ಹೊಸದಿಲ್ಲಿ[ಫೆ.25]: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಭಾರತ ಪ್ರವಾಸ ಇಂದು ಕೊನೆಯಾಗಲಿದೆ. ಸೋಮವಾರ ಅಹಮದಾಬಾದ್​ನ ಮೊಟೆರಾ ಸ್ಟೇಡಿಯಂ ಉದ್ಘಾಟನೆ ವೇಳೆ ಭಾರತದೊಂದಿಗೆ ಮಹತ್ವದ ರಕ್ಷಣಾ ಒಪ್ಪಂದದ ಬಗ್ಗೆ ಟ್ರಂಪ್ ಘೋಷಣೆ ಮಾಡಿದ್ದರು. ಅದರಂತೆ ಇಂದು ಒಟ್ಟು 3 ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸಹಿ ಹಾಕಿದ್ದಾರೆ.

"

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊಸದಿಲ್ಲಿಯ ಹೈದರಾಬಾದ್‌ ಹೌಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಉಭಯ ನಾಯಕರು ಜಂಟಿ ಹೇಳಿಕೆ ನೀಡಿದ್ದಾರೆ. ಮಾನಸಿಕ ಆರೋಗ್ಯ, ವೈದ್ಯಕೀಯ ಉತ್ಪನ್ನ ಹಾಗೂ ಇಂಧನ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಡ್ರಗ್ಸ್​ ದಂಧೆಯನ್ನು ನಿಯಂತ್ರಿಸಲು ಭಾರತ ಮತ್ತು ಅಮೆರಿಕ ಕೈಜೋಡಿಸಲಿವೆ. ಭಯೋತ್ಪಾದನೆಯನ್ನು ಬೆಂಬಲಿಸುವವರ ವಿರುದ್ಧ ಎರಡೂ ರಾಷ್ಟ್ರಗಳು ಸಮರ ಸಾರಲಿವೆ. ಭಾರತ ಮತ್ತು ಅಮೆರಿಕದ ನಡುವೆ ಮುಕ್ತ, ಪಾರದರ್ಶಕ ವ್ಯಾಪಾರ ನಡೆಯಲಿದೆ ಉಭಯ ನಾಯಕರು ಘೋಷಿಸಿದ್ದಾರೆ.

ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ, ಅಮೆರಿಕ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಸಮತೋಲನ ವ್ಯಾಪಾರ ವಹಿವಾಟು ನಡೆಸುವ ಬಗ್ಗೆಯೂ ಚರ್ಚಿಸಲಾಗಿದೆ. ವಾಣಿಜ್ಯ ಸಚಿವರು ಈ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಮಹತ್ವದ ಮಾತುಕತೆ ನಡೆದಿದ್ದು, ಇದು ಶೀಘ್ರದಲ್ಲಿಯೇ ಒಪ್ಪಂದ ರೂಪವಾಗಿ ಮೂಡಿಬರಲಿದೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತನಾಡಿ, ಭಾರತದ ಈ ಭೇಟಿ ನನ್ನ ಜೀವನದ ಸ್ಮರಣೀಯ ಪ್ರವಾಸಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ. ಮೊಟೆರಾ ಕ್ರೀಡಾಂಗಣದಲ್ಲಿನ ನಮಸ್ತೆ ಟ್ರಂಪ್‌ ಕಾರ್ಯಕ್ರಮ, ಆಗ್ರಾದ ತಾಜ್‌ಮಹಲ್‌ ವೀಕ್ಷಣೆ, ರಾಷ್ಟ್ರಪತಿ ಭವನ, ರಾಜಘಾಟ್‌ನಲ್ಲಿನ ಮಹಾತ್ಮ ಗಾಂಧಿ ಸಮಾಧಿ ವೀಕ್ಷಣೆ ನೆನಪಿನಲ್ಲಿ ಉಳಿಯಲಿದೆ. ಥ್ಯಾಂಕ್ಯೂ ಇಂಡಿಯಾ ಎಂದಿದ್ದಾರೆ.

ಮೂರು ಒಪ್ಪಂದಗಳಿಗೆ ಸಹಿ

1ನೇ ಒಪ್ಪಂದ - ಮಾನಸಿಕ ಆರೋಗ್ಯ

2ನೇ ಒಪ್ಪಂದ - ವೈದ್ಯ ಸಾಮಗ್ರಿಗಳ ರಕ್ಷಣೆ, ವೈದ್ಯಕೀಯ ಸಲಕರಣೆ ಸುರಕ್ಷತೆ ಒಪ್ಪಂದ 

3ನೇ ಒಪ್ಪಂದ - ಇಂಧನ ಇಲಾಖೆ ಡೀಲ್, ಭಾರತೀಯ ಇಂಧನ ನಿಗಮದ ಜತೆ ಸಹಿ

ಆಧುನಿಕ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಂದ:

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, "ಭಾರತದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇಂಧನ ಕ್ಷೇತ್ರದಲ್ಲಿ ಒಪ್ಪಂದ ಹಾಗೂ ರಕ್ಷಣಾ ಒಪ್ಪಂದಕ್ಕೂ ಸಹಿ ಹಾಕಿದ್ದೇವೆ," ಎಂದು ಹೇಳಿದ್ದಾರೆ. ಅಪಾಚೆ ಮತ್ತು ರೋಮಿಯೋ ಹೆಲಿಕಾಪ್ಟರ್ ಸೇರಿ 3 ಬಿಲಿಯನ್ ಡಾಲರ್​ಗೂ ಅಧಿಕ ಮೌಲ್ಯದ ಆಧುನಿಕ ಅಮೆರಿಕನ್ ಮಿಲಿಟರಿ ಶಸ್ತ್ರಾಸ್ತ್ರಗಳ ಖರೀದಿಯ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.