* ರಾಂಚಿಯಲ್ಲಿ ಗುಂಡೇಟಿಗೆ ಗಾಯಗೊಂಡಿದ್ದ ಇಬ್ಬರ ಸಾವು, ಇನ್ನೂ 24 ಜನ ಆಸ್ಪತ್ರೆಯಲ್ಲಿ* ಪ.ಬಂಗಾಳದ ಹೌರಾದಲ್ಲಿ ಹಿಂಸೆ, ಅಶ್ರುವಾಯು* ಕಾಶ್ಮೀರದ ಚೀನಾಬ್‌ನಲ್ಲಿ ಉದ್ವಿಗ್ನ ಸ್ಥಿತಿ
ಲಖನೌ(ಜೂ.12): ಪ್ರವಾದಿ ಮೊಹಮ್ಮದರಿಗೆ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಬಂಧನಕ್ಕೆ ಆಗ್ರಹಿಸಿ ಶುಕ್ರವಾರ ನಡೆದ ಪ್ರತಿಭಟನೆಗಳು ಇಬ್ಬರನ್ನು ಬಲಿ ಪಡೆದಿವೆ. ದೇಶದ 10 ರಾಜ್ಯಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆದಿದ್ದವು. ಆದರೆ ಶನಿವಾರ ಬಹುತೇಕ ಕಡೆ ಸ್ಥಿತಿ ಶಾಂತವಾಗಿತ್ತು. ಶನಿವಾರ ಪ.ಬಂಗಾಳದ ಹೌರಾದಲ್ಲಿ ಮಾತ್ರ ಹಿಂಸಾಚಾರ ನಡೆದಿದೆ ಹಾಗೂ ಕಾಶ್ಮೀರದ ಚೀನಾಬ್‌ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಆದರೆ ಶುಕ್ರವಾರ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಹಿಂಸಾಚಾರದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಇಬ್ಬರು ಶನಿವಾರ ನಸುಕಿನ ಜಾವ, ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಈ ನಡುವೆ, 12 ಪೊಲೀಸರು ಹಾಗೂ 12 ನಾಗರಿಕರು ಸೇರಿ 24 ಮಂದಿ ಈ ಗಲಭೆ ವೇಳೆ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೌರಾದಲ್ಲಿ ಮತ್ತೆ ಕಲ್ಲೆಸೆತ:
ಪ್ರವಾದಿ ಅವಹೇಳನ ವಿರೋಧಿಸಿ ನೂಪುರ್ ಶರ್ಮಾ ಅವರ ಬಂಧನಕ್ಕೆ ಆಗ್ರಹಿಸಿ ಪಶ್ಚಿಮ ಬಂಗಾಳದಲ್ಲಿ 2ನೇ ದಿನವೂ ಹಿಂಸಾಚಾರ ಮುಂದುವರೆದಿದೆ. ಹೌರಾದಲ್ಲಿ ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಕಾಶ್ಮೀರದ ಚೀನಾಬ್‌ನಲ್ಲಿ ಕಫä್ರ್ಯ:
ಕಾಶ್ಮೀರದ ಚೀನಾಬ್‌ನಲ್ಲಿ ಶನಿವಾರ ಪ್ರವಾದಿ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಇಲ್ಲಿ ಕಫä್ರ್ಯ ವಿಧಿಸಲಾಗಿದೆ. ಶುಕ್ರವಾರ ಕಫä್ರ್ಯ ಹೇರಲಾಗಿದ್ದ ದೋಡಾ ಹಾಗೂ ಕಿಶ್‌್ತವಾರ್ ಶಾಂತವಾಗಿವೆ.
ಯುಪಿ: ಹಿಂಸಾಚಾರ ಎಸಗಿದವರ ಅಕ್ರಮ ಮನೆಗೆ ಬುಲ್ಡೋಜರ್
ಲಖನೌ: ಪ್ರವಾದಿ ಮೊಹಮ್ಮದ್ ಕುರಿತ ವಿವಾದಕ್ಕೆ ಸಂಬಂಧಿಸಿ ಶುಕ್ರವಾರ ಉತ್ತರ ಪ್ರದೇಶದ ವಿವಿಧೆಡೆ ಹಿಂಸಾಕೃತ್ಯಗಳನ್ನು ಎಸಗಿದ 227 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಕಾನ್ಪುರ ಮತ್ತು ಸಹಾರನ್‌ಪುರದಲ್ಲಿ ಹಿಂಸಾಕೃತ್ಯದಲ್ಲಿ ಭಾಗಿಯಾಗಿದ್ದ ಹಲವು ದುಷ್ಕರ್ಮಿಗಳಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಸಮಾಜಘಾತಕ ವ್ಯಕ್ತಿಗಳಿಗೆ ರಾಜ್ಯದಲ್ಲಿ ಜಾಗವಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಡುಗಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ‘ಪ್ರತಿ ಶುಕ್ರವಾರದ ನಂತರ ಶನಿವಾರ ಬರುತ್ತೆ’ ಎಂದು ಬುಲ್ಡೋಜರ್ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
ನೂಪುರ್ ಶಿರಚ್ಛೇದಕ್ಕೆ ಕರೆ: ಇಬ್ಬರ ವಿರುದ್ಧ ಕೇಸು
ಶ್ರೀನಗರ/ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಬೇಕೆಂದು ಕೆಲ ಮುಸ್ಲಿಂ ನಾಯಕರು ಕರೆ ನೀಡತೊಡಗಿದ್ದಾರೆ. ಶಿರಚ್ಛೇದ ಮಾಡಿದಂತೆ ವಿಡಿಯೋ ಸೃಷ್ಟಿಸಿದ್ದ ಯೂಟ್ಯೂಬರ್ ಫೈಸಲ್ ವಾನಿ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಅಂತೆಯೇ, ಶಿರಚ್ಛೇದ ಮಾಡುವಂತೆ ಕರೆ ನೀಡಿದ್ದ ಮೌಲಿ ಆದಿಲ್ ಗನಿ ಎಂಬ ಮೌಲ್ವಿ ವಿರುದ್ಧ ಕೇಸು ದಾಖಲಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಶಾಂತ
ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಪ್ರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೂ ಸೂಕ್ಷ್ಮ ಪ್ರದೇಶಗಳಿಗೆ ಪೊಲೀಸ್ ತುಕಡಿ ನಿಯೋಜನೆ ಮಾಡಲು ಸೂಚಿಸಲಾಗಿದೆ. ಕಂಡಲ್ಲಿ ಗುಂಡಿಕ್ಕುವಂತಹ ಆದೇಶ ಹೊರಡಿಸುವ ಅಗತ್ಯವಿಲ್ಲ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
