* ಕೇಂದ್ರ ಸರ್ಕಾರದಿಂದ ಹೊಸ ಸೌಲಭ್ಯ* ಕೋವಿಡ್‌ ಲಸಿಕೆಗೆ ವಾಟ್ಸಾಪ್‌ನಲ್ಲೇ ನೋಂದಣಿ ಮಾಡಿಸಿ

ನವದೆಹಲಿ(ಆ.25): ಲಸಿಕೆಗಾಗಿ ಇನ್ನು ಲಸಿಕಾ ಕೇಂದ್ರಕ್ಕೆ ಹೋಗಿ ಅಥವಾ ಕೋವಿನ್‌ ವೆಬ್‌ಸೈಟ್‌ನಲ್ಲೇ ನೋಂದಣಿ ಮಾಡಿಕೊಳ್ಳಬೇಕಿಲ್ಲ. ಇನ್ನು ಮುಂದೆ ವಾಟ್ಸಾಪ್‌ ಮೂಲಕ ಹತ್ತಿರದ ಕೋವಿಡ್‌ ಲಸಿಕಾ ಕೇಂದ್ರ ಹುಡುಕಬಹುದು ಮತ್ತು ಲಸಿಕೆ ಪಡೆಯಲು ನೋಂದಣಿ ಮಾಡಬಹುದು.

- ಇಂಥ ಜನಸ್ನೇಹಿ ಸೌಲಭ್ಯವನ್ನು ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

‘ಮೈ ಗವ್‌ ಕೊರೋನಾ ಹೆಲ್ಪ್‌ಡೆಸ್ಕ್‌’ ವಾಟ್ಸಾಪ್‌ ಸಂಖ್ಯೆಯಾದ +91 9013151515 ನಂಬರನ್ನು ಸೇವ್‌ ಮಾಡಿಕೊಂಡು ವಾಟ್ಸಾಪ್‌ನಲ್ಲಿ ‘ಬುಕ್‌ ಸ್ಲಾಟ್‌’ ಎಂದು ಟೈಪ್‌ ಮಾಡಬೇಕು. ಈ ನಂಬರಿಗೆ ಸಂದೇಶ ಕಳುಹಿಸಿದರೆ ಮೊಬೈಲ್‌ ನಂಬರಿಗೆ 6 ನಂಬರ್‌ಗಳ ಒಟಿಪಿ ಬರುತ್ತದೆ. ನಂತರ ಬಳಕೆದಾರರು ದಿನಾಂಕ, ಸ್ಥಳ, ಲಸಿಕೆ, ಪಿನ್‌ಕೋಡ್‌ ಮುಂತಾದ ಮಾಹಿತಿಗಳನ್ನು ನೀಡಬೇಕು. ಆಗ ಎಲ್ಲಿ ಲಸಿಕೆ ಲಭ್ಯವಿದೆ ಎಂಬ ಮಾಹಿತಿಯು ವಾಟ್ಸಾಪ್‌ನಲ್ಲೇ ಬಳಕೆದಾರರಿಗೆ ಸಿಗಲಿದೆ.

ಇತ್ತೀಚೆಗೆ ಲಸಿಕಾ ಪ್ರಮಾಣಪತ್ರವನ್ನು ವಾಟ್ಸಾಪ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಲು ಮೈಗವ್‌ ಕೊರೋನಾ ಹೆಲ್ಪ್‌ಡೆಸ್ಕ್‌ ವೇದಿಕೆ ಅನುಕೂಲ ಮಾಡಿಕೊಟ್ಟಿತ್ತು. ಅಂದಿನಿಂದ ಈವರೆಗೆ 32 ಲಕ್ಷಕ್ಕೂ ಅಧಿಕ ಕೋವಿಡ್‌ ಲಸಿಕಾ ಪ್ರಮಾಣಪತ್ರಗಳು ಡೌನ್‌ಲೋಡ್‌ ಆಗಿವೆ.

‘ಇದರಲ್ಲಿ ಕೋವಿಡ್‌ ಕುರಿತಂತೆ ಈ ವೇದಿಕೆ ವಿಶ್ವಾಸಾರ್ಹ ಮಾಹಿತಿ ನೀಡಲಾಗುತ್ತಿದೆ. ಈಗ ನಾಗರಿಕರು ಲಸಿಕಾ ಕೇಂದ್ರಗಳ ಹುಡುಕಾಟ ಮತ್ತು ಲಸಿಕೆಗಾಗಿ ನೋಂದಣಿಯನ್ನು ಈ ವೇದಿಕೆಯ ಮೂಲಕ ಮಾಡಿಕೊಳ್ಳಬಹುದು. ವಾಟ್ಸಾಪ್‌ ಸಹಭಾಗಿತ್ವದೊಂದಿಗೆ ನಮ್ಮ ಚಾಟ್‌ಬಾಟ್‌ ಹೆಚ್ಚಿನ ಜನರ ವಿಶ್ವಾಸವನ್ನು ಗಳಿಸಿದೆ. ಸಾಂಕ್ರಾಮಿಕದ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ’ ಎಂದು ಮೈಗವ್‌ ಸಿಇಒ ಅಭಿಷೇಕ್‌ ಸಿಂಗ್‌ ಹೇಳಿದ್ದಾರೆ.