ತುರ್ತು ಸ್ಥಿತಿ, ಸಾರ್ವಜನಿಕ ಭದ್ರತಾ ಹಿತಾಸಕ್ತಿಗೆ ಫೋನ್‌ ಕದ್ದಾಲಿಕೆ ಮಾಡಬಹುದು |  ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪು | ಉದ್ಯಮಿಯೊಬ್ಬರ ಫೋನ್‌ ಕದ್ದಾಲಿಕೆಗೆ ಅವಕಾಶ ಕೊಟ್ಟಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ರದ್ದು

ಮುಂಬೈ (ಅ.23): ಸಾರ್ವಜನಿಕ ತುರ್ತು ಸಂದರ್ಭ ಮತ್ತು ಸಾರ್ವಜನಿಕರ ಭದ್ರತೆಯ ಹಿತಾಸಕ್ತಿ ಮೇರೆಗೆ ಮಾತ್ರವೇ ಫೋನ್‌ ಕದ್ದಾಲಿಕೆಗೆ ಅವಕಾಶವಿದೆ ಎಂದು ಪ್ರತಿಪಾದಿಸಿರುವ ಬಾಂಬೆ ಹೈಕೋರ್ಟ್‌ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಉದ್ಯಮಿಯೊಬ್ಬರ ಫೋನ್‌ ಕದ್ದಾಲಿಕೆಗೆ ಅವಕಾಶ ಕೊಟ್ಟಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ರದ್ದುಗೊಳಿಸಿದೆ.

ದಕ್ಷಿಣದವರನ್ನು 'ಮದ್ರಾಸಿ' ಎಂದ ಇನ್ಫೋಸಿಸ್ ಸಿಇಒ: ಷೇರು ಕುಸಿತಕ್ಕೆ ಲಬೋ ಲಬೋ!

2009ರ ಅಕ್ಟೋಬರ್‌ನಿಂದ 2010ರ ಫೆಬ್ರವರಿ ಅವಧಿಯಲ್ಲಿ ತಮ್ಮ ಫೋನ್‌ ಕದ್ದಾಲಿಕೆಗೆ ಅವಕಾಶ ನೀಡಿದ್ದ ಆಗಿನ ಸರ್ಕಾರದ ಆದೇಶದ ವಿರುದ್ಧ ಉದ್ಯಮಿ ವಿನೀತ್‌ ಕುಮಾರ್‌ ಎಂಬುವರು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಬಗ್ಗೆ ನ್ಯಾಯಾಧೀಶರಾದ ಆರ್‌.ವಿ ಮೊರೆ ಹಾಗು ಎನ್‌. ಜೆ. ಜಾಮ್‌ದಾರ್‌ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಈ ಕ್ರಮವು ಸಂವಿಧಾನದಡಿ ನೀಡಲಾದ ಮೂಲಭೂತ ಹಕ್ಕು ಮತ್ತು ಟೆಲಿಗ್ರಾಫ್‌ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಕುಮಾರ್‌ ಪರ ವಕೀಲರು ವಾದಿಸಿದರು.

ವಕೀಲರ ವಾದ ಆಲಿಸಿದ ಬಾಂಬೆ ಹೈಕೋರ್ಟ್‌, ತುರ್ತು ಸಂದರ್ಭ ಮತ್ತು ಸಾರ್ವಜನಿಕರ ಭದ್ರತೆಯ ಹಿತಾಸಕ್ತಿ ಮೇರೆಗೆ ಮಾತ್ರವೇ ತನಿಖಾ ಸಂಸ್ಥೆಗಳು ಫೋನ್‌ ಕದ್ದಾಲಿಕೆ ಮಾಡಬಹುದು ಎಂದಿತು. ಅಲ್ಲದೆ, ಉದ್ಯಮಿ ಫೋನ್‌ ಕದ್ದಾಲಿಕೆಯ ಕೇಂದ್ರ ಗೃಹ ಇಲಾಖೆಯ ಆದೇಶವನ್ನು ರದ್ದುಗೊಳಿಸಿತು. ಆದರೆ, ಆರೋಪಿಯ ಭ್ರಷ್ಟಾಚಾರದ ಪ್ರಕರಣದ ಕುರಿತು ತಾನು ಯಾವುದೇ ಹೇಳಿಕೆ ನೀಡಿಲ್ಲ ಎಂದಿದೆ ಹೈಕೋರ್ಟ್‌.

ಉದ್ಯಮಿ ವಿನೀತ್‌ ಕುಮಾರ್‌ ಅವರು, ಬ್ಯಾಂಕ್‌ ಸಾಲ ಪಡೆಯುವುದಕ್ಕಾಗಿ ಸರ್ಕಾರಿ ಬ್ಯಾಂಕ್‌ನ ಅಧಿಕಾರಿಯೊಬ್ಬರಿಗೆ 10 ಲಕ್ಷ ರು. ಲಂಚ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ 2011ರಲ್ಲಿ ಸಿಬಿಐ ವಿನೀತ್‌ ವಿರುದ್ಧ ಕೇಸ್‌ ದಾಖಲಿಸಿಕೊಂಡಿತ್ತು.