ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಲಿದ್ದು, ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.
ನವದೆಹಲಿ (ಜು.21): ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಲಿದ್ದು, ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಸಂಸತ್ ಭವನದಲ್ಲಿ ಮುಂಜಾನೆ 11 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಮತ ಎಣಿಕೆ ಪ್ರಕ್ರಿಯೆ ಮುಗಿದಿದ್ದೇ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಮುರ್ಮು ಹಾಗೂ ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ರಾಷ್ಟ್ರಪತಿ ಚುನಾವಣಾ ಕಣಕ್ಕಿಳಿದಿದ್ದರು. ಜು.18 ರಂದು ನಡೆದ ಚುನಾವಣೆಯಲ್ಲಿ ಶೇ.99.12 ಮತದಾನವಾಗಿತ್ತು.
45 ಲಕ್ಷ ಇಟ್ಟಿಗೆಯಿಂದ ನಿರ್ಮಾಣವಾಗಿದೆ ರಾಷ್ಟ್ರಪತಿ ಭವನ, ದೇಶದ ಪ್ರಥಮ ಪ್ರಜೆಯ ನಿವಾಸದ ಒಂದು ನೋಟ!
ಅರ್ಹ 4,796 ಸಂಸದ ಹಾಗೂ ಶಾಸಕರಲ್ಲಿ 4,754 ಜನರು ಮತ ಚಲಾಯಿಸಿದ್ದರು. ದ್ರೌಪದಿ ಮುರ್ಮು ಅವರು ಎಲೆಕ್ಟೋರಲ್ ಕಾಲೇಜಿನ 2/3ರಷ್ಟುಮತ (10,86,431) ಮತ ಪಡೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಅಂದಾಜಿಸಿದೆ. ಚುನಾವಣೆಯಲ್ಲಿ ವಿಪಕ್ಷ ನಾಯಕರು ಅಡ್ಡ ಮತ ಚಲಾಯಿಸಿ ಮುರ್ಮು ಬೆಂಬಲಿಸಿದ್ದು, ಅವರ ಆಯ್ಕೆಯನ್ನು ಇನ್ನಷ್ಟು ಖಚಿತ ಪಡಿಸಿದೆ. ಜೊತೆಗೆ ಮುರ್ಮು ದಾಖಲೆ ಮತಗಳ ಅಂತರದ ಗೆಲುವಿನ ಸಾಧ್ಯತೆಯನ್ನೂ ಊಹಿಸಲಾಗಿದೆ.
ರಾಷ್ಟ್ರಪತಿ ಚುನಾವಣೆ: ವ್ಹೀಲ್ ಚೇರ್‌ನಲ್ಲಿ ಬಂದು ಮತ ಹಾಕಿದ ಇಬ್ಬರು ಮಾಜಿ ಪ್ರಧಾನಿಗಳು
ಮುರ್ಮು ಪಾಲಿಗೆ ಅನೇಕ ಪ್ರಥಮಗಳು: ಎನ್‌ಡಿಎ ಅಭ್ಯರ್ಥಿ ಮುರ್ಮು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೇರುವ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. ಅಲ್ಲದೇ ಪ್ರತಿಭಾ ಪಾಟೀಲ್ ಬಳಿಕ ದೇಶದ 2ನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ. ಜಾರ್ಖಂಡನ ಮಾಜಿ ರಾಜ್ಯಪಾಲೆಯಾಗಿರುವ ಮುರ್ಮು (64) ಈವರೆಗಿನ ಅತಿ ಕಡಿಮೆ ವಯಸ್ಸಿನ ರಾಷ್ಟ್ರಪತಿ ಹಾಗೂ ಸ್ವಾತಂತ್ರ್ಯಾನಂತರ ಹುಟ್ಟಿದ ಮೊದಲ ರಾಷ್ಟ್ರಪತಿ ಕೂಡಾ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ರಾಷ್ಟ್ರಪತಿಯಾಗಿರುವ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜು.24 ರಂದು ಮುಕ್ತಾಯವಾಗಲಿದ್ದು, ಜು.25ಕ್ಕೆ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿಕೊಳ್ಳಲಿದ್ದಾರೆ.
