ನವದೆಹಲಿ(ಡಿ.24): ಬ್ರಿಟನ್ನಿನಲ್ಲಿ ಕೊರೋನಾ ವೈರಸ್‌ನ ಹೊಸ ಪ್ರಭೇದ ಪತ್ತೆಯಾಗಿ ಭಾರತದಲ್ಲೂ ತೀವ್ರ ಆತಂಕ ಮೂಡಿರುವ ಬೆನ್ನಲ್ಲೇ ಮುಂದಿನ ವಾರವೇ ಆಕ್ಸ್‌ಫರ್ಡ್‌-ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಗೆ ಭಾರತ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಈ ಲಸಿಕೆಯ ಟ್ರಯಲ್‌ಗೆ ಸಂಬಂಧಿಸಿದಂತೆ ಲಸಿಕೆ ಪರಿಶೀಲನೆಯ ತಜ್ಞರ ಸಮಿತಿಯು ಕೇಳಿದ್ದ ಹೆಚ್ಚುವರಿ ದತ್ತಾಂಶಗಳನ್ನು ಪುಣೆಯ ಸೀರಂ ಸಂಸ್ಥೆ ಸೋಮವಾರವೇ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ಕ್ಕೆ ಸಲ್ಲಿಸಿದೆ. ಬ್ರಿಟನ್ನಿನಲ್ಲಿ ತಯಾರಾದ ಈ ಲಸಿಕೆಯ ಸ್ಥಳೀಯ ಪ್ರಯೋಗವನ್ನು ಸೀರಂ ಸಂಸ್ಥೆ ನಡೆಸಿದೆ. ಅಲ್ಲದೆ ಕೋವಿಶೀಲ್ಡ್‌ ಲಸಿಕೆಯನ್ನು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿದೆ. ಈ ಸಂಸ್ಥೆ ಸಲ್ಲಿಸಿದ ಹೆಚ್ಚುವರಿ ದತ್ತಾಂಶಗಳನ್ನು ತಜ್ಞರ ಸಮಿತಿಯು ಪರಾಮರ್ಶಿಸುತ್ತಿದ್ದು, ಅವು ತೃಪ್ತಿ ತಂದರೆ ಮುಂದಿನ ವಾರ ಲಸಿಕೆಯನ್ನು ಭಾರತದಲ್ಲಿ ತುರ್ತು ವಿತರಣೆ ಮಾಡಲು ಡಿಸಿಜಿಐ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆಕ್ಸ್‌ಫರ್ಡ್‌ ಲಸಿಕೆಗೆ ಭಾರತ ಒಪ್ಪಿಗೆ ನೀಡಿದರೆ ಈ ಲಸಿಕೆಗೆ ಒಪ್ಪಿಗೆ ನೀಡಿದ ಜಗತ್ತಿನ ಮೊದಲ ದೇಶ ಭಾರತವಾಗಲಿದೆ. ಜೊತೆಗೆ ಭಾರತದಲ್ಲಿ ಲೈಸನ್ಸ್‌ ಪಡೆದ ಮೊದಲ ಲಸಿಕೆ ಇದಾಗಲಿದೆ. ಬ್ರಿಟನ್ನಿನಲ್ಲೂ ಈ ಲಸಿಕೆಯ ತುರ್ತು ವಿತರಣೆಗೆ ಅನುಮತಿ ಕೋರಿ ಆಸ್ಟ್ರಾಜೆನೆಕಾ ಸಂಸ್ಥೆ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅದನ್ನು ಅಲ್ಲಿನ ಔಷಧ ನಿಯಂತ್ರಣ ಸಂಸ್ಥೆ ಪರಿಶೀಲಿಸುತ್ತಿದೆ. ಭಾರತ ಮತ್ತು ಬ್ರಿಟನ್ನಿನಲ್ಲಿ ಔಷಧ ನಿಯಂತ್ರಣ ಸಂಂಸ್ಥೆಗಳು ಪರಿಶೀಲನೆ ನಡೆಸುತ್ತಿರುವ ಆಕ್ಸ್‌ಫರ್ಡ್‌ ಲಸಿಕೆಯ ಟ್ರಯಲ್‌ ಡೇಟಾಗಳು ಒಂದೇ ಆಗಿವೆ. ಭಾರತದಲ್ಲಿ ಸೀರಂ ಸಂಸ್ಥೆ ನಡೆಸಿದ ಸ್ಥಳೀಯ ಪ್ರಯೋಗದ ಡೇಟಾವನ್ನು ಕೂಡ ಹೆಚ್ಚುವರಿಯಾಗಿ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.