ನಮ್ಮ ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ: ಹುತಾತ್ಮ ಯೋಧರಿಗೆ ಮೋದಿ ಶ್ರದ್ಧಾಂಜಲಿ!
ಅಖಂಡ ಭಾರತದ ರಕ್ಷಣೆ ಮಾಡುವುದರಿಂದ ನಮ್ಮನ್ನು ತಡೆಯಲು ಯಾರಿಗೂ ಅಧಿಕಾರವಿಲ್ಲ| ಕೆಣಕಿದ್ರೆ ಯಾವುದೇ ಸ್ಥಿತಿಯಲ್ಲಿದ್ದರೂ ತಕ್ಕ ಉತ್ತರ ನೀಡಲು ಸಮರ್ಥವಾಗಿದೆ| ನಮ್ಮ ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ
ಇತ್ತ ಕೊರೋನಾ ದೇಶವನ್ನು ಬಾಧಿಸುತ್ತಿದ್ದರೆ, ಅತ್ತ ಚೀನಾ ತನ್ನ ಕುತಂತ್ರ ಬುದ್ಧಿ ಮೆರೆದಿದೆ. ಸೋಮವಾರ ರಾತ್ರಿ ಅಚಾನಕ್ಕಾಗಿ ಭಾರತದ ಯೋಧರ ಮೇಲೆ ದಾಳಿ ನಡೆಸಿದ್ದು, ಈ ಸಂಘರ್ಷದಲ್ಲಿ ಭಾರತದ ಇಪ್ಪತ್ತು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೇ ಹತ್ತು ಯೋಧರು ನಾಪತ್ತೆಯಾಗಿದ್ದಾರೆ. ಹೀಗಿರುವಾಗ ಪಿಎಂ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದು, ನಮ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದಿದ್ದಾರೆ.
ಹೌದು ಕೊರೋನಾ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಆದರೆ ಈ ಸಂವಾದಕ್ಕೂ ಮೊದಲು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ನಮ್ಮ ದೇಶದ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂಬ ಭರವಸೆ ಕೊಡುತ್ತೇನೆ. ಭಾರತದ ಅಖಂಡತೆ ಸರ್ವೋಚ್ಛವಾಗಿದೆ. ಇದರ ರಕ್ಷಣೆ ಮಾಡುವುದರಿಂದ ನಮ್ಮನ್ನು ತಡೆಯಲು ಯಾರಿಗೂ ಅಧಿಕಾರವಿಲ್ಲ. ಭಾರತ ಶಾಂತಿ ಬಯಸುತ್ತದೆ ಎಂಬ ವಿಚಾರದಲ್ಲಿ ಯಾರಿಗೂ ಸಂಶಯ ಬೇಡ. ಆದರೆ ಕೆಣಕಿದ್ರೆ ಯಾವುದೇ ಸ್ಥಿತಿಯಲ್ಲಿದ್ದರೂ ತಕ್ಕ ಉತ್ತರ ನೀಡಲು ಸಮರ್ಥವಾಗಿದೆ. ನಮ್ಮ ಯೋಧರು ಹುತಾತ್ಮರಾಗಿದ್ದಾರೆ. ಆದರೆ ಅವರೆಲ್ಲರೂ ಶತ್ರುಗಳ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದಾರೆ ಎಂಬ ವಿಚಾರವಾಗಿ ದೇಶಕ್ಕೆ ಹೆಮ್ಮೆ ಇದೆ' ಎಂದಿದ್ದಾರೆ.
ಇನ್ನು ಭಾಷಣದ ಬಳಿಕ ಪಿಎಂ ಮೋದಿ ಸೇರಿದಂತೆ ಎಲ್ಲಾ ರಾಜ್ಯದ ಸಿಎಂಗಳು ಎದ್ದು ನಿಂತು ಎರಡು ನಿಮಿಷದ ಮೌನಾಚರಣೆ ಮೂಲಕ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಪಿಎಂ ಮೋದಿ ತಮ್ಮ ಭಾಷಣದ ಮೂಲಕ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಯೋಧರ ಬಲಿದಾನಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.