜತೆ ಕೇಜ್ರಿ ಸಭೆ: ವಿವಾದ
* ಕೇಜ್ರಿವಾಲ್ ನಡೆಗೆ ವಿಪಕ್ಷಗಳ ಆಕ್ರೋಶ
* ಇದು ಪಂಜಾಬ್‌ಗೆ ಅವಮಾನ, ಕೇಜ್ರಿ, ಮಾನ್ ಕ್ಷಮೆ ಕೇಳಲಿ: ಬಿಜೆಪಿ
* ಪಂಜಾಬ್ ರಿಮೋಟ್ ಕಂಟ್ರೋಲ್ ಕೇಜ್ರಿ ಕೈಲಿ: ಸಿಧು ವ್ಯಂಗ್ಯ
* ಮಾನ್ ಕೇವಲ ರಬ್ಬರ್ ಸ್ಟ್ಯಾಂಪ್: ಅಮರೀಂದರ್ ಆಕ್ರೋಶ
ಚಂಡೀಗಢ(ಏ.13): ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಅನುಪಸ್ಥಿತಿಯಲ್ಲಿ ದೆಹಲಿಯ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಪಂಜಾಬಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪಂಬಾಬಿನ ರಿಮೋಟ್ ಕಂಟ್ರೋಲ್ ಇನ್ನು ಕೇಜ್ರಿವಾಲ್ ಕೈಯಲ್ಲಿದೆ ಎಂದು ವಿಪಕ್ಷಗಳು ಕಿಡಿಕಾರಿದ್ದು, ‘ಪಂಜಾಬ್ ಜನರಿಗೆ ಇದು ಅವಮಾನ. ಉಭಯ ನಾಯಕರ ಕ್ಷಮೆ ಕೋರಬೇಕು’ ಎಂದು ಒತ್ತಾಯಿಸಿವೆ.
ಕೇಜ್ರಿವಾಲ್ ಪಂಜಾಬ್ ರಾಜ್ಯ ವಿದ್ಯುತ್ ನಿಗಮದ ಅಧಿಕಾರಿಗಳೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿದ್ದರು. ಪಂಜಾಬಿನ ಪ್ರಧಾನ ಕಾರ್ಯದರ್ಶಿ ಹಾಗೂ ವಿದ್ಯುತ್ ಇಲಾಖೆ ಕಾರ್ಯದರ್ಶಿ ಕೂಡಾ ಉಪಸ್ಥಿತರಿದ್ದರು. ಸಭೆಯು ಮುಖ್ಯಮಂತ್ರಿ ಮಾನ್ ಅನುಪಸ್ಥಿತಿಯಲ್ಲಿ ಸಭೆ ನಡೆದಿದ್ದದ್ದು ವಿಪಕ್ಷಗಳನ್ನು ಕೆರಳಿಸಿದೆ.
ವಿಪಕ್ಷಗಳ ಕಿಡಿ:
‘ಇದು ಪಂಜಾಬಿನ ವಾಸ್ತವಿಕ ಸಿಎಂ ಯಾರು ಎಂಬುದು ತಿಳಿದು ಬರುತ್ತದೆ. ಪಂಜಾಬಿನ ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿದೆ. ಇದು ಪಂಜಾಬಿಗರಿಗೆ ಮಾಡಿದ ಅಪಮಾನ ಕೂಡಲೇ ಮಾನ್ ಹಾಗೂ ಕೇಜ್ರಿವಾಲ್ ಈ ಕುರಿತು ಸ್ಪಷ್ಟನೆ ನೀಡಬೇಕು’ ಎಂದು ಪಂಜಾಬಿನ ಮಾಜಿ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ‘ನನ್ನ ಕೆಟ್ಟಭಯ ನಿಜವಾಯಿತು. ನಾನು ಊಹಿಸಿದಂತೆ ಕೇಜ್ರಿವಾಲ್ ಪಂಜಾಬನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಮಾನ್ ಕೇವಲ ರಬ್ಬರ್ ಸ್ಟಾಂಪ್ ಎನ್ನುವುದು ಸಾಬೀತಾಗಿದೆ’ ಎಂದಿದ್ದಾರೆ.
ಇದಲ್ಲದೇ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ‘ಮಾನ್ ಪಂಜಾಬ್‌ನ ಆಡಳಿತ ನಿರ್ವಹಿಸುವಲ್ಲಿ ಸಕ್ಷಮರಾಗಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆಯೇ? ಪಂಜಾಬಿನ ಒಕ್ಕೂಟ ವ್ಯವಸ್ಥೆಯನ್ನು ಅವಮಾನಿಸಿದ್ದಕ್ಕಾಗಿ ಇಬ್ಬರೂ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಆಪ್ ಸಮರ್ಥನೆ:
ಆದರೆ ತನ್ನ ನಡೆಯನ್ನು ಆಪ್ ಸಮರ್ಥಿಸಿಕೊಮಡಿದೆ. ಆಪ್ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್ ಪ್ರತಿಕ್ರಿಯಿಸಿ, ‘ಕೇಜ್ರಿವಾಲ್ ನಮ್ಮ ರಾಷ್ಟ್ರೀಯ ಸಂಚಾಲಕರಾಗಿದ್ದಾರೆ. ನಾವು ಅವರ ಮಾರ್ಗದರ್ಶನವನ್ನು ಸ್ವೀಕರಿಸುತ್ತೇವೆ. ದೆಹಲಿಯಲ್ಲಿ ಪಂಜಾಬಿನ ಅಭಿವೃದ್ಧಿಗಾಗಿಯೇ ಅನೌಪಚಾರಿಕ ಸಭೆ ನಡೆದಿತ್ತು’ ಎಂದು ಹೇಳಿದ್ದಾರೆ.