ನವದೆಹಲಿ(ಏ.10): ಮಾಟ- ಮಂತ್ರ ಹಾಗೂ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಇದೇ ವೇಳೆ, 18 ವರ್ಷ ಮೇಲ್ಪಟ್ಟವ್ಯಕ್ತಿಗಳು ತಮ್ಮ ಧರ್ಮವನ್ನು ಆರಿಸಿಕೊಳ್ಳುವ ಮುಕ್ತ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂವಿಧಾನದ ಮೂಲ ಆಶಯದಲ್ಲಿ ಜಾತ್ಯತೀತ ತತ್ವ ಎಂಬುದು ಪ್ರಮುಖ ಭಾಗ. ಆದರೆ ಧಾರ್ಮಿಕ ಮತಾಂತರ ಎಂಬುದು ಜಾತ್ಯತೀತತೆಗೆ ವಿರುದ್ಧ. ಹೀಗಾಗಿ ಧಾರ್ಮಿಕ ಮತಾಂತರ ದುರ್ಬಳಕೆ ತಡೆಯುವ ಸಂಬಂಧ ಕಾಯ್ದೆ ರೂಪಿಸಲು ಸಮಿತಿಯೊಂದನ್ನು ರಚಿಸುವ ಕುರಿತು ಸಾಧಾಸಾಧ್ಯತೆ ಪರಿಶೀಲಿಸಲು ಸರ್ಕಾರಕ್ಕೆ ಸೂಚಿಸಬೇಕು. ಇದೇ ವೇಳೆ ಮಾಟ- ಮಂತ್ರ, ಮೂಢನಂಬಿಕೆ, ವಂಚನೆ ಮೂಲಕ ಧಾರ್ಮಿಕ ಮತಾಂತರಗಳ ವಿರುದ್ಧ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಾಯ್ದೆ ರೂಪಿಸಿ ಕನಿಷ್ಠ 3 ಹಾಗೂ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸುವಂತೆ ನಿರ್ದೇಶನ ನೀಡಬೇಕು ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದರು.

ಅವರ ಪರವಾಗಿ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣ ಅವರು ವಿಚಾರಣೆಗೆ ಹಾಜರಾಗಿದ್ದರು. ಅರ್ಜಿಯಲ್ಲಿನ ಅಂಶಗಳನ್ನು ತಿಳಿದು ಆಕ್ರೋಶಗೊಂಡ ನ್ಯಾಯಪೀಠ, ಇದೆಂತಹ ರಿಟ್‌ ಅರ್ಜಿ? ಭಾರಿ ದಂಡ ಹೇರಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟವರು ತಮ್ಮ ಧರ್ಮ ಆಯ್ಕೆ ಮಾಡಿಕೊಳ್ಳಬಾರದು ಎಂಬುದಕ್ಕೆ ಯಾವ ಕಾರಣವೂ ಇಲ್ಲ ಎಂದು ಚಾಟಿ ಬೀಸಿತು. ಅರ್ಜಿಯನ್ನು ಹಿಂಪಡೆದು ಸರ್ಕಾರ ಹಾಗೂ ಕಾನೂನು ಆಯೋಗದ ಮೊರೆ ಹೋಗಲು ಅನುಮತಿ ನೀಡಬೇಕು ಎಂದು ಮನವಿ ಶಂಕರ ನಾರಾಯಣ ಮಾಡಿದರು. ಅದಕ್ಕೂ ಅನುಮತಿಯನ್ನು ನ್ಯಾಯಪೀಠ ನಿರಾಕರಿಸಿತು. ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಪ್ರಕರಣವನ್ನು ಇತ್ಯರ್ಥಗೊಳಿಸಿತು.