ನವದೆಹಲಿ(ಏ.12): ಏ.11ರಿಂದ ಏ.14ರ ವರೆಗೆ ನಡೆಯಲಿರುವ ‘ಲಸಿಕಾ ಉತ್ಸವ’ ಅಭಿಯಾನಕ್ಕೆ ಭಾನುವಾರ ಚಾಲನೆ ದೊರಕಿದೆ. ಈ ಸಂದರ್ಭದಲ್ಲಿ ದೇಶದ ಜತನೆತೆ ವಿಶೇಷ ಸಂದೇಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಇದು ಕೋವಿಡ್‌-19 ವೈರಸ್ಸಿನ ವಿರುದ್ಧದ 2ನೇ ಯುದ್ಧ’ ಎಂದು ಬಣ್ಣಿಸಿದ್ದಾರೆ. ಕೊರೋನಾ ನಿಗ್ರಹಕ್ಕೆ ವೈಯಕ್ತಿಕ ಮತ್ತು ಸಾಮಾಜಿಕ ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಕರೆ ನೀಡಿದ್ದಾರೆ.

ಇದೇ ವೇಳೆ ನಮ್ಮ ಲಸಿಕಾ ಅಭಿಯಾನ ಯಶಸ್ಸು, ಅರ್ಹರು ಲಸಿಕೆ ಪಡೆಯುವುದರ ಮೇಲೆ, ಮಾಸ್ಕ್‌ ಮತ್ತು ಕೊರೋನಾ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯ ಮೇಲೆ ಅವಲಂಬಿತವಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕರೂ ಲಸಿಕೆ ಪಡೆಯಿರಿ. ಒಂದೇ ಒಂದು ಡೋಸ್‌ ಲಸಿಕೆಯನ್ನೂ ವ್ಯರ್ಥವಾಗಲು ಬಿಡಬೇಡಿ ಎಂದು ಕರೆ ನೀಡಿದರು.

ಹಾಗೆಯೇ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಲಸಿಕಾ ಅಭಿಯಾನದ ಯಶಸ್ಸಿಗೆ, ಕೋವಿಡ್‌ ನಿಗ್ರಹಕ್ಕೆ ಪ್ರತಿಯೊಬ್ಬರು ಈ 4 ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಮನವಿ ಮಾಡಿದರು.

ಮೋದಿಯ 4 ಸೂತ್ರ:

1. ಈಚ್‌ ಒನ್‌, ವ್ಯಾಕ್ಸಿನ್‌ ಒನ್‌: ಅಂದರೆ ಅನಕ್ಷರಸ್ಥರು, ವೃದ್ಧರು ಹಾಗೂ ಅವಲಂಬಿತರಿಗೆ ಕೊರೋನಾ ಲಸಿಕೆ ಕೊಡಿಸುವ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು.

2.ಈಚ್‌ ಒನ್‌, ಟ್ರೀಟ್‌ ಒನ್‌: ಕೊರೊನಾ ಲಸಿಕೆ ಅಭಿಯಾನದ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು.

3. ಈಚ್‌ ಒನ್‌, ಸೇವ್‌ ಒನ್‌: ಲಸಿಕಾ ಅಭಿಯಾನ ಯಶಸ್ವಿಗಾಗಿ ಎಲ್ಲರೂ ಕೈಜೋಡಿಸಬೇಕು. ಮಾಸ್ಕ್‌ ಧರಿಸುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವ ಜೊತೆಗೆ ಇತರರನ್ನೂ ರಕ್ಷಿಸಬೇಕು.

4. ಕೊರೊನಾ ಸೋಂಕು ಹೆಚ್ಚಾಗಿರುವ ಪ್ರದೇಶದಲ್ಲಿ ಮೈಕ್ರೋ ಕಂಟೈನ್ಮೆಂಟ್‌ ಝೋನ್‌ಗಳನ್ನು ರಚಿಸುವ ಜವಾಬ್ದಾರಿಯನ್ನು ಸಮಾಜ ನಿಭಾಯಿಸಬೇಕು.