ನವದೆಹಲಿ(ಅ.26): ಭಾರತೀಯ ಸೇನೆ ಯಾರಿಗೂ ನಮ್ಮ ದೇಶದ ಒಂದಿಂಚೂ ಜಾಗ ಕಬಳಿಸಲು ಬಿಡುವುದಿಲ್ಲ ಎಂದು ರಾಜನಾಥ್ ಸಿಂಗ್ ಭರವಸೆ ವ್ಯಕ್ತಪಡಿಸಿದ ಬೆನ್ನಲ್ಲೇ ಇತ್ತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡಾ ಡ್ರ್ಯಾಗನ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಪಾಯ ಎಲ್ಲಿ ಹುಟ್ಟಿಕೊಳ್ಳುತ್ತದೋ ಅಲ್ಲೇ ಭಾರತ ಹೋರಾಡಿ ಅದನ್ನು ನಾಶ ಮಾಡುತ್ತದೆ. ಇದು ಒಬ್ಬ ವ್ಯಕ್ತಿಯ ಹಿತಾಸಕ್ತಿಗಲ್ಲ ಬದಲಾಗಿ ದೇಶದ ಒಳಿತನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತೇವೆ ಎಂದು ಚೀನಾಗೆ ವಾರ್ನಿಂಗ್ ನೀಡಿದ್ದಾರೆ.

ಇನ್ನು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಕೂಡಾ ಚೀನಾಗೆ ಎಚ್ಚರಿಕೆ ನೀಡುತ್ತಾ ಭಾರತೀಯ ಸೇನೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. 'ನಾವು ಯಾವತ್ತೂ ಎಚ್ಚರದಿಂದಿರಬೇಕು. ಈಗಾಗಲೇ ಭಾರತೀಯ ಸೈನಿಕರು ಚೀನಾದ ದುಷ್ಕೃತ್ಯಕ್ಕೆ ತಕ್ಕ ಉತ್ತರ ನೀಡಿದ್ದಾರೆ' ಎಂದಿದ್ದರು.

ಇನ್ನು ಆಯುಧ ಪೂಜೆ ಬಳಿಕ ಮಾತನಾಡಿದ ರಾಜನಾಥ್ ಸಿಂಗ್ ಚೀನಾ ಜೊತೆಗೆ ಸದ್ಯ ನಡೆಯುತ್ತಿರುವ ಗಡಿ ಸಮಸ್ಯೆ ಶೀಘ್ರದಲ್ಲಿ ಕೊನೆಯಾಗಿ, ಶಾಂತಿ ನೆಲೆಸಲಿ ಎಂದು ನಾವು ಬಯಸುತ್ತೇವೆ. ಆದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವಷ್ಟರಲ್ಲಿ ಮತ್ತೆ ಯವುದಾದರೂ ಸಮಸ್ಯೆ ಹುಟ್ಟಿಕೊಳ್ಳುತ್ತಿದೆ ಎಂದಿದ್ದಾರೆ.