ನವದೆಹಲಿ[ಮಾ.01]: ಭಾರತ ಹಾಗೂ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಫೆ. 14 ರಂದು ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಭಾರತೀಯ ಸೇನೆಯ 40 ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕ ಇಡೀ ದೇಶವೇ ಉಗ್ರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಇದರಿಂದಾಗಿ ಉಗ್ರರನ್ನು ಬೆಂಬಲಿಸುತ್ತಿರುವ ಪಾಕ್ ಹಾಗೂ ಭಾರತದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಇದಾದ ಬಳಿಕ ಭಾರತವೂ ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು. ಸದ್ಯ ಜೆಡಿಯು ನಾಯಕ ಈ ಕುರಿತಾಗಿ ಟ್ವೀಟ್ ಮಾಡುತ್ತಾ ಯುದ್ಧ ಬೇಡ ಎನ್ನುವುದು ಹೇಡಿತನವಲ್ಲ ಎಂದು ಬರೆದುಕೊಂಡಿದ್ದಾರೆ.

ಜೆಡಿಯು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಯುದ್ಧ ಬೇಡ ಎನ್ನುವುದು ಹೇಡಿತನವಲ್ಲ. ರಾಷ್ಟ್ರಪಿತ ಗಾಂಧೀಜಿ ಯುದ್ಧವನ್ನು ವಿರೋಧಿಸಿದ್ದರು ಹಾಗೂ ಅವರು ಹೇಡಿಯಾಗಿರಲಿಲ್ಲ. ವಾಸ್ತವವಾಗಿ ನಾವು ಕಂಡ ಅತಿ ಹೆಚ್ಚು ಧೈರ್ಯ ಹೊಂದಿರುವ ವ್ಯಕ್ತಿಗಳಲ್ಲಿ ಒಬ್ಬರು ಎಂಬುವುದು ಸಾರ್ವತ್ರಿಕ ಸತ್ಯ ಇದರಲ್ಲಿ ಅನುಮಾನವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಂಧ ರಾಷ್ಟ್ರಭಕ್ತಿ, ಆಕ್ರೋಶ, ಅಜ್ಞಾನದಿಂದ ಯುದ್ಧ ಬೇಕೆನ್ನುವುದು ಧೈರ್ಯವಂತಿಕೆ ಎನ್ನಲು ಸಾಧ್ಯವಿಲ್ಲ ಎಂದಿದ್ದಾರೆ.

ಕಳೆದ ಎರಡು ವಾರಗಳಿಂದ ಪಾಕ್ ಹಾಗೂ ಭಾರತದ ನಡುವಿನ ಸಂಬಂಧ ಹದಗೆಟ್ಟಿದ್ದು, ಗಡಿ ಪ್ರದೇಶದಲ್ಲಿ ಯುದ್ಧವೇರ್ಪಡುವ ಭೀತಿ ಎದುರಾಗಿತ್ತು. ಈ ನಡುವೆ ಭಾರತದ ಯುದ್ಧ ವಿಮಾನವೊಂದು ಪತನಗೊಂಡಿತ್ತು. ಈ ವೇಳೆ ವಿಮಾನ ನಡೆಸುತ್ತಿದ್ದ ಪೈಲಟ್ ಅಭಿನಂದನ್ ಪಾಕ್ ಗಡಿಯೊಳಗೆ ಬಿದ್ದಿದ್ದು, ಅಲ್ಲಿನ ಸೇನೆ ಅವರನ್ನು ಬಂಧಿಸಿತ್ತು. ಬಳಿಕ ಭಾರತದ ತೀವ್ರ ಒತ್ತಡಕ್ಕೆ ಮಣಿದ ಪಾಕ್ ಸರ್ಕಾರ ಇಂದು ಮಾ.01 ರಂದು ಅಭಿನಂದನ್ ರನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.