Asianet Suvarna News Asianet Suvarna News

ದೇಶದಲ್ಲಿ ಕೊರೋನಾ ಮರಣ ಮೃದಂಗ: ಸಕ್ರಿಯ ಕೇಸ್‌ 5.52 ಲಕ್ಷಕ್ಕೆ ಏರಿಕೆ!

ಕೋವಿಡ್‌ಗೆ 354 ಬಲಿ: ಈ ವರ್ಷದ ಸರ್ವಾಧಿಕ| ಟೆಸ್ಟಿಂಗ್‌ ಹೆಚ್ಚಿಸಿದ್ದರೂ ನಿನ್ನೆ 53,480 ಕೇಸ್‌| ಸಕ್ರಿಯ ಕೇಸ್‌ 5.52 ಲಕ್ಷಕ್ಕೆ ಏರಿಕೆ| ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ 79% ಸಕ್ರಿಯ ಕೇಸ್‌| ನಿನ್ನೆ 10.22 ಲಕ್ಷ ಮಂದಿಗೆ ಕೊರೋನಾ ಟೆಸ್ಟ್‌

Over 5 52 Lakh Active Cases In India pod
Author
Bangalore, First Published Apr 1, 2021, 9:34 AM IST

ನವದೆಹಲಿ(ಏ.01): ಕಳೆದ ಎರಡು ವಾರಗಳಿಂದ ಸತತ ಏರುಗತಿಯಲ್ಲಿದ್ದ ಹೊಸ ಕೊರೋನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 53,480 ಹೊಸ ಕೇಸುಗಳು ದಾಖಲಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1.21 ಕೋಟಿಗೆ ಏರಿಕೆಯಾಗಿದೆ.

ಇದೇ ವೇಳೆ ದೇಶದಲ್ಲಿ 354 ಮಂದಿ ಸಾವಿಗೀಡಾಗಿದ್ದಾರೆ. ಇದು ಡಿಸೆಂಬರ್‌ 17ರ ನಂತರದ ಮತ್ತು ಈ ವರ್ಷದ ಸರ್ವಾಧಿಕ ಸಂಖ್ಯೆಯಾಗಿದೆ. ಈ ಮೂಲಕ ಸೋಂಕಿನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 1,62,548ಕ್ಕೆ ಹೆಚ್ಚಳವಾಗಿದೆ. ಕಳೆದ ಡಿಸೆಂಬರ್‌ 17ರಂದು ದೇಶದಲ್ಲಿ ಒಂದೇ ದಿನ 355 ಮಂದಿ ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದರು.

ಹೊಸ ಸೋಂಕಿತರೊಂದಿಗೆ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,52,566ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ 94.11ಕ್ಕೆ ಕುಸಿತ ಕಂಡಿದೆ. ಒಟ್ಟು ಸೋಂಕಿತರ ಪೈಕಿ 1.14 ಕೋಟಿ ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.

ಪರೀಕ್ಷೆ ಹೆಚ್ಚಿಸಿದ್ದರೂ ಸೋಂಕು ಕಮ್ಮಿ:

ಮಂಗಳವಾರ ದೇಶದಲ್ಲಿ 56,211 ಹೊಸ ಕೇಸುಗಳು ದೃಢಪಟ್ಟಿದ್ದವು. ಆದರೆ ಟೆಸ್ಟಿಂಗ್‌ 7.5 ಲಕ್ಷಕ್ಕೆ ಕಡಿಮೆ ಮಾಡಿದ ಕಾರಣದಿಂದ ಕಡಿಮೆ ಪ್ರಕರಣಗಳು ದೃಢಪಟ್ಟಿವೆ ಎಂದು ತಜ್ಞರು ವಿಶ್ಲೇಷಿಸಿದ್ದರು. ಆದರೆ ಮಾ.30ರ ಮಂಗಳವಾರ ಒಂದೇ ದಿನ 10.22 ಲಕ್ಷ ಮಂದಿ ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಆದಾಗ್ಯೂ ಸೋಂಕಿನ ಪ್ರಮಾಣ 53,480ಕ್ಕೆ ಇಳಿಕೆಯಾಗಿದೆ.

5 ರಾಜ್ಯಗಳಲ್ಲಿ 79% ಸಕ್ರಿಯ ಕೇಸ್‌:

ದೇಶದಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ.79.30ರಷ್ಟು ಕೇಸುಗಳು ಕೇವಲ 5 ರಾಜ್ಯಗಳಲ್ಲಿವೆ. ಮಹಾರಾಷ್ಟ್ರವೊಂದರಲ್ಲಿಯೇ ಶೇ.61ರಷ್ಟುಸಕ್ರಿಯ ಪ್ರಕಣಗಳಿವೆ. ಉಳಿದಂತೆ ಕರ್ನಾಟಕ, ಕೇರಳ ಪಂಜಾಬ್‌ ಮತ್ತು ಛತ್ತೀಸ್‌ಗಢ ನಂತರದ ಸ್ಥಾನದಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಹಾಗೆಯೇ ಹೊಸದಾಗಿ ದೃಢಪಡುತ್ತಿರುವ ಸೋಂಕಿನ ಪೈಕಿ ಶೇ.84.73ರಷ್ಟುಪ್ರಕರಣಗಳು ಮಹಾರಾಷ್ಟ್ರ, ಛತ್ತೀಸ್‌ಗಢ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್‌, ಪಂಜಾಬ್‌ ಮತ್ತು ಮಧ್ಯಪ್ರದೇಶ ಈ 8 ರಾಜ್ಯಗಳಲ್ಲಿ ಪತ್ತೆಯಾಗುತ್ತಿವೆ ಎಂದು ತಿಳಿಸಿದೆ.

ಈ ನಡುವೆ ಈವರೆಗೆ 6.30 ಕೋಟಿ ಡೋಸ್‌ ಲಸಿಕೆಯನ್ನು ನೀಡಲಾಗಿದೆ.

Follow Us:
Download App:
  • android
  • ios