ಪುಲ್ವಾಮಾ ದಾಳಿ: ಉಗ್ರ ಅಜರ್ ವಿರುದ್ಧ ರೆಡ್ ನೋಟಿಸ್| ಇಂಟರ್‌ಪೋಲ್‌ನಿಂದ ಬಂಧನ ನೋಟಿಸ್ ಜಾರಿ| 40 ಸಿಆರ್‌ಪಿಎಫ್ ಯೋಧರ ಹತ್ಯೆ ಪ್ರಕರಣ| ಘಟನೆ ನಡೆದ 2 ವರ್ಷದ ಬಳಿಕ ಕ್ರಮ| ಇದರಿಂದ ಪಾಕ್‌ಗೆ ಅಜರ್ ಬಂಧಿಸಲೇಬೇಕಾದ ಅನಿವಾರ‍್ಯತೆ
ನವದೆಹಲಿ(ಫೆ.15): 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರ, ಜೈಷ್ ಎ ಮಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮತ್ತು ಆತನ ಮೂವರು ಸಹಚರರ ವಿರುದ್ಧ ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿ ಮಾಡಿದೆ. ಘಟನೆ ನಡೆದ 2 ವರ್ಷಗಳ ಜಾರಿಯಾಗಿರುವ ಈ ನೋಟಿಸ್ ಬಗ್ಗೆ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಎನ್‌ಐಎದ ತನಿಖಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಟರ್‌ಪೋಲ್ ಹೊರಡಿಸಿರುವ ಈ ಜಾಗತಿಕ ರೆಡ್ ನೋಟಿಸ್‌ನಲ್ಲಿ (ಜಾಗತಿಕ ಬಂಧನದ ವಾರಂಟ್) ಅಜರ್, ಅಜರ್‌ನ ಸೋದರ ಅಬ್ದುಲ್ ರೌಫ್ ಅಸ್ಗರ್, ಇಬ್ರಾಹಿಂ ಅಥರ್ ಮತ್ತು ಸೋದರ ಸಂಬಂಧಿ ಅಮ್ಮರ್ ಅಲ್ವಿ ಸೇರಿದ್ದಾರೆ.
ಭಯೋತ್ಪಾದನೆ ನಿಗ್ರಹದಲ್ಲಿ ಪಾಕಿಸ್ತಾನ ಕೈಗೊಂಡಿರುವ ಕ್ರಮಗಳ ಕುರಿತು ಹಣಕಾಸು ಕಾರ್ಯಪಡೆ ಸರಣಿ ಸಭೆ ನಡೆಸಿ ಪರಿಶೀಲನೆ ನಡೆಸುತ್ತಿರುವ ಹೊತ್ತಿನಲ್ಲೇ, ಇಂಟರ್‌ಪೋಲ್ ಜಾರಿ ಮಾಡಿರುವ ನೋಟಿಸ್, ಪಾಕಿಸ್ತಾನದ ಮೇಲಿನ ಒತ್ತಡ ಹೆಚ್ಚಿಸಿದೆ.
ಅಜರ್ ಮತ್ತು ರೌಫ್ ವಿರುದ್ಧ ಇಂಟರ್‌ಪೋಲ್ ನೋಟಿಸ್ ಹೊರಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2001ರಲ್ಲಿ ಭಾರತದ ಸಂಸತ್ ಮೇಲೆ ನಡೆದ ದಾಳಿ ಪ್ರಕರಣ, 2016ರಲ್ಲಿ ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ನೋಟಿಸ್ ಜಾರಿ ಮಾಡಿತ್ತು. ಇನ್ನು 1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ಅಪಹರಣ ಪ್ರಕರಣದಲ್ಲೂ ರೌಫ್ ವಿರುದ್ಧ ಇಂಟರ್‌ಪೋಲ್ ನೋಟಿಸ್ ಜಾರಿ ಮಾಡಲಾಗಿದೆ.
ಹಣಕಾಸು ಕಾರ್ಯಪಡೆ ಒತ್ತಡಕ್ಕೆ ಒಳಗಾಗಿದ್ದ ಪಾಕ್ ಸರ್ಕಾರ, ಕೆಲ ತಿಂಗಳ ಹಿಂದಷ್ಟೇ ಅಜರ್ ಬಂಧನಕ್ಕೆ ಕಳೆದ ತಿಂಗಳು ವಾರಂಟ್ ಹೊರಡಿಸಿತ್ತು. ಈ ಮೂಲಕ ಮೊದಲ ಬಾರಿಗೆ ಆತ ತನ್ನ ದೇಶದಲ್ಲಿ ಇದ್ದಾನೆ ಎಂದು ಒಪ್ಪಿಕೊಂಡಿತ್ತು. ಭಾರತದಲ್ಲಿ ನಡೆದ ಹಲವು ಸ್ಫೋಟ ಪ್ರಕರಣಗಳಲ್ಲಿ ಜೈಷ್ ಪಾತ್ರ ಸಾಬೀತಾಗಿದ್ದರೂ, ಇದುವರೆಗೂ ಪಾಕಿಸ್ತಾನ ಸರ್ಕಾರ ಅಜರ್ ವಿರುದ್ಧ ಯಾವುದೇ ಉಗ್ರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ. ಆದರೆ ಇದೀಗ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಬೂದುಪಟ್ಟಿಯಿಂದ ಕಪ್ಪುಪಟ್ಟಿಗೆ ಸೇರುವ ಪಾಕ್ ಸೇರುವ ಸಾಧ್ಯತೆ ಇದೆ. ಹೀಗಾಗಿ ಉಗ್ರರ ವಿರುದ್ಧ ಪಾಕ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬಹುದೆಂಬ ವಿಶ್ವಾಸದಲ್ಲಿ ಎನ್‌ಐಎ ಅದಿಕಾರಿಗಳು ಇದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 15, 2021, 11:14 AM IST