ಹಮದಾಬಾದ್‌(ನ.09): ‘ಕೇಂದ್ರ ಹಡಗು ಸಚಿವಾಲಯದ ಹೆಸರು ಬದಲಾವಣೆ ಮಾಡಿ ವ್ಯಾಪ್ತಿ ವಿಸ್ತರಿಸಲಾಗುತ್ತದೆ. ಇದಕ್ಕೆ ಬಂದರು, ಹಡಗು ಹಾಗೂ ಜಲಸಾರಿಗೆ ಇಲಾಖೆ ಎಂದು ಮರುನಾಮಕರಣ ಮಾಡಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಗುಜರಾತ್‌ನ ಸೂರತ್‌ ಬಳಿಯ ಹಜಿರಾ ಹಾಗೂ ಭಾವನಗರ ಜಿಲ್ಲೆಯ ಘೋಘಾ ನಡುವಿನ ರೋ ಪ್ಯಾಕ್ಸ್‌ (ರೋ ರೋ) ಸರಕು ಸಾಗಣೆ ಮತ್ತು ಪ್ರಯಾಣಿಕ ಹಡಗು ಸೇವೆಗೆ ದಿಲ್ಲಿಯಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ ಸಮುದ್ರ ಮಾರ್ಗವು ಇಂದು ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಪ್ರಮುಖ ಭಾಗವಾಗಿದೆ. ಹಡಗು ಸಚಿವಾಲಯ ಜಲ ಮಾರ್ಗಗಳು ಹಾಗೂ ಬಂದರುಗಳನ್ನೂ ನೋಡಿಕೊಳ್ಳುತ್ತದೆ. ಅದಕ್ಕೆಂದೇ ಹಡಗು ಸಚಿವಾಲಯದ ಮರುನಾಮಕರಣ ಮಾಡಿ ವ್ಯಾಪ್ತಿ ವಿಸ್ತರಿಸಲಾಗುತ್ತದೆ. ಹೆಸರು ಬದಲಾವಣೆಯು ಕೆಲಸದಲ್ಲಿ ಕೂಡ ಸ್ಪಷ್ಟತೆ ತರುತ್ತದೆ’ ಎಂದರು.

ಇದೇ ವೇಳೆ ರೋಪ್ಯಾಕ್ಸ್‌ ಹಡಗು ಸೇವೆಯಿಂದ ಭಾರೀ ಸಮಯ, ಹಣ, ಇಂಧನ ಹಾಗೂ ಶ್ರಮದ ಉಳಿತಾಯವಾಗಲಿದೆ. ರಸ್ತೆಯಲ್ಲಿ ವಾಯುಮಾಲಿನ್ಯ ಕೂಡ ತಗ್ಗಲಿದೆ ಎಂದು ಅವರು ನುಡಿದರು.

ನಿತ್ಯ 9000 ಲೀಟರ್‌ ಇಂಧನ ಉಳಿಸುವ ರೋಪ್ಯಾಕ್ಸ್‌

ಹಜಿರಾ ಹಾಗೂ ಘೋಘಾ ನಡುವೆ ರಸ್ತೆ ಮೂಲಕ ಸಾಗಬೇಕು ಎಂದರೆ 375 ಕಿ.ಮೀ.ನಷ್ಟುಸಾಗಬೇಕು. ಆದರೆ ಈಗ ಸಮುದ್ರ ಮಾರ್ಗದಲ್ಲಿ ಸಾರಿಗೆ ಸೇವೆಯಿಂದ ಉಭಯ ಊರುಗಳ ನಡುವಿನ ಅಂತರ ಕೇವಲ 90 ಕಿ.ಮೀ.ಗೆ ಕುಗ್ಗಲಿದೆ. ಇದರಿಂದ 280 ಕಿ.ಮೀ.ನಷ್ಟುಸಂಚಾರ ಹಾಗೂ ನಿತ್ಯ 9 ಸಾವಿರ ಲೀ. ಇಂಧನ ಉಳಿತಾಯವಾಗಲಿದೆ. ಜತೆಗೆ ಪ್ರಯಾಣದ ಅವಧಿ 10-12 ತಾಸಿನಿಂದ ಕೇವಲ 4 ಗಂಟೆಗೆ ತಗ್ಗಲಿದೆ ಎಂದು ಮೋದಿ ಹೇಳಿದರು.

ಅಪಾರ ಸಾಮರ್ಥ್ಯದ ರೋಪ್ಯಾಕ್ಸ್‌ ಹಡಗು:

ಸಮುದ್ರಮಾರ್ಗದಲ್ಲಿ ‘ರೋ ಪ್ಯಾಕ್ಸ್‌ ಫೆರ್ರಿ ಹಡಗು ‘ವೊಯೋಜ್‌ ಸಿಂಫನಿ’, ಘೋಘಾ ಹಾಗೂ ಹಜಿರಾ ನಡುವೆ ದಿನಕ್ಕೆ 3 ಟ್ರಿಪ್‌ ಸಂಚರಿಸಲಿದೆ. ಇದು ಮೂರು ಅಂತಸ್ತಿನ ಹಡಗು. ಹಡಗಿನಲ್ಲಿ ಸರಕು ತುಂಬಿದ ಲಾರಿಗಳು, ಕಾರುಗಳು ಹಾಗೂ ಪ್ರಯಾಣಿಕರಿಗೆ ಒಂದೊಂದು ಅಂತಸ್ತಿನಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಮುಖ್ಯ ಅಂತಸ್ತಿನಲ್ಲಿ 30 ಸರಕು ತುಂಬಿದ ಲಾರಿಗಳಿಗೆ ಅವಕಾಶ, ಮಧ್ಯದ ಅಂತಸ್ತಿನಲ್ಲಿ 100 ಕಾರುಗಳಿಗೆ ಸ್ಥಳಾವಕಾಶ ಹಾಗೂ ಪ್ರಯಾಣಿಕರ ಅಂತಸ್ತಿನಲ್ಲಿ 500 ಪ್ರಯಾಣಿಕರು ಹಾಗೂ 34 ಸಿಬ್ಬಂದಿಗೆ ಸ್ಥಳಾವಕಾಶ ಇರಲಿದೆ.

ಒಂದು ವರ್ಷದಲ್ಲಿ ಇದು 5 ಲಕ್ಷ ಪ್ರಯಾಣಿಕರು, 80 ಸಾವಿರ ಪ್ರಯಾಣಿಕ ವಾಹನ, 50 ಸಾವಿರ ದ್ವಿಚಕ್ರ ವಾಹನ, 30 ಸಾವಿರ ಟ್ರಕ್‌ಗಳನ್ನು ಕೊಂಡೊಯ್ಯುತ್ತದೆ.

‘ಭಾರತದಲ್ಲಿ ಇಂದು ಸರಕು ಸಾಗಣೆ ವಿಶ್ವದ ಇತರ ದೇಶಕ್ಕಿಂತ ದುಬಾರಿ. ಈ ವೆಚ್ಚ ತಗ್ಗಿಸಲು ಜಲಸಾರಿಗೆ ಉತ್ತಮ ಪರಿಹಾರ. ಈ ಮುಂಚೆ ಜಲಸಾರಿಗೆಯನ್ನು ಸರಿಯಾಗಿ ಬಳಸಿಕೊಂಡಿರಲಿಲ್ಲ. 2014ರ ನಂತರ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಲಾಗಿದೆ. ಸಾಗರ ಮಾಲಾ ಯೋಜನೆ ಮೂಲಕ 500 ಯೋಜನೆ ಹಮ್ಮಿಕೊಳ್ಳಲಾಗಿದೆ. ಹೊಸ ಬಂದರುಗಳನ್ನು ಕಟ್ಟಲಾಗುತ್ತಿದೆ’ ಎಂದು ಪ್ರಧಾನಿ ನುಡಿದರು.