ಯುಪಿಯಲ್ಲಿ ಸಿಕ್ಕಿದ್ದು 3000 ಟನ್ ಅಲ್ಲ| ಬೃಹತ್ ಚಿನ್ನದ ನಿಕ್ಷೇಪ ಇರುವ ಸುದ್ದಿ ತಳ್ಳಿಹಾಕಿದ ಭೂ ಸರ್ವೇಕ್ಷಣಾ ಇಲಾಖೆ
ಕೋಲ್ಕತಾ/ಸೋನ್‌ಭದ್ರಾ[ಫೆ.23]: ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯ ಗಣಿಗಳಲ್ಲಿ ಸುಮಾರು 3,000 ಟನ್ ಚಿನ್ನದ ಸಂಗ್ರಹ ಇದೆ ಎಂಬ ಸುದ್ದಿಯನ್ನು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ಶನಿವಾರ ನಿರಾಕರಿಸಿದ್ದು, ಬದಲಾಗಿ ಅಲ್ಲಿರುವುದು 160 ಕೆ.ಜಿ. ಚಿನ್ನ ಎಂಬ ಸ್ಪಷ್ಟನೆ ನೀಡಿದೆ.
ಸೋನ್‌ಭದ್ರಾ ಜಿಲ್ಲಾ ಗಣಿ ಅಧಿಕಾರಿ ಕೆ.ಕೆ. ರಾಯ್ ಅವರು ಸೋನ್ ಪಹಾಡಿ ಮತ್ತು ಹಾರ್ಡಿಯಲ್ಲಿನ ಗಣಿಗಳಲ್ಲಿ ಸುಮಾರು 3000 ಟನ್‌ನಷ್ಟುಚಿನ್ನದ ಸಂಗ್ರಹಣೆ ಇದೆ. ಸೊನ್ ಪಹಾಡಿಯಲ್ಲಿ 2,943.26 ಕೆ.ಜಿ. ಚಿನ್ನ ಮತ್ತು ಹಾರ್ಡಿಯಲ್ಲಿ 646.16 ಕೆ.ಜಿ. ಚಿನ್ನದ ಸಂಗ್ರಹಣೆ ಇದೆ ಎಂದು ಹೇಳಿದ್ದರು.
ಭಾರತದಲ್ಲಿ 3500 ಟನ್ ಚಿನ್ನದ ನಿಕ್ಷೇಪ ಏನಿದರ ಹಕೀಕತ್ತು!?
ಆದರೆ, ಈ ಸುದ್ದಿಗೆ ಸ್ಪಷ್ಟನೆ ನೀಡಿರುವ ಜಿಎಸ್‌ಐ ನಿರ್ದೇಶಕ ಎಂ.ಶ್ರೀಧರ್, ಈ ರೀತಿಯ ಯಾವುದೇ ಮಾಹಿತಿಯನ್ನು ಭೂ ಸರ್ವೇಕ್ಷಣಾ ಇಲಾಖೆ ನೀಡಿಲ್ಲ. ಸೋನ್‌ಭದ್ರಾದಲ್ಲಿ ಬೃಹತ್ ಚಿನ್ನದ ನಿಕ್ಷೇಪ ಇರುವುದು ತಮ್ಮ ಇಲಾಖೆಯ ಗಮನಕ್ಕೆ ಬಂದಿಲ್ಲ. ಭೂ ಸರ್ವೇಕ್ಷಣಾ ಇಲಾಖೆಯ ಉತ್ತರ ವಲಯ ಸೋನ್‌ಭದ್ರಾ ಪ್ರದೇಶದಲ್ಲಿ 1998-99 ಮತ್ತು 1999-2000ರಲ್ಲಿ ಸರ್ವೇಕ್ಷಣೆ ನಡೆಸಿತ್ತು.
ನಮಗೆ ಲಭ್ಯವಾದ ಮಾಹಿತಿ ಪ್ರಕಾರ ಈ ಪ್ರದೇಶದಲ್ಲಿ 52,806 ಟನ್‌ಗಳಷ್ಟುಚಿನ್ನದ ಅದಿರು ಇರುವ ಅಂದಾಜಿದೆ. ಅದನ್ನು ಸಂಸ್ಕರಿಸಿದರೆ ಪ್ರತಿ ಟನ್‌ಗೆ 3.03 ಗ್ರಾಮ್ ಚಿನ್ನ ಲಭಿಸಲಿದೆ. ಹೀಗಾಗಿ ಸೋನ್‌ಭದ್ರಾ ಜಿಲ್ಲೆಯಲ್ಲಿ ಒಟ್ಟಾರೆ 160 ಕೆ.ಜಿ. ಚಿನ್ನ ಲಭ್ಯವಾಬಹುದು. ಆದರೆ, 3,350 ಟನ್ ಚಿನ್ನ ಇದೆ ಎಂಬ ಸುದ್ದಿಗೆ ಯಾವುದೇ ಆಧಾರ ಇಲ್ಲ ಎಂದು ಹೇಳಿದ್ದಾರೆ.
