ನವದೆಹಲಿ[ಫೆ.28]: ಪಾಕಿಸ್ತಾನದ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಮಂಗಳವಾರ ಬೆಳಗಿನ ಜಾವ ಭಾರತೀಯ ವಾಯುಪಡೆ ನಡೆಸಿದ ದಾಳಿಗೆ ಸಂಬಂಧಿಸಿದ ಕುತೂಹಲಕರ ಸಂಗತಿಗಳು ಈಗ ಬೆಳಕಿಗೆ ಬಂದಿವೆ.

ಫೆ.18ಕ್ಕೆ ಮೋದಿ ಒಪ್ಪಿಗೆ

ಪಾಕ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸುವ ವಾಯುಪಡೆ ಹಾಗೂ ಗುಪ್ತಚರ ದಳಗಳ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ನೀಡಿದ್ದು ಫೆ.18ಕ್ಕೆ.

ಗೊತ್ತಿದ್ದುದು 7 ಜನರಿಗೆ ಮಾತ್ರ!

ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸುವ ವಿಚಾರ ಗೊತ್ತಿದ್ದುದು ಕೇವಲ ಏಳು ಜನರಿಗೆ. ಅವರು - ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ‘ರಾ’ ಮುಖ್ಯಸ್ಥ ಅನಿಲ್‌ ಧಸ್ಮಾನಾ, ಗುಪ್ತಚರ ದಳದ ಮುಖ್ಯಸ್ಥ ರಾಜೀವ್‌ ಜೈನ್‌, ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾ, ಸೇನಾಪಡೆ ಮುಖ್ಯಸ್ಥ ಬಿಪಿನ್‌ ರಾವತ್‌ ಹಾಗೂ ನೌಕಾಪಡೆ ಮುಖ್ಯಸ್ಥ ಸುನೀಲ್‌ ಲಂಬಾ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಗೃಹ ಮಂತ್ರಿ ರಾಜನಾಥ್‌ ಸಿಂಗ್‌ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ದಾಳಿ ನಡೆಸಿದ ನಂತರ ಮಾಹಿತಿ ನೀಡಲಾಯಿತು.

6 ಸ್ಥಳ ಗುರುತಿಸಲಾಗಿತ್ತು

ಫೆ.14ರಂದು ಪುಲ್ವಾಮಾದಲ್ಲಿ ಜೈಷ್‌ ಸಂಘಟನೆಯ ಆತ್ಮಹತ್ಯಾ ಬಾಂಬರ್‌ ದಾಳಿ ನಡೆಸಿದ ತಕ್ಷಣವೇ ಭಾರತದ ಬಾಹ್ಯ ಗುಪ್ತಚರ ದಳ ‘ರಾ’ಗೆ ಪಾಕಿಸ್ತಾನದಲ್ಲಿ ದಾಳಿ ನಡೆಸಲು ಗುರಿಗಳನ್ನು ಗುರುತಿಸುವಂತೆ ಸರ್ಕಾರ ಸೂಚಿಸಿತ್ತು. ರಾ ಪಾಕಿಸ್ತಾನದಲ್ಲಿರುವ ಜೈಷ್‌ ಸಂಘಟನೆಯ ಅತ್ಯಂತ ಹಳೆಯ ತರಬೇತಿ ಶಿಬಿರವಾದ ಬಾಲಾಕೋಟ್‌ ಸೇರಿದಂತೆ ಒಟ್ಟು ಆರು ಸ್ಥಳಗಳನ್ನು ಗುರುತಿಸಿತ್ತು.

ಬಾಲಾಕೋಟ್‌ ಆಯ್ಕೆ ಏಕೆ?

ಬಾಲಾಕೋಟ್‌ ಜೈಷ್‌ ಸಂಘಟನೆಯ ಅತಿದೊಡ್ಡ ತರಬೇತಿ ಶಿಬಿರವಾದ್ದರಿಂದ ಅದರ ಮೇಲೆ ದಾಳಿ ನಡೆಸಿದರೆ ಜೈಷ್‌ಗೆ ಕಠಿಣ ಸಂದೇಶ ರವಾನಿಸಿದಂತಾಗುತ್ತಿತ್ತು. ಪುಲ್ವಾಮಾದಲ್ಲಿ ಭಾರತಕ್ಕಾದ ಹಾನಿಯ ತೀವ್ರತೆಗೆ ತಕ್ಕ ಪ್ರತೀಕಾರವನ್ನು ಬಾಲಾಕೋಟ್‌ನಲ್ಲಿ ತೀರಿಸಿಕೊಳ್ಳಬಹುದಿತ್ತು. ಬಾಲಾಕೋಟ್‌ನಲ್ಲಿ ಪಾಕಿಸ್ತಾನದ ಸಾಮಾನ್ಯ ನಾಗರಿಕರು ಇರಲಿಲ್ಲ. ಹೀಗಾಗಿ ತಕ್ಷಣದ ಪ್ರತಿದಾಳಿ ಅಥವಾ ಅಂತಾರಾಷ್ಟ್ರೀಯ ಸಮುದಾಯದ ಸಿಟ್ಟನ್ನು ಭಾರತ ಎದುರಿಸಬೇಕಿರಲಿಲ್ಲ. ಬಾಲಾಕೋಟ್‌ ಮೇಲೆ ದಾಳಿ ನಡೆಸಿದರೆ ಇದನ್ನು ಸೇಡಿನ ದಾಳಿ ಎಂಬುದಕ್ಕಿಂತ ಭಾರತದ ಸ್ವಯಂ ರಕ್ಷಣಾ ದಾಳಿ ಎಂಬಂತೆ ಬಿಂಬಿಸಿಕೊಳ್ಳುವುದು ಸುಲಭವಿತ್ತು.

ಫೆ.22ರಿಂದಲೇ ವಿಮಾನ ಹಾರಾಟ

ಪಾಕಿಸ್ತಾನವನ್ನು ಗೊಂದಲಗೊಳಿಸಲು ಭಾರತೀಯ ವಾಯುಪಡೆಯ ವಿಮಾನಗಳು ಫೆ.22ರಿಂದಲೇ ರಾತ್ರಿಯ ವೇಳೆ ಬೇರೆ ಬೇರೆ ವಾಯು ನೆಲೆಗಳಿಂದ ಹಾರಾಟ ನಡೆಸುತ್ತಿದ್ದವು. ಫೆ.25ರಂದು ಗುಪ್ತಚರ ದಳದ ಮೂಲಗಳು ಬಾಲಾಕೋಟ್‌ನಲ್ಲಿ 300ರಿಂದ 350 ಉಗ್ರರು ಒಂದೆಡೆ ಸೇರಿದ್ದಾರೆ ಎಂಬ ಮಾಹಿತಿ ನೀಡಿದವು. ಅಂದು ಸಂಜೆಯೇ ಪ್ರಧಾನಿ ಮೋದಿಗೆ ಮಾಹಿತಿ ನೀಡಿ, ಫೆ.26ರ ಬೆಳಗಿನ ಜಾವ ದಾಳಿ ನಡೆಸುವುದೆಂದು ಅಂತಿಮಗೊಳಿಸಲಾಯಿತು.

13 ನಿಮಿಷದಲ್ಲಿ ಬಾಂಬ್‌ ದಾಳಿ

ಮಂಗಳವಾರ ಬೆಳಿಗ್ಗೆ 3.40ರಿಂದ 3.53ರ ನಡುವೆ ಭಾರತೀಯ ವಾಯುಪಡೆಯ ಟೈಗರ್‌ ಸ್ಕಾ$್ವಡ್ರನ್‌ಗೆ ಸೇರಿದ ನಾಲ್ಕು ಮಿರಾಜ್‌ 2000ಐ ಯುದ್ಧ ವಿಮಾನಗಳು ಬಾಲಾಕೋಟ್‌ನಲ್ಲಿ ಬಾಂಬ್‌ ದಾಳಿ ನಡೆಸಿದವು. ಈ ವಿಮಾನಗಳಲ್ಲಿ ಕ್ರಿಸ್ಟಲ್‌ ಮೇಜ್‌ ಮಿಸೈಲ್‌ಗಳು ಹಾಗೂ ‘ಸ್ಪೈಸ್‌ 2000 ಸ್ಮಾರ್ಟ್‌ ಬಾಂಬ್‌’ ಎರಡೂ ಇದ್ದವು. ಇವುಗಳಲ್ಲಿ ಯಾವುದರ ಮೂಲಕ ದಾಳಿ ನಡೆಸಲಾಗಿದೆ ಎಂಬುದು ಸ್ಪಷ್ಟವಿಲ್ಲ. ಕ್ರಿಸ್ಟಲ್‌ ಮೇಜ್‌ ಕ್ಷಿಪಣಿಗಳು 100 ಕಿ.ಮೀ. ದೂರ ಚಲಿಸಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಸ್ಪೈಸ್‌ 2000 ಸ್ಮಾರ್ಟ್‌ ಬಾಂಬ್‌ಗಳು ಕೂಡ ಇದೇ ತಂತ್ರಜ್ಞಾನ ಬಳಸಿ ಸಾಮಾನ್ಯ ಬಾಂಬ್‌ಗಳನ್ನು ಸ್ಮಾರ್ಟ್‌ ಬಾಂಬ್‌ ಆಗಿ ಪರಿವರ್ತಿಸುತ್ತವೆ.

ತೆಗೆದುಕೊಂಡ ಸಮಯ 2.30 ತಾಸು

ಉಗ್ರರ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಲು ಭಾರತದ ಯುದ್ಧವಿಮಾನಗಳು ತೆಗೆದುಕೊಂಡ ಒಟ್ಟು ಅವಧಿ ಎರಡೂವರೆ ತಾಸು. ಮಂಗಳವಾರ ಬೆಳಗಿನ ಜಾವ 1.30ಕ್ಕೆ 11 ವಿಮಾನಗಳು ಟೇಕಾಫ್‌ ಆಗಿ (ಮಿರಾಜ್‌ಗಳು ಗ್ವಾಲಿಯರ್‌ನಿಂದ ಮತ್ತು ಸುಖೋಯ್‌ಗಳು ಇತರ ವಾಯು ನೆಲೆಗಳಿಂದ), ದಾಳಿ ನಡೆಸಿ, ಸರಿಯಾಗಿ 4 ಗಂಟೆಗೆ ಮರಳಿ ಬಂದು ಲ್ಯಾಂಡ್‌ ಆದವು.

ದಾಳಿ ನಂತರ ಮೋದಿ ಸಭೆ

ಮಂಗಳವಾರ ದಾಳಿಯ ನಂತರ ಪಾಕಿಸ್ತಾನ ತಾನೂ ದಾಳಿ ನಡೆಸುವ ಹಕ್ಕು ಉಳಿಸಿಕೊಂಡಿದ್ದೇನೆ ಎಂದು ಹೇಳಿಕೆ ನೀಡಿತು. ಅದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾರತದ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹಾಗೂ ಎರಡು ಗುಪ್ತಚರ ದಳಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದರು. ಆ ಸಭೆಯಲ್ಲಿ ಭಾರತದ ರಕ್ಷಣಾ ಪಡೆಗಳ ಸನ್ನದ್ಧ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಅಮೆರಿಕಕ್ಕೆ ದೋವಲ್‌ ಫೋನ್‌

ಮಂಗಳವಾರದ ದಾಳಿಯ ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅಮೆರಿಕದ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ಗೆ ಕರೆ ಮಾಡಿ ಪಾಕಿಸ್ತಾನದ ಮೇಲೆ ಭಾರತ ನಡೆಸಿರುವ ಮುನ್ನೆಚ್ಚರಿಕೆ ದಾಳಿಯ ಬಗ್ಗೆ ಮಾಹಿತಿ ನೀಡಿದರು.

ಉಗ್ರರ ಕ್ಯಾಂಪ್‌ ಹೆಸರು

ಪಾಕಿಸ್ತಾನದ ಮನಶೇರಾದ ಬಾಲಾಕೋಟ್‌ನಲ್ಲಿ ಭಾರತೀಯ ವಾಯುಪಡೆಯಿಂದ ಧ್ವಂಸಗೊಂಡ ಜೈಷ್‌-ಎ-ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯ ತರಬೇತಿ ಕೇಂದ್ರದ ಹೆಸರು ಮರ್ಕಜ್‌ ಸೈಯದ್‌ ಅಹಮ್ಮದ್‌ ಶಹೀದ್‌ ಟ್ರೇನಿಂಗ್‌ ಕ್ಯಾಂಪ್‌. ಇಲ್ಲಿದ್ದ 325 ಮಂದಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಫೋಟೋ ಸಾಕ್ಷ್ಯ ಇದೆ

ಜೆಇಎಂ ಕ್ಯಾಂಪ್‌ ಮೇಲೆ ದಾಳಿ ನಡೆಸಿದ ಮೇಲೆ ಭಾರತೀಯ ವಾಯುಪಡೆ ಅಲ್ಲಿನ ಫೋಟೋಗಳನ್ನು ತೆಗೆದುಕೊಂಡು ಬಂದಿದೆ. ಆದರೆ, ಅವುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿಲ್ಲ. ದಾಳಿ ನಡೆಸಿದ ಮೇಲೆ ಫೋಟೋ ತೆಗೆಯಲೆಂದೇ ಮಿರಾಜ್‌ ವಿಮಾನಗಳು ತಮ್ಮೊಂದಿಗೆ ಹೆರಾನ್‌ ಡ್ರೋನ್‌ಗಳನ್ನು ಕರೆದುಕೊಂಡು ಹೋಗಿದ್ದವು.

ದಾಳಿಗೆ ತೆರಳಿದ್ದ ವಿಮಾನಗಳು 11

ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸುವ ತಂಡದಲ್ಲಿದ್ದುದು ಒಟ್ಟು 11 ಯುದ್ಧ ವಿಮಾನಗಳು. ಮಿರಾಜ್‌ 2000 ಹಾಗೂ ಮಿರಾಜ್‌ 2000ಐ ಯುದ್ಧ ವಿಮಾನಗಳು ಬಾಂಬ್‌ ದಾಳಿ ನಡೆಸಿದವು. ಅವುಗಳ ಬೆಂಗಾವಲಿಗೆ ಸುಖೋಯ್‌-30 ಎಂಕೆಐ ಯುದ್ಧವಿಮಾನಗಳು ತೆರಳಿದ್ದವು. ಜೊತೆಗೆ ಫಾಲ್ಕನ್‌ ಅವಾಕ್ಸ್‌ ಹಾಗೂ ಅಂತರಿಕ್ಷದಲ್ಲಿ ಇಂಧನ ಮರುಪೂರಣ ಮಾಡುವ ಎಂಬ್ರೇಯರ್‌ ಎಇಡಬ್ಲ್ಯುಎಸ್‌ (2 ವಿಮಾನಗಳು) ಮತ್ತು ದಾಳಿಯ ನಂತರದ ಫೋಟೋ ತೆಗೆಯಲು ಹೆರಾನ್‌ ಡ್ರೋನ್‌ಗಳು ತೆರಳಿದ್ದವು.

ಉಗ್ರರಿಗೆ 3 ಕೋರ್ಸ್‌!

ಬಾಲಾಕೋಟ್‌ನಲ್ಲಿ ಜೈಷ್‌ ಉಗ್ರರಿಗೆ ಮೂರು ರೀತಿಯ ಭಯೋತ್ಪಾದಕ ದಾಳಿಯ ಕೋರ್ಸ್‌ಗಳಿವೆ. ದೌರಾ-ಎ-ಆಮ್‌, ದೌರಾ-ಎ-ಖಾಸ್‌ ಹಾಗೂ ದೌರಾ-ಎ-ಜರಾರ್‌ ಎಂಬುದು ಅವುಗಳ ಹೆಸರು. ಫೆ.14ರ ಪುಲ್ವಾಮಾ ದಾಳಿ ಯಶಸ್ವಿಯಾದ ನಂತರ ಸಂಭವನೀಯ ಆತ್ಮಹತ್ಯಾ ಬಾಂಬರ್‌ಗಳನ್ನೆಲ್ಲ ಬಾಲಾಕೋಟ್‌ಗೆ ಕರೆಸಿ ತರಬೇತಿ ತೀವ್ರಗೊಳಿಸಿ ಭಾರತದ ಮೇಲೆ ಇನ್ನಷ್ಟುದಾಳಿ ನಡೆಸಲು ನಿರ್ಧರಿಸಲಾಗಿತ್ತು. ಫೆ.25ರಂದು ಕೋರ್ಸ್‌ ಆರಂಭವಾಗಿತ್ತು. ಆರಂಭಿಕ ಕೋರ್ಸ್‌ಗೆ 107 ಉಗ್ರರು ಸೇರ್ಪಡೆಯಾಗಿದ್ದರು. ಒಟ್ಟು 325 ಉಗ್ರರು ತರಬೇತಿಯಲ್ಲಿದ್ದರು. ಪುಲ್ವಾಮಾದಲ್ಲಿ ಕಾರು ಬಾಂಬ್‌ ದಾಳಿ ಯಶಸ್ವಿಯಾದ ನಂತರ ಇವರೆಲ್ಲ ಮುಂದಿನ ದಾಳಿ ನಡೆಸಲು ಉನ್ಮತ್ತರಾಗಿದ್ದರು.