ಬಾಬ್ರಿ ಮಸೀದಿ ಧ್ವಂಸದಲ್ಲಿ ಪಾಕ್ ಕೈವಾಡ?
ಈಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಲಕ್ನೋ ಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಇನ್ನು ಇದರ ಹಿಂದೆ ಪಾಕ್ ಕೈವಾಡದ ಮಾತುಗಳು ಇದ್ದು ಏನದು ವಿಚಾರ ಇಲ್ಲಿದೆ ಮಾಹಿತಿ
ಲಖನೌ (ಅ.02): ಪಾಕಿಸ್ತಾನ ಗುಪ್ತಚರ ಸಂಸ್ಥೆಯ ವ್ಯಕ್ತಿಗಳು ಬಾಬ್ರಿ ಮಸೀದಿ ಪ್ರವೇಶಿಸಿ, ಅದರ ಧ್ವಂಸಕ್ಕೆ ಕಾರಣವಾಗಿರಬಹುದು ಎಂಬ ಮಹತ್ವದ ರಹಸ್ಯ ಮಾಹಿತಿ ಬಗ್ಗೆ ತನಿಖೆಯನ್ನೇ ಸಿಬಿಐ ನಡೆಸಿಲ್ಲ. ಹೀಗಾಗಿ ಪ್ರಕರಣ ಶಕ್ತಿ ಕಳೆದುಕೊಂಡು ದುರ್ಬಲವಾಯಿತು ಎಂದು ವಿಶೇಷ ನ್ಯಾಯಾಲಯ ಹೇಳಿದೆ.
28 ವರ್ಷಗಳಿಂದ ನಡೆಯುತ್ತಿದ್ದ ಪ್ರಕರಣದ ತೀರ್ಪನ್ನು ಬುಧವಾರ ವಿಶೇಷ ನ್ಯಾಯಾಧೀಶ ಎಸ್.ಕೆ. ಯಾದವ್ ಪ್ರಕಟಿಸಿ, ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿ 32 ಮಂದಿಯನ್ನು ಖುಲಾಸೆಗೊಳಿಸಿದ್ದರು. 2300 ಪುಟಗಳ ಆ ತೀರ್ಪಿನಲ್ಲಿ ಪಾಕಿಸ್ತಾನ ಪಾತ್ರದ ಬಗ್ಗೆಯೂ ಉಲ್ಲೇಖವಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಜೀವಮಾನದ ಅಗ್ನಿಪರೀಕ್ಷೆ ಗೆದ್ದ ಬಿಜೆಪಿ ಭೀಷ್ಮ ..
ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಕಡೆಯ ವ್ಯಕ್ತಿಗಳು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಜನರೊಂದಿಗೆ ಸೇರಿಕೊಂಡು ಹಾನಿ ಮಾಡಬಹುದು. ಅಶಾಂತಿಗೆ ಕಾರಣವಾಗಬಹುದು ಎಂದು 1992ರ ಡಿ.5ರಂದು ಸ್ಥಳೀಯ ಗುಪ್ತಚರ ಘಟಕ ವರದಿ ನೀಡಿತ್ತು. ಪಾಕಿಸ್ತಾನದಿಂದ ಅಯೋಧ್ಯೆಗೆ ಸ್ಪೋಟಕ ಬಂದಿದೆ ಎಂಬ ವರದಿಗಳೂ ಇದ್ದವು.
ಜಮ್ಮು-ಕಾಶ್ಮೀರದ ಉಧಂಪುರದಿಂದ ಸಮಾಜದ್ರೋಹಿ ಶಕ್ತಿಗಳು ಸೇರಿ 100 ವ್ಯಕ್ತಿಗಳು ಕರ ಸೇವಕರ ಸೋಗಿನಲ್ಲಿ ಅಯೋಧ್ಯೆಗೆ ಬಂದಿದ್ದಾರೆ ಎಂದು ಮತ್ತೊಂದು ಗುಪ್ತಚರ ವರದಿ ತಿಳಿಸಿತ್ತು. ಇಷ್ಟೆಲ್ಲಾ ಮಹತ್ವದ ಮಾಹಿತಿ ಇದ್ದರೂ ತನಿಖೆಯನ್ನು ಸಿಬಿಐ ನಡೆಸಿಲ್ಲ. ಇದರಿಂದಾಗಿ ಪ್ರಕರಣ ದುರ್ಬಲ ಅಥವಾ ಶಕ್ತಿ ಕಳೆದುಕೊಂಡಿತು ಎಂದು ತೀರ್ಪಿನಲ್ಲಿ ಹೇಳಲಾಗಿದೆ.