* ಆರ್‌ಎಸ್‌ಎಸ್‌ ಬೆಂಬಲಿತ ವಾರದ ಪತ್ರಿಕೆ ‘ಪಾಂಚಜನ್ಯ’ವು ಧರ್ಮಯುದ್ಧ ಮಾಡುತ್ತಿದೆ * ಆರ್‌ಎಸ್‌ಎಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್‌ ವೈದ್ಯ ಪ್ರತಿಪಾದನೆ* ಇನ್ಫಿ ಕುರಿತ ಲೇಖ​ನದ ಬೆನ್ನಲ್ಲೇ RSS ಹೇಳಿ​ಕೆ

ನವದೆಹಲಿ(ಸೆ.09): ಆರ್‌ಎಸ್‌ಎಸ್‌ ಬೆಂಬಲಿತ ವಾರದ ಪತ್ರಿಕೆ ‘ಪಾಂಚಜನ್ಯ’ವು ಧರ್ಮಯುದ್ಧ ಮಾಡುತ್ತಿದೆ ಎಂದು ಆರ್‌ಎಸ್‌ಎಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್‌ ವೈದ್ಯ ಪ್ರತಿಪಾದಿಸಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಇಸ್ಫೋಸಿಸ್‌ ಸಂಸ್ಥೆ ಎಡಪಂಥೀಯರಿಗೆ ನೆರವು ನೀಡುತ್ತಿದೆ ಎಂದು ಟೀಕಿಸಿ ಪಾಂಚಜನ್ಯ ಪ್ರಕಟಿಸಿದ್ದ ಲೇಖನದಿಂದ ಆರ್‌ಎಸ್‌ಎಸ್‌ ಅಂತರ ಕಾಯ್ದುಕೊಂಡಿತ್ತು. ಇದರ ಬೆನ್ನಲ್ಲೇ, ಇದೀಗ ಪಾಂಚಜನ್ಯ ವಾರ ಪತ್ರಿಕೆಯನ್ನು ಆರ್‌ಎಸ್‌ಎಸ್‌ ಬೆಂಬಲಿಸಿದೆ.

ಸೋಮ​ವಾ​ರ ಮಾತನಾಡಿದ ವೈದ್ಯ ಅವರು, ‘ಪಾಂಚಜನ್ಯವು ಧರ್ಮಯುದ್ಧದ ಶಂಖ ನಾದವಾಗಿದೆ. ಕೆಲವು ಸಲ ಒಳ್ಳೆಯವರು ಸಹ ತಪ್ಪು ಮಾಡು​ತ್ತಾ​ರೆ. ಹೀಗಾಗಿ ಧರ್ಮಯುದ್ಧದ ಹೋರಾಟದ ವೇಳೆ ಕೆಲವು ಸಲ ಒಳ್ಳೆಯವರನ್ನೂ ಸಹ ಗುರಿಯಾಗಿಸಿಕೊಳ್ಳಬೇಕಾಗುತ್ತದೆ’ ಎಂದರು.

ಇಸ್ಫೋಸಿಸ್‌ ಅಭಿವೃದ್ಧಿಪಡಿಸಿದ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ಘಾಸಿಗೊಳಿಸಲು ಇಸ್ಫೋಸಿಸ್‌ ಮುಖಾಂತರ ದೇಶವಿರೋಧಿ ಪಡೆಗಳು ಯತ್ನಿಸುತ್ತಿವೆಯೇ ಎಂದು ಪಾಂಚಜನ್ಯ ಟೀಕಿಸಿತ್ತು. ಇದಕ್ಕೆ ವಿಪಕ್ಷಗಳಿಂದ ಭಾರೀ ಟೀಕೆ ವ್ಯಕ್ತವಾಗಿತ್ತು