ಗೋಕರ್ಣ ಹನುಮನ ಜನ್ಮಭೂಮಿ, ಕೊಪ್ಪಳದ ಅಂಜನಾದ್ರಿ ಕರ್ಮಭೂಮಿ!
ಗೋಕರ್ಣ ಹನುಮನ ಜನ್ಮಭೂಮಿ, ಕೊಪ್ಪಳದ ಅಂಜನಾದ್ರಿ ಕರ್ಮಭೂಮಿ| ವಾಲ್ಮೀಕಿ ರಾಮಾಯಣದಲ್ಲೇ ಉಲ್ಲೇಖ: ರಾಘವೇಶ್ವರ ಶ್ರೀ
ವಸಂತಕುಮಾರ್ ಕತಗಾಲ
ಕಾರವಾರ(ಏ.11): ರಾಮಾಯಣಕ್ಕೆ ಪ್ರಮಾಣೀಕೃತ ಗ್ರಂಥ ಅಂದರೆ ವಾಲ್ಮೀಕಿ ರಾಮಾಯಣ. ವಾಲ್ಮೀಕಿ ರಾಮಾಯಣದಲ್ಲೇ ಆಂಜನೇಯನ ಜನ್ಮಭೂಮಿ ಗೋಕರ್ಣ ಎಂಬ ಬಗ್ಗೆ ಉಲ್ಲೇಖ ಇದೆ. ಹೀಗಾಗಿ ಗೋಕರ್ಣ ಆಂಜನೇಯನ ಜನ್ಮಭೂಮಿ. ಅಂಜನಾದ್ರಿ ಆಂಜನೇಯನ ಕರ್ಮಭೂಮಿ.
ರಾಮಾಯಣ, ರಾಮ, ಆಂಜನೇಯನ ಬಗ್ಗೆ ವಾಲ್ಮೀಕಿ ರಾಮಾಯಣವನ್ನು ಆಧಾರವನ್ನಾಗಿಟ್ಟುಕೊಂಡು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಶ್ರೀಗಳು ಸ್ಪಷ್ಟವಾಗಿ ಹೀಗೆ ಅಭಿಪ್ರಾಯ ಪಡುತ್ತಾರೆ. ಆಂಜನೇಯನ ಜನ್ಮಭೂಮಿ ಗೋಕರ್ಣ ಎನ್ನುವುದಕ್ಕೆ ಬೇರೆ ಯಾವ ಪುರಾವೆಯೂ ಬೇಕಿಲ್ಲ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.
ಶ್ರೀಗಳು ಸುಂದರಕಾಂಡದ ಶ್ಲೋಕಗಳನ್ನು ಹೀಗೆ ಉದಾಹರಿಸುತ್ತಾರೆ. ಸೀತಾಮಾತೆಯನ್ನು ಆಂಜನೇಯ ಮೊದಲ ಬಾರಿಗೆ ನೋಡಿದಾಗ ತನ್ನ ಪರಿಚಯವನ್ನು ಹೇಳುತ್ತ ಮೌಲ್ಯವಂತವು ಶ್ರೇಷ್ಠವಾದ ಪರ್ವತ. ಕೇಸರಿ ಎಂಬ ಕಪೀಶ್ವರನು ಅಲ್ಲಿಂದ ಗೋಕರ್ಣ ಶತಶೃಂಗ ಪರ್ವತಕ್ಕೆ ಹೋದನು. ಪುಣ್ಯಕ್ಷೇತ್ರವಾದ ಗೋಕರ್ಣದಲ್ಲಿ ಯಾತ್ರಿಗಳಿಗೆ ತೊಂದರೆ ಉಂಟುಮಾಡುತ್ತಿದ್ದ ಶಂಬಸಾದನ ಎಂಬ ರಾಕ್ಷಸನನ್ನು ಸಂಹರಿಸುವಂತೆ ದೇವರ್ಷಿಗಳು ಕಪಿಶ್ರೇಷ್ಠನಾದ ನನ್ನ ತಂದೆಗೆ ಆಜ್ಞೆ ಮಾಡಿದರು. ಅವರ ಆಜ್ಞೆಯಂತೆ ತಂದೆಯು ಶಂಬಸಾದನನನ್ನು ಸಂಹರಿಸಿದರು. ಆ ಬಳಿಕ ಅಲ್ಲಿಯೇ ಪರಾಕ್ರಮಿಯಾದ ಕೇಸರಿಯ ಪತ್ನಿಯಾದ ಅಂಜನಾದೇವಿಯಲ್ಲಿ ಜನಿಸಿದೆನು. ತನ್ನ ಪರಾಕ್ರಮದಿಂದ ಲೋಕದಲ್ಲಿ ನಾನು ಹನುಮಂತ ಎಂಬ ಹೆಸರಿನಿಂದ ಖ್ಯಾತನಾಗಿದ್ದೇನೆ ಎಂದು ವಿವರಿಸುತ್ತಾನೆ.
ಸುಂದರಕಾಂಡದ 35ನೇ ಸರ್ಗದ 80,91,82ನೇ ಮತ್ತು 89ನೇ ಶ್ಲೋಕಗಳಲ್ಲಿ ಇದರ ಬಗ್ಗೆ ವಿವರಣೆ ಇದೆ.
ಮೌಲ್ಯವಾನ್ನಾಮ ವೈದೇಹಿ ಗಿರೀಣಾಮುತ್ತಮೋ ಗಿರಿಃ
ತತೋ ಗಚ್ಛತಿ ಗೋಕರ್ಣಂ ಪರ್ವತಂ ಕೇಸರಿ ಹರಿಃ
ಸ ಚ ದೇವರ್ಷಿಭಿರ್ದಿಷ್ಠಃ ಪಿತಾ ಮಮ ಮಹಾಕಪಿಃ
ತೀರ್ಥೇ ನದೀಪತೇಃ ಪುಣ್ಯೇ ಶಂಬಸಾದನಮುದ್ಧರತ್
ತಸ್ಯಾಹಂ ಪರಿಣ ಕ್ಷೇತ್ರೇ ಜಾತೋ ವಾತೇನ ಮೈಥಿಲಿ
ಹತೇ ಸುರೇ ಸಂಯತಿ ಶಂಬಸಾದನೇ ಕಪಿಪ್ರವೀರೇಣ
ಮಹರ್ಷಿಚೋದನಾತ್ ತತೋಸ್ಮಿ ವಾಯುಪ್ರಭವೋ ಹಿ
ಮೇಥಿಲಿ ಪ್ರಭಾವತಸ್ತಪ್ರತಿಮಶ್ಚ ವಾನರಃ
ಇಷ್ಟುಸ್ಪಷ್ಟವಾಗಿ ಉಲ್ಲೇಖವಾಗಿರುವುದರಿಂದ ಆಂಜನೇಯನ ಜನ್ಮಭೂಮಿ ಗೋಕರ್ಣ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆಂಜನೇಯನ ಜನ್ಮಭೂಮಿ ಗೋಕರ್ಣ ಕುಡ್ಲೆ ಸಮುದ್ರ ತೀರದಲ್ಲಿರುವ ಕೇಸರಿವನದಲ್ಲಿದೆ. ಕಳೆದ 8 ವರ್ಷಗಳಿಂದ ಇಲ್ಲಿ ಪ್ರತಿದಿನ ಪೂಜೆ ನಡೆಯುತ್ತಿದೆ. ಹಗಲಿರುಳೆನ್ನದೆ ಅಖಂಡ ರಾಮತಾರಕ ಜಪ ನಡೆಸಿರುವುದು ಇಲ್ಲಿನ ವಿಶೇಷತೆಯಾಗಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ಆಂಜನೇಯನ ಜನ್ಮಸ್ಥಳದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಆಂಜನೇಯನ ಬೃಹತ್ ಪ್ರತಿಮೆಯೂ ಅಲ್ಲಿ ಸ್ಥಾಪನೆಯಾಗಲಿದೆ.