ನವದೆಹಲಿ (ಮಾ.31): ‘ನೀವು ಫೀಲ್ಡ್‌ಗೆ ಇಳಿಯಿರಿ, ಜನರಲ್ಲಿ ಜಾಗೃತಿ ಮೂಡಿಸಿ. ಲಸಿಕಾ ಕೇಂದ್ರಗಳಿಗೆ ಜನರನ್ನು ಕರೆತನ್ನಿ’ ಇದು ಕೊರೋನಾ 2ನೇ ಅಲೆ ಆತಂಕ ಹೆಚ್ಚುತ್ತಿರುವ ಹೊತ್ತಿನಲ್ಲಿ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಅವರು ಕೊಟ್ಟಿರುವ ಹೊಸ ಟಾಸ್ಕ್‌!

ದೇಶಾದ್ಯಂತ ಈಗ ಡಬಲ್‌ ರೂಪಾಂತರಿ ಕೊರೋನಾ ಸೋಂಕು ವಿವಿಧ ರೂಪಗಳಲ್ಲಿ ಆವರಿಸುತ್ತಿದೆ. ಇಂಥ ಹೊತ್ತಲ್ಲಿ ಜನರಿಗೆ ತುರ್ತಾಗಿ ಬೇಕಾಗಿರುವುದು ಅರಿವು ಅಥವಾ ಜಾಗೃತಿ. ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನೀವೂ ಕೈಜೋಡಿಸಿ ಎಂದು ಮೋದಿ ಅವರು ಬಿಜೆಪಿ ಸಂಸದರಿಗೆ ಸಲಹೆ ನೀಡಿದ್ದಾರೆ.

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು..! ...

ಕೊರೋನಾ ಸೋಂಕು ರೂಪಾಂತರಗೊಂಡು ನಿತ್ಯ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೇಶಾದ್ಯಂತ ಪತ್ತೆಯಾಗುತ್ತಿವೆ. ಈತನಕ 1.60 ಲಕ್ಷ ಮಂದಿ ಸೋಂಕಿನಿಂದಾಗಿ ಸಾವೀಗಿಡಾಗಿದ್ದಾರೆ. ಲಸಿಕೆ ಪಡೆಯಲು ಹಿರಿಯ ನಾಗರಿಕರು, ಕೊರೋನಾ ವಾರಿಯರ್ಸ್‌ ಹೇಳಿಕೊಳ್ಳುವ ಮಟ್ಟಕ್ಕೆ ಲಸಿಕಾ ಕೇಂದ್ರಕ್ಕೆ ಬಾರದಿರುವುದು ತಲೆನೋವು ಸೃಷ್ಟಿಸಿದೆ.

ಕೊರೋನಾ 2ನೇ ಅಲೆಯ ಆತಂಕ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆದಿರುವ ಆರೋಗ್ಯ ಕಾರ್ಯಕರ್ತರು, ಕೊರೋನಾ ವಾರಿಯರ್ಸ್‌ಗಳ ಲೆಕ್ಕ ಹೆಚ್ಚು ಕಮ್ಮಿ 5 ಕೋಟಿ. ಈ ಅಂಕಿ-ಸಂಖ್ಯೆಗಳು ಕೇಂದ್ರ ಸರ್ಕಾರ ನಿರೀಕ್ಷೆ ಮಾಡಿದಷ್ಟಿಲ್ಲ ಅನ್ನುವುದು ಕೇಂದ್ರ ಆರೋಗ್ಯ ಸಚಿವಾಲಯವನ್ನು ಕಾಡುತ್ತಿರುವ ಚಿಂತೆ. ಕೊರೋನಾ ಲಸಿಕೆ ಅಂದ್ರೆ ಸಾಕು ಜನ ಭಯಪಡುತ್ತಿದ್ದಾರೆ. ಲಸಿಕೆ ತೆಗೆದುಕೊಂಡರೆ ಜ್ವರ, ವಾಂತಿ, ತಲೆಸುತ್ತು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಚುಚ್ಚುಮದ್ದು ಪಡೆದ ಜಾಗದಲ್ಲಿ ಬೊಕ್ಕೆ ಮೂಡುತ್ತವೆ ಅನ್ನುವ ವಿಚಿತ್ರ ಭಯ ಎಲ್ಲ ವಯೋಮಾನದವರನ್ನೂ ಕಾಡುತ್ತಿದೆ. ಇದರಿಂದ ಹೊರಬರಬೇಕಾದರೆ ಚುಚ್ಚು ಮದ್ದಿನ ಬಗ್ಗೆ ಜನರಲ್ಲಿ ಜಾಗೃತಿ ಅಥವಾ ಅರಿವು ಮೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಸೋಂಕು ಪತ್ತೆ, ನಿಯಂತ್ರಣ, ಚಿಕಿತ್ಸೆ ಇವುಗಳ ಜೊತೆಗೆ ಆರೋಗ್ಯ ಇಲಾಖೆಯ ಮುಂದಿರುವ ಅತಿ ದೊಡ್ಡ ಟಾಸ್ಕ್‌ ಎಂದರೆ ಜಾಗೃತಿ ಮೂಡಿಸುವುದು. ಈ ಮೂಲಕ ಜನರನ್ನು ಲಸಿಕಾ ಕೇಂದ್ರಗಳಿಗೆ ಕರೆತರುವುದು. ಈ ನಿಟ್ಟಿನಲ್ಲಿ ಹತ್ತಾರು ಪ್ರಯತ್ನಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡುತ್ತಿವೆಯಾದರೂ ನಿರೀಕ್ಷಿತ ಮಟ್ಟದ ಪ್ರಯೋಜನ ಆಗುತ್ತಿಲ್ಲ. ಹಾಗಾಗಿ ಜಾಗೃತಿಯ ಮುಂದುವರೆದ ಭಾಗವಾಗಿ ಸಂಸದರನ್ನೇ ಅಖಾಡಕ್ಕಿಳಿಸಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಸಂಸತ್‌ ಅಧಿವೇಶನ ನಡೆಯುವ ಹೊತ್ತಿನಲ್ಲಿ ವಾರಕ್ಕೊಮ್ಮೆ (ಪ್ರತಿ ಮಂಗಳವಾರ) ನಡೆಯುವ ಬಿಜೆಪಿ ಸಂಸದರ ಇತ್ತೀಚಿನ ಸಭೆಯಲ್ಲಿ ಈ ಬಗ್ಗೆ ಪದೇ ಪದೆ ಮೋದಿ ಒತ್ತಿ ಹೇಳಿದ್ದಾರೆ. ಜನರನ್ನು ಲಸಿಕಾ ಕೇಂದ್ರಕ್ಕೆ ಕರೆತರುವ ಕೆಲಸವನ್ನು ಜನಪ್ರತಿನಿಧಿಗಳು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಂಸದರು ಏನ್‌ ಮಾಡಬೇಕು?:

1 ತಮ್ಮ ಕ್ಷೇತ್ರ ವಾಪ್ತಿಯ ಪ್ರತಿ ಲಸಿಕಾ ಕೇಂದ್ರಕ್ಕೂ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ

2 ವಾರ್ಡ್‌ಗಳ ಮಟ್ಟದಲ್ಲಿ ಕೊರೋನಾ, ಲಸಿಕೆಗಳ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜನೆ

3 ಅಗತ್ಯಬಿದ್ದರೆ ನಾಗರಿಕರು ಲಸಿಕಾ ಕೇಂದ್ರಗಳಿಗೆ ಬರಲು ಅಗತ್ಯ ವಾಹನ ಸೌಕರ್ಯ ಕಲ್ಪಿಸುವುದು

4 ಸಾಧ್ಯವಾದ ಮಟ್ಟಿಗೆ ಲಸಿಕಾ ಕೇಂದ್ರಕ್ಕೆ ಬರುವವರಿಗೆ ಕಾಫಿ, ಟೀ ಅಥವಾ ಜ್ಯೂಸ್‌ ಕೊಟ್ಟು ಉಪಚಾರ

5 ಪಕ್ಷದ ಕಾರ‍್ಯಕರ್ತರು, ಮುಖಂಡರು ಲಸಿಕೆ ಪಡೆಯುವ ಮೂಲಕ ಜನರ ಭಯ ನಿವಾರಿಸೋದು

6 ಮನೆ ಮನೆ ಸಂಪರ್ಕ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುವುದು

7 ಸಾಮಾಜಿಕ ಜಾಲತಾಣ, ಬ್ಯಾನರ್‌, ಹೋರ್ಡಿಂಗ್ಸ್‌ ಮೂಲಕವೂ ಪ್ರಚಾರ ಮಾಡುವುದು

8 ಲಸಿಕೆ ಕುರಿತು ಜಾಗೃತಿ, ಮಾಹಿತಿ ನೀಡಲು ಕ್ಷೇತ್ರದಲ್ಲಿ ಹೆಲ್ಪ್‌ ಡೆಸ್ಕ್‌ಗಳನ್ನು ತೆರೆಯುವುದು

9 ತೆಗೆದುಕೊಂಡ ಕ್ರಮಗಳ ಕುರಿತು ಫೋಟೋ ಸಮೇತ ಬಿಜೆಪಿ ಪ್ರಧಾನ ಕಚೇರಿಗೆ ಕಳುಹಿಸುವುದು

ಜನಸಾಮಾನ್ಯರನ್ನು ಅತ್ಯಂತ ಪರಿಣಾಮಕಾರಿಯಾಗಿ ಕೋವಿಡ್‌ ಮತ್ತು ಕೋವಿಡ್‌ ಲಸಿಕೆ ವಿಚಾರದಲ್ಲಿ ತಲುಪುವ ಅವಶ್ಯಕತೆ ಇದೆ. ಸಂಸದರು, ಸಚಿವರು ಮುಂದೆ ನಿಂತು ಈ ಬಗ್ಗೆ ಮಾಹಿತಿ ನೀಡಿದಾಗ ಸಾರ್ವಜನಿಕರಲ್ಲಿ ಭಯ ಹೋಗಿ, ಧೈರ್ಯ ಬರುತ್ತದೆ. ಅವರಲ್ಲಿರುವ ಅನುಮಾನಗಳಿಗೆ ಉತ್ತರ ಸಿಗುತ್ತದೆ. ಈ ಸಂಬಂಧ ನಾವು ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಮೋದಿಯವರು ನೀಡಿರುವ ಈ ಟಾಸ್ಕ್‌ ಜಾರಿಗೆ ಶಕ್ತಿಮೀರಿ ಶ್ರಮಿಸುತ್ತಿದ್ದೇವೆ.

-ಕೆ.ಸಿ.ರಾಮಮೂರ್ತಿ, ರಾಜ್ಯಸಭಾ ಸದಸ್ಯರು